ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋ ತ್ಸವದ ಗಜಪಡೆ ಮಾವುತರು ಮತ್ತು ಕಾವಾಡಿಗಳಿಗೆ ಏರ್ಪಡಿಸಿದ್ದ ಉಪಹಾರ ಕೂಟಕ್ಕೆ ಸಮಯಕ್ಕೆ ಬಾರದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರ ನಡೆ ಖಂಡಿಸಿ ಶಾಸಕ ತನ್ವೀರ್ ಸೇಠ್ ಅಸಮಧಾನ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರನಡೆದ ಘಟನೆ ನಡೆಯಿತು.

ಅಂಬ ವಿಲಾಸ ಅರಮನೆ ಆವರಣದಲ್ಲಿ ಸೋಮವಾರ ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿ ಕುಟುಂಬಕ್ಕೆ ಎಂದಿನಂತೆ ಜಿಲ್ಲಾಡಳಿತದ ವತಿಯಿಂದ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮಾವುತರನ್ನು ಕೂರಿಸಿ ಬಾಳೆ ಎಲೆ ಕೂಡ ಹಾಕಲಾಗಿತ್ತು. ಆದರೆ ಸಚಿವ ಯತೀಂದ್ರ ಸಿದ್ದರಾಮಯ್ಯ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಆಗಮಿಸಿದ್ದು ಅಸಮಾಧಾನಕ್ಕೆ ಕಾರಣವಾಯಿತು.

ಸಮಯ ಪ್ರಜ್ಞೆ ಇಲ್ವೇನ್ರಿ: ಔತಣ ಕೂಟಕ್ಕೆ ಅರ್ಧ ಗಂಟೆಗೆ ಹೆಚ್ಚು ಕಾಲ ಕಾದುನಿಂತಿದ್ದ ಶಾಸಕ ತನ್ವೀರ್ ಸೇಠ್, ಬಳಿಕ ಕೋಪಗೊಂಡು ಅಲ್ಲಿಂದ ಹೊರಟಿದ್ದಾರೆ. ಸಮಯ ಪ್ರಜ್ಞೆ ಇರಬೇಕು, ಸಮಯ ಪ್ರಜ್ಞೆ ಇಲ್ಲ ಅಂದ್ರೆ ಏನ್ಮಾಡಬೇಕು? ಬೇರೆ ಕಾರ್ಯಕ್ರಮ ಆದರೆ ಹೇಗೊ ಸರಿ? ಇಂತಹ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರೆ ಅದರ ಅರ್ಥ ಏನು? ಇದನ್ನೆಲ್ಲ ಸಹಿಸಿಕೊಳ್ಳಲು ಆಗಲ್ಲ. ಮಾವುತರನ್ನ ಹೀಗೆ ಕಾಯಿಸುವುದಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು. 9.45ರವರೆಗೂ ಕಾದಿದ್ದ ತನ್ನೀರ್ ಸೇಠ್, ಜಿಲ್ಲಾಧಿಕಾರಿಗೆ ಕರೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.

"ಸಮಯ ಪ್ರಜ್ಞೆ ಇಲ್ವೇನ್ರಿ? ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್" ಎಂದು ಅವರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮಾವುತರು ಕಾಡಿನ ಜನರು, ಅವರಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಆಗಬೇಕು ಎಂದು ಶಾಸಕರು ಪ್ರತಿಪಾದಿಸಿದರು. ನಂತರ ತನ್ವೀರ್ ಸೇಠ್ ಉಪಾಹಾರ ಕೂಟ ಸ್ಥಳದಿಂದ ತೆರಳಿದರು. ನಂತರ 10 ಗಂಟೆಗೆ ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿ, ಮಾಜಿ ಸಚಿವ ಜಿ.ಟಿ.ದೇವೇಗೌಡರೊಂದಿಗೆ ಉಪಾಹಾರ ಕೂಟದಲ್ಲಿ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor