ಜಪಾನ್ ನಲ್ಲಿ ಪ್ರಬಲ ಭೂಕಂಪ : ಮೃತರ ಸಂಖ್ಯೆ 13ಕ್ಕೆ ಏರಿಕೆ
ಮುಂದುವರಿದ ರಕ್ಷಣಾ ಕಾರ್ಯಾಚರಣೆ
Photo | Reuters
ಕುಮಮೋಟೊ: ಮಂಗಳವಾರ ದಕ್ಷಿಣ ಜಪಾನ್ ನಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಘಟನೆಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಪ್ರಬಲ ಭೂಕಂಪನದಿಂದ ಸಾವಿರಾರು ಮನೆಗಳು ನೆಲಸಮಗೊಂಡಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ.
ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿವೆ.
ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಕುಮಮೊಟೊ ಪ್ರಾಂತದ ಕಾಶಿಮಾ ಪಟ್ಟಣದಲ್ಲಿರುವ `ಅಯಾನ್ ಮಾಲ್' ನಲ್ಲಿ ಸ್ಫೋಟ ಸಂಭವಿಸಿದೆ. ಮಾಲ್‍ನ ಎರಡನೇ ಮಹಡಿ ಕುಸಿದು ಬಿದ್ದು, 20ರ ಹರೆಯದ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ. ಭಾಗಶಃ ಕುಸಿದು ಬಿದ್ದಿರುವ ಮಾಲ್ ನ ಅವಶೇಷಗಳಡಿಯಿಂದ 8 ಮಂದಿಯನ್ನು ರಕ್ಷಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಪಾನ್ ಪ್ರಧಾನಿ ಸನೇ ತಕೈಚಿ, “ಅವಶೇಷಗಳಡಿಯಿಂದ ಹಲವಾರು ಮಂದಿಯನ್ನು ರಕ್ಷಿಸಬೇಕಾಗಿದೆ. ಇದು ಸಮಯದೊಂದಿಗಿನ ಹೋರಾಟವಾಗಿದೆ. ಎಷ್ಟು ಜನರನ್ನು ಸಾಧ್ಯವೊ ಅಷ್ಟು ಜನರನ್ನು ರಕ್ಷಿಸಲು ನಾವು ಸ್ಥಳದಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನೂ ನಿಯೋಜಿಸಲಿದ್ದೇವೆ” ಎಂದು ತಿಳಿಸಿದ್ದಾರೆ.