'ಮಹಿಳೆಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ ಎಂಬ ಕಾರಣಕ್ಕೆ ಅಧಿಕಾರಿಯನ್ನು ಕಳಂಕಿತಗೊಳಿಸಲಾಗದು' : ಸಂದೀಪ್ ಲಾಂಬಾ ವಿರುದ್ಧದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

Update: 2026-07-29 10:29 IST

ದಿಲ್ಲಿ ಹೈಕೋರ್ಟ್‌ (Photo: PTI)

ಹೊಸದಿಲ್ಲಿ: ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ ಎಂಬ ಕಾರಣಕ್ಕೆ ಮಾತ್ರ ಪೊಲೀಸ್ ಅಧಿಕಾರಿಯೊಬ್ಬರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್  ಹೇಳಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಕರೆ ನೀಡಿದ್ದ 'ಚಲೋ ಸಂಸದ್' ಮೆರವಣಿಗೆಯ ವೇಳೆ ದಿಲ್ಲಿ ಹೆಚ್ಚುವರಿ ಡಿಸಿಪಿ ಸಂದೀಪ್ ಲಾಂಬಾ ಅವರು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಘಟನೆಯ ಬಳಿಕ ಅವರ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ, 2025ರ ಅಕ್ರಮ ಬಂಧನ ಪ್ರಕರಣದ ವಿಚಾರಣೆಯಿಂದ ಲಾಂಬಾ ಅವರನ್ನು ಹಿಂದೆ ಸರಿಸಿ, ಸ್ವತಂತ್ರ ಅಧಿಕಾರಿಗೆ ತನಿಖೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ವಜಾಗೊಳಿಸಿದರು.

ಅರ್ಜಿದಾರರ ಪರ ವಕೀಲ ಎಂ. ಸುಫಿಯಾನ್ ಸಿದ್ದಿಕಿ, 2025ರಲ್ಲಿ ತಮ್ಮ ಕಕ್ಷಿದಾರರ ಅಕ್ರಮ ಬಂಧನ ಪ್ರಕರಣದ ವಿಚಾರಣೆ ನ್ಯಾಯಯುತವಾಗಿ ನಡೆಯಲಿದೆ ಎಂಬ ವಿಶ್ವಾಸ, ಲಾಂಬಾ ಅವರ ನಡೆ ಬೆಳಕಿಗೆ ಬಂದ ನಂತರ ಸಂಪೂರ್ಣವಾಗಿ ಕುಸಿದಿದೆ. ಆದ್ದರಿಂದ ವಿಚಾರಣೆಯನ್ನು ಸ್ವತಂತ್ರ ಅಧಿಕಾರಿಗೆ ವಹಿಸಬೇಕು ಎಂದು ವಾದಿಸಿದರು.

ಆದರೆ, ಪೊಲೀಸ್ ಅಧಿಕಾರಿಗೂ ನ್ಯಾಯಯುತ ವಿಚಾರಣೆಯ ಹಕ್ಕಿದೆ. ಅವರು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ ಎಂಬ ಕಾರಣಕ್ಕೆ ಮಾತ್ರ ಪ್ರತಿಯೊಂದು ಪ್ರಕರಣದಲ್ಲೂ ಅವರು ಪಕ್ಷಪಾತಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

"ಅವರು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಯಾವುದೋ ವೀಡಿಯೊ ಕ್ಲಿಪ್‌ನಲ್ಲಿ ಕಂಡುಬಂದಿದೆ ಎಂಬ ಕಾರಣಕ್ಕೆ ಮಾತ್ರ ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಲು ಸಾಧ್ಯವಿಲ್ಲ. ನೆಲದ ವಾಸ್ತವ ಸ್ಥಿತಿ ನಮಗೆ ತಿಳಿದಿದೆಯೇ? ಜನಸಮೂಹ ಸಂಸತ್ತಿನೊಳಗೆ ಪ್ರವೇಶಿಸಿದ್ದರೆ ಗುಂಡಿನ ದಾಳಿ ನಡೆಯಬಹುದಿತ್ತು. ಅನೇಕ ಮಂದಿ ಸಾವಿಗೀಡಾಗುವ ಸಾಧ್ಯತೆಯಿತ್ತು" ಎಂದು ನ್ಯಾಯಾಲಯ ಹೇಳಿತು.

"ಪ್ರತಿಭಟಿಸುವುದು ಮೂಲಭೂತ ಹಕ್ಕು. ಆದರೆ ಅದು ಸಾರ್ವಭೌಮತ್ವದ ಸ್ಥಾನಕ್ಕೆ ಧಕ್ಕೆ ಉಂಟುಮಾಡುವ ಮಟ್ಟಿಗೆ ವಿಸ್ತರಿಸುವುದಿಲ್ಲ. ಪ್ರತಿಭಟನಾಕಾರರು ಸಾರ್ವಭೌಮತ್ವದ ಕೇಂದ್ರದತ್ತ ಸಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಅವರು ಜನಸಮೂಹವನ್ನು ಹೇಗೆ ನಿಯಂತ್ರಿಸಿದರು ಎಂಬುದು ಅಧಿಕಾರದ ಅತಿಯಾದ ಬಳಕೆಯ ಪ್ರಕರಣವಾಗಿದ್ದರೂ, ಅದನ್ನೇ ಆಧಾರವಾಗಿಸಿಕೊಂಡು ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಲಾಗದು," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅರ್ಜಿದಾರರ ಪರ ವಕೀಲರು, ಪೊಲೀಸ್ ಅಧಿಕಾರಿಯ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶ ಇಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, "ಬೇರೆ ಘಟನೆಯಲ್ಲಿ ಅವರು ಯಾರಿಗಾದರೂ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ ಎಂಬ ಕಾರಣಕ್ಕೆ ನಾನು ವಿಚಾರಣೆಯನ್ನು ವರ್ಗಾಯಿಸಿದರೆ, ಅದು ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಿದಂತಾಗುವುದಿಲ್ಲವೇ? ಅವರ ಮಾತನ್ನು ಕೇಳುವ ಮೊದಲೇ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದಂತಾಗುತ್ತದೆ," ಎಂದು ಪ್ರಶ್ನಿಸಿತು.

ಅಧಿಕಾರಿಗಳ ಪರ ವಕೀಲರು, ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ವಿಚಾರಣೆ ಪೂರ್ಣಗೊಂಡಿದ್ದು, ಅಂತಿಮ ತೀರ್ಮಾನಕ್ಕಾಗಿ ಪ್ರಕರಣವನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಹೀಗಾಗಿ ಅರ್ಜಿಯಲ್ಲಿ ಪರಿಗಣಿಸಬೇಕಾದ ಯಾವುದೇ ವಿಷಯ ಉಳಿದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿಯಲ್ಲಿ ಏನಿದೆ?

68 ವರ್ಷದ ಜರ್ನಿಗರ್ ಫಾತಿಮಾ ಅವರು, 2025ರ ಮಾರ್ಚ್‌ 24 ಮತ್ತು 25ರ ಮಧ್ಯರಾತ್ರಿ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿತ್ತು ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಪೊಲೀಸ್ ದೌರ್ಜನ್ಯ ಕುರಿತ ಆರೋಪಗಳ ಬಗ್ಗೆ ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತಿರುವ ವಿಚಾರಣೆಗೆ ಸಂದೀಪ್ ಲಾಂಬಾ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿತ್ತು.

ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿರುವ ವೃದ್ಧ ಮಹಿಳೆಯೊಬ್ಬರು, ಲಾಂಬಾ ಅವರ ನಡವಳಿಕೆಗೆ ಸಂಬಂಧಿಸಿದ ಬಳಿಕದ ಬೆಳವಣಿಗೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವು ತಮ್ಮ ದೂರಿನ ತನಿಖೆ ನಡೆಸುತ್ತಿರುವ ಪ್ರಾಧಿಕಾರದ ಮೇಲಿನ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

"ವಿಚಾರಣೆ ಬಾಕಿ ಇರುವಾಗಲೇ, ಪ್ರತಿವಾದಿ ಸಂಖ್ಯೆ–2 ಹಾಗೂ ಹೆಚ್ಚುವರಿ ಡಿಸಿಪಿ ಸಂದೀಪ್ ಲಾಂಬಾ ಅವರು ಸಮವಸ್ತ್ರದಲ್ಲಿದ್ದ ಮಹಿಳೆಯೊಬ್ಬರಿಗೆ ಹಗಲು ಹೊತ್ತಿನಲ್ಲಿ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ದೃಶ್ಯಗಳು ವ್ಯಾಪಕವಾಗಿ ಪ್ರಸಾರವಾಗಿದ್ದು, ಮಾಧ್ಯಮಗಳಲ್ಲಿಯೂ ವರದಿಯಾಗಿವೆ. ಬಳಿಕ ಅವರ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಇಂತಹ ಬೆಳವಣಿಗೆಗಳ ನಂತರವೂ ಅದೇ ವಿಚಾರಣಾಧಿಕಾರಿಯ ಮೇಲಿನ ವಿಶ್ವಾಸದೊಂದಿಗೆ ಅರ್ಜಿದಾರರು ವಿಚಾರಣೆಯಲ್ಲಿ ಭಾಗವಹಿಸುವುದನ್ನು ಸಮಂಜಸವಾಗಿ ನಿರೀಕ್ಷಿಸಲಾಗದು," ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನ್ಯಾಯ ಸಿಗಬೇಕು ಮಾತ್ರವಲ್ಲ, ಅದು ಸಿಗುತ್ತಿರುವುದು ಕಾಣಬೇಕು. ನ್ಯಾಯ, ನಿಷ್ಪಕ್ಷಪಾತತೆ ಮತ್ತು ಸಾಂಸ್ಥಿಕ ಸಮಗ್ರತೆಯ ತತ್ವಗಳಿಗೆ ಅನುಗುಣವಾಗಿ ವಿಚಾರಣೆಯನ್ನು ಸಂದೀಪ್ ಲಾಂಬಾ ಅವರಿಂದ ಹಿಂತೆಗೆದು ಸ್ವತಂತ್ರ ಅಧಿಕಾರಿಗೆ ವಹಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News