ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದು ಸಹಜ: CJP ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ರಾಜ್ಯಸಭೆಯಲ್ಲಿ ಸಮರ್ಥಿಸಿದ ಜೆಪಿ ನಡ್ಡಾ
ಹೊಸದಿಲ್ಲಿ : ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಕ್ರಮ ಅಗತ್ಯವಾಗಿತ್ತು ಎಂದು ಹೇಳುವ ಮೂಲಕ ಸಿಜೆಪಿ ಪ್ರತಿಭಟನಾಕಾರರ ಮೇಲೆ ನಡೆದ ಬಲಪ್ರಯೋಗವನ್ನು ಕೇಂದ್ರ ಸಚಿವ ಜೆ ಪಿ ನಡ್ಡಾ ರಾಜ್ಯಸಭೆಯಲ್ಲಿ ಬುಧವಾರ ಸಮರ್ಥಿಸಿದ್ದಾರೆ.
ಸಿಜೆಪಿ ಪ್ರತಿಭಟನಾಕಾರರ ಮೇಲೆ ನಡೆದ ಬಲಪ್ರಯೋಗ ಮತ್ತು ವಿದ್ಯಾರ್ಥಿ ನಾಯಕಿಯನ್ನು ಬಂಧಿಸಲು ಸಿಪಿಎಂ ಕಚೇರಿಗೆ ದಿಲ್ಲಿ ಪೋಲೀಸರು ಭೇಟಿ ನೀಡಿರುವ ಬಗ್ಗೆ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಎತ್ತಿದ ಪ್ರಶ್ನೆಯ ಬಳಿಕ , ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಖರ್ಗೆ , "ಪ್ರಜಾಪ್ರಭುತ್ವವೂ ಸುರಕ್ಷಿತವಾಗಿಲ್ಲ, ಜನರೂ ಸುರಕ್ಷಿತವಾಗಿಲ್ಲ," ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಜೆಪಿ ನಡ್ಡಾ , ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಕ್ರಮ ಅಗತ್ಯವಾಗಿತ್ತು ಎಂದು ಸಮರ್ಥಿಸುತ್ತಾ, ತುರ್ತುಸ್ಥಿತಿಯ ಸಮಯದಲ್ಲಿ ತಾವೂ ಕೂಡ ಬಂಧನಕ್ಕೊಳಗಾಗಿದ್ದ ಸ್ವಂತ ಅನುಭವವನ್ನು ನೆನಪಿಸಿಕೊಂಡರು.
“ಸಾಮಾಜಿಕ ಕಳಕಳಿಯಿಂದ ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ಪೊಲೀಸ್ ಕ್ರಮವನ್ನು ಎದುರಿಸಲು ಸಿದ್ಧರಿರಬೇಕು. ತುರ್ತುಸ್ಥಿತಿಯ ಸಮಯದಲ್ಲಿ ವಿದ್ಯಾರ್ಥಿ ಹೋರಾಟಗಾರನಾಗಿದ್ದಾಗ ನನ್ನನ್ನು ತರಗತಿಯಿಂದಲೇ ಎರಡು ಬಾರಿ ವಶಕ್ಕೆ ಪಡೆಯಲಾಗಿತ್ತು” ಎಂದು ನಡ್ಡಾ ಹೇಳಿದ್ದಾರೆ.
“ಕಾನೂನು ಮತ್ತು ಸುವ್ಯವಸ್ಥೆಯನ್ನು ಹತೋಟಿಗೆ ತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಪೊಲೀಸರ ನಡೆ ಸಮರ್ಥನೀಯವಾಗಿದೆ “ಎಂದು ಅವರು ಹೇಳಿದರು