ಜುಲೈ 20ರ ಪ್ರತಿಭಟನೆ ವೇಳೆ ನಡೆದ ಕ್ರೌರ್ಯದ ಕುರಿತು ಮಾತನಾಡಿ : ಪ್ರಧಾನಿ ಮೋದಿಗೆ ಅಭಿಜೀತ್ ದೀಪ್ಕೆ ಆಗ್ರಹ
"ಪ್ರಧಾನಿ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸುತ್ತಾರೆಂದು ನಾನು ಭಾವಿಸುತ್ತೇನೆ"
ಹೊಸ ದಿಲ್ಲಿ: ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಮಾಡಿದ್ದ ವಿಡಿಯೊವನ್ನು ಉಲ್ಲೇಖಿಸಿರುವ ಕಾಕ್ರೋಚ್ ಜನತಾ ಪಾರ್ಟಿಯ ಮುಖ್ಯಸ್ಥ ಅಭಿಜೀತ್ ದೀಪ್ಕೆ, ಜುಲೈ 20ರಂದು ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರು ಕೈಗೊಂಡ ಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಕ್ಷಮೆ ಯಾಚಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡಿರುವ ಅಭಿಜೀತ್ ದೀಪ್ಕೆ, “ಎಲ್ಲಾ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ವಿಡಿಯೊವನ್ನು ನಾವೆಲ್ಲ ನೋಡಿದ್ದೇವೆ. ಜುಲೈ 20ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಕ್ರೌರ್ಯದ ಕುರಿತು ಅವರು ಕ್ಷಮೆ ಕೋರಲಿದ್ದಾರೆ ಎಂಬ ನಾನು ಭರವಸೆ ನನಗಿದೆ" ಎಂದು ಹೇಳಿದ್ದಾರೆ.
ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ಅಭಿಜೀತ್ ದೀಪ್ಕೆ, ವಿದ್ಯಾರ್ಥಿಗಳ ಬಟ್ಟೆಗಳನ್ನು ಹರಿಯಲಾಗಿದೆ ಮತ್ತು ಮಹಿಳಾ ಪ್ರತಿಭಟನಾಕಾರರನ್ನು ಥಳಿಸಲಾಗಿದೆ ಎಂದು ಹೇಳಿದ್ದಾರೆ.
“12 ವರ್ಷದ ವಿದ್ಯಾರ್ಥಿಯ ತಲೆಯ ಮೇಲೆ ಪೊಲೀಸರು ಹೊಡೆದಿದ್ದಾರೆ. ಮಹಿಳೆಯರ ಬಟ್ಟೆಗಳನ್ನು ಹರಿಯಲಾಗಿದೆ, ಮಹಿಳಾ ಪ್ರತಿಭಟನಾಕಾರರ ಗುಪ್ತಾಂಗಗಳಿಗೆ ಥಳಿಸಲಾಗಿದೆ. ಹೀಗಾಗಿ, ಇಂದು ರಾತ್ರಿಯ ವಿಡಿಯೊ ಸಂದೇಶದಲ್ಲಿ ಪ್ರಧಾನಿ ಮೋದಿ ಹಲ್ಲೆಗೊಳಗಾದ ಎಲ್ಲ ಮಹಿಳಾ ಪ್ರತಿಭಟನಾಕಾರರ ಕ್ಷಮೆ ಯಾಚಿಸಲಿದ್ದಾರೆ ಎಂದು ಭಾವಿಸಿದ್ದೇನೆ” ಎಂದು ಹೇಳಿದ್ದಾರೆ.
“ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನನ್ನು ಹಾಗೂ ನನ್ನ ದಿವಂಗತ ತಾಯಿಯನ್ನು ನಿಂದಿಸಿದ ವಿದ್ಯಾರ್ಥಿಗಳನ್ನು ನಾನು ಕ್ಷಮಿಸಿದ್ದೇನೆ. ಇದಕ್ಕೆ ಕಾನೂನು ಕ್ರಮ ಪರಿಹಾರವಲ್ಲ. ಬದಲಿಗೆ, ದಾರಿ ತಪ್ಪಿದ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಪೋಸ್ಟ್ ಮಾಡಿದ ಬೆನ್ನಿಗೇ, ಅಭಿಜೀತ್ ದೀಪ್ಕೆಯಿಂದ ಈ ಹೇಳಿಕೆ ಹೊರ ಬಿದ್ದಿದೆ.