Uttar Pradesh | 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ 78 ವರ್ಷದ ವ್ಯಕ್ತಿಗೆ ಮುಕ್ತಿ
ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದ NIA ವಿಶೇಷ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಲಕ್ನೋ: ದೇಶದ್ರೋಹ ಮತ್ತು ಕೋಮು ದ್ವೇಷ ಪ್ರಚೋದನೆ ಆರೋಪದಡಿ 33 ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದ ಗೋರಖ್‌ಪುರ ಜಿಲ್ಲೆಯ 78 ವರ್ಷದ ಮುಹಮ್ಮದ್ ನಯೀಮ್ ಅವರನ್ನು ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯ ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ಆರೋಪಗಳನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆರೋಪಿಯನ್ನು ಪ್ರಕರಣದೊಂದಿಗೆ ಸಂಪರ್ಕಿಸುವ ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
1993ರ ಜನವರಿ 26ರಂದು ಗೋರಖ್‌ಪುರದ ಇಸ್ಮಾಯಿಲ್‌ಪುರ ಪ್ರದೇಶದಲ್ಲಿ ಕೆಲವರು ಕಪ್ಪು ಧ್ವಜಗಳನ್ನು ಹಾರಿಸಿ, 'ಪಾಕಿಸ್ತಾನ ಜಿಂದಾಬಾದ್', 'ಗಣರಾಜ್ಯೋತ್ಸವ ಮುರ್ದಾಬಾದ್' ಸೇರಿದಂತೆ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು ಆಗಿನ ಕೊತ್ವಾಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಾಬರಿ ಮಸೀದಿ ಧ್ವಂಸದ ಉಲ್ಲೇಖ ಮಾಡಿ, 'ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಬೇಕು' ಎಂದು ಘೋಷಣೆ ಕೂಗಲಾಗಿದೆ ಹಾಗೂ ಕೋಮು ದ್ವೇಷ ಪ್ರಚೋದಿಸುವ ಹೇಳಿಕೆಗಳನ್ನು ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಈ ಪ್ರಕರಣದಲ್ಲಿ ಮುಹಮ್ಮದ್ ನಯೀಮ್, ಮುಹಮ್ಮದ್ ಯೂಸುಫ್, ಅತಾವುಲ್ಲಾ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದು, ನಾಲ್ಕು ಕಪ್ಪು ಧ್ವಜಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು.
ಪ್ರಕರಣದ ತನಿಖೆ ಹಲವು ವರ್ಷಗಳ ಕಾಲ ಮುಂದುವರಿಯಿತು. 2003ರಲ್ಲಿ ಮೊದಲ ತನಿಖಾಧಿಕಾರಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಅಂತಿಮ ವರದಿ ಸಲ್ಲಿಸಿದ್ದರು. ಆದರೆ ಆ ವರದಿಯನ್ನು ನ್ಯಾಯಾಲಯ ಒಪ್ಪದ ಕಾರಣ, 2005ರಲ್ಲಿ ಮತ್ತೊಬ್ಬ ತನಿಖಾಧಿಕಾರಿ ಯಾವುದೇ ಹೊಸ ಪುರಾವೆ ಸಂಗ್ರಹಿಸದೆ ನಯೀಮ್ ಹಾಗೂ ಅತಾವುಲ್ಲಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಯುವ ನಡುವೆಯೇ ಮತ್ತೊಬ್ಬ ಆರೋಪಿ ಅತಾವುಲ್ಲಾ ಮೃತಪಟ್ಟಿದ್ದು, ಬಳಿಕ ವಿಚಾರಣೆ ನಯೀಮ್ ವಿರುದ್ಧ ಮಾತ್ರ ಮುಂದುವರಿಯಿತು. ನಂತರ ನ್ಯಾಯವ್ಯಾಪ್ತಿಯ ಬದಲಾವಣೆಯಿಂದ ಪ್ರಕರಣವನ್ನು ಗೋರಖ್‌ಪುರದಿಂದ ಲಕ್ನೋದ ವಿಶೇಷ NIA ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳಲ್ಲಿ ಹಲವು ಗಂಭೀರ ಲೋಪಗಳಿರುವುದನ್ನು ನ್ಯಾಯಾಲಯ ಗುರುತಿಸಿತು. ಸ್ಥಳದಿಂದ ವಶಪಡಿಸಿಕೊಂಡಿದ್ದೇವೆ ಎಂದು ಹೇಳಲಾದ ನಾಲ್ಕು ಕಪ್ಪು ಧ್ವಜಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರಲಿಲ್ಲ. ಅವುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಜ್ಞಾಪಕ ಪತ್ರವನ್ನೂ ಸಲ್ಲಿಸಿರಲಿಲ್ಲ.
ಪ್ರಮುಖ ಸಾಕ್ಷಿಗಳಲ್ಲೊಬ್ಬರಾದ ಕಾನ್‌ಸ್ಟೆಬಲ್ ದುರ್ವಿಜಯ್ ಸಿಂಗ್ ಅವರು, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಘೋಷಣೆ ಕೂಗುತ್ತಿದ್ದವರು ಪರಾರಿಯಾಗಿದ್ದರು ಎಂದು ಪಾಟೀಸವಾಲಿನ ವೇಳೆ ಒಪ್ಪಿಕೊಂಡಿದ್ದರು. ದೂರುದಾರರಾಗಿದ್ದ ಆಗಿನ ಠಾಣಾಧಿಕಾರಿ ಪವನ್ ಕುಮಾರ್ ಸಿಂಗ್ ಅವರನ್ನು ಮುಖ್ಯ ಪರೀಕ್ಷೆಗೆ ಮಾತ್ರ ಹಾಜರುಪಡಿಸಲಾಗಿತ್ತು. ಪಾಟೀಸವಾಲಿಗೆ ಅವರನ್ನು ಹಾಜರುಪಡಿಸದಿರುವುದನ್ನೂ ನ್ಯಾಯಾಲಯ ಗಂಭೀರ ಲೋಪವೆಂದು ಪರಿಗಣಿಸಿತು.
ಎರಡನೇ ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಯಾವುದೇ ಹೊಸ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿರಲಿಲ್ಲ. ಹಿಂದಿನ ತನಿಖಾಧಿಕಾರಿ ಸಂಗ್ರಹಿಸಿದ್ದ ದಾಖಲೆಗಳ ಆಧಾರದ ಮೇಲೆಯೇ ಆರೋಪಪಟ್ಟಿ ಸಲ್ಲಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಎಲ್ಲರೂ ಪರಾರಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ ಸಾಕ್ಷಿಗಳೇ ಹೇಳಿರುವಾಗ, ಆರೋಪಿಗಳನ್ನು ಪೊಲೀಸರು ಹೇಗೆ ಗುರುತಿಸಿದರು ಎಂಬುದನ್ನು ಪ್ರಾಸಿಕ್ಯೂಷನ್ ವಿವರಿಸಲು ಸಾಧ್ಯವಾಗಿಲ್ಲ. ನಯೀಮ್ ಅವರನ್ನು ಪ್ರಕರಣದೊಂದಿಗೆ ಸಂಪರ್ಕಿಸುವ ಯಾವುದೇ ಸ್ವತಂತ್ರ ಸಾಕ್ಷಿಯನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಎಲ್ಲ ಕಾರಣಗಳಿಂದ ಆರೋಪಗಳನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಲಯ, ಮುಹಮ್ಮದ್ ನಯೀಮ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತು. ಅವರ ಜಾಮೀನು ಬಾಂಡ್ ಗಳನ್ನು ರದ್ದುಗೊಳಿಸಿದರೂ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 437ಎ ಅಡಿಯಲ್ಲಿ ಆರು ತಿಂಗಳವರೆಗೆ ಶಾಸನಬದ್ಧ ಬಾಂಡ್ ಜಾರಿಯಲ್ಲಿರಲಿದೆ ಎಂದು ನಿರ್ದೇಶಿಸಿತು.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಭಾವುಕರಾದ ಮುಹಮ್ಮದ್ ನಯೀಮ್, "33 ವರ್ಷಗಳಿಂದ ನಾನು ನಿರಪರಾಧಿ ಎಂದು ಹೇಳುತ್ತಲೇ ಇದ್ದೆ. ಇಂದು ನ್ಯಾಯ ಸಿಕ್ಕಿದೆ. ಇನ್ನು ಮುಂದೆ ಜನರು ನನ್ನನ್ನು ದೇಶವಿರೋಧಿ ಎಂದು ಕರೆಯುವುದನ್ನು ನಿಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.