POKಯ ಬ್ರಾಡ್ ಪೀಕ್‌ ನಲ್ಲಿ ಹಿಮಕುಸಿತ: ದಾಖಲೆ ನಿರ್ಮಿಸಿದ್ದ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿ 10 ಮಂದಿ ಮೃತ್ಯು

Update: 2026-08-02 08:31 IST

Photo: x.com/NDTVWorld

ಹೊಸದಿಲ್ಲಿ: ಪಾಕಿಸ್ತಾನದ ಗಿಲ್ಗಿಟ್–ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಬ್ರಾಡ್ ಪೀಕ್ ಪರ್ವತದಲ್ಲಿ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ವಿಶ್ವದ ಖ್ಯಾತ ನೇಪಾಳಿ ಪರ್ವತಾರೋಹಿ ನಿರ್ಮಲ್ ‘ನಿಮ್ಸ್‌ಡೈ’ ಪುರ್ಜಾ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ಹಿಮಕುಸಿತ ಸಂಭವಿಸಿದ ಬಳಿಕ ಕಾಣೆಯಾಗಿದ್ದ ಪರ್ವತಾರೋಹಿಗಳ ಮೃತ್ಯುವನ್ನು ಅವರ ಸಾಹಸ ಅಭಿಯಾನಗಳನ್ನು ಆಯೋಜಿಸುವ ಎಲೈಟ್ ಎಕ್ಸ್‌ಪೆಡ್ ಕಂಪೆನಿ ರವಿವಾರ ಇನ್‌ಸ್ಟಾಗ್ರಾಂ ಪ್ರಕಟಣೆಯಲ್ಲಿ ದೃಢಪಡಿಸಿದೆ.

ಹಿಮಕುಸಿತ ಸಂಭವಿಸಿದ ಬಳಿಕ ಪುರ್ಜಾ ಮತ್ತು ಇತರ ಪರ್ವತಾರೋಹಿಗಳು ನಾಪತ್ತೆಯಾಗಿದ್ದರು. ಹಲವು ದಿನಗಳ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಯಾರೂ ಬದುಕುಳಿದಿಲ್ಲ ಎಂಬುದು ಖಚಿತವಾಗಿದೆ. ಘಟನೆಯ ಕೆಲವೇ ಗಂಟೆಗಳ ಮೊದಲು ಪುರ್ಜಾ ಅವರು NDTVಯ ಪತ್ರಕರ್ತ ವಿಷ್ಣು ಸೋಮ್ ಅವರಿಗೆ ಧ್ವನಿ ಸಂದೇಶ ಕಳುಹಿಸಿದ್ದರು. ಅದು ಅವರ ಕೊನೆಯ ಸಂದೇಶವಾಗಿರಬಹುದು ಎಂದು ವರದಿಗಳು ತಿಳಿಸಿವೆ.

‘ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ನಿರ್ಮಲ್ ‘ನಿಮ್ಸ್‌ಡೈ’ ಪುರ್ಜಾ ಮೃತಪಟ್ಟಿರುವುದನ್ನು ತೀವ್ರ ದುಃಖದಿಂದ ದೃಢಪಡಿಸುತ್ತಿದ್ದೇವೆ. ಅವರೊಂದಿಗೆ ಪರ್ವತಾರೋಹಣದಲ್ಲಿದ್ದ ಇತರ ಸದಸ್ಯರೂ ಬದುಕುಳಿದಿಲ್ಲ’ ಎಂದು ಎಲೈಟ್ ಎಕ್ಸ್‌ಪೆಡ್ ತಿಳಿಸಿದೆ.

‘ಈ ದುರಂತದಲ್ಲಿ ಪುರ್ಜಾ ಮಾತ್ರವಲ್ಲದೆ, ಅವರ ವಿಶ್ವಾಸಾರ್ಹ ಪರ್ವತಾರೋಹಣ ಸಹಚರ ಹಾಗೂ ಮಾರ್ಗದರ್ಶಕರಾದ ಪುರ್ ಬಹದ್ದೂರ್ ಗುರುಂಗ್ (ಯುಕ್ತ) ಮತ್ತು ನಿಮಾ ಶೆರ್ಪಾ ಸೇರಿದಂತೆ ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಮೃತರ ಕುಟುಂಬಗಳು, ಸ್ನೇಹಿತರು ಮತ್ತು ಆತ್ಮೀಯರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಅವರ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡುತ್ತೇವೆ’ ಎಂದು ಕಂಪೆನಿ ಹೇಳಿದೆ.

ಬ್ರಾಡ್ ಪೀಕ್ ಕಾರಕೋರಂ ಪರ್ವತಶ್ರೇಣಿಯಲ್ಲಿದ್ದು, ಪಾಕಿಸ್ತಾನದ ಗಿಲ್ಗಿಟ್–ಬಾಲ್ಟಿಸ್ತಾನ್ ಹಾಗೂ ಚೀನಾದ ಕ್ಸಿನ್‌ಜಿಯಾಂಗ್ ನಡುವಿನ ಗಡಿಭಾಗದಲ್ಲಿದೆ. ಕೆ2 ಪರ್ವತದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಈ ಶಿಖರದ ಪ್ರಮಾಣಿತ ವೆಸ್ಟ್ ರಿಡ್ಜ್ ಮಾರ್ಗದಲ್ಲಿ 21,600ರಿಂದ 21,850 ಅಡಿ ಎತ್ತರದ ನಡುವೆ ಹಿಮಕುಸಿತ ಸಂಭವಿಸಿದೆ.

ಪುರ್ಜಾ ಅವರ ನಿಧನದಿಂದ ವಿಶ್ವ ಪರ್ವತಾರೋಹಣ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಎಲೈಟ್ ಎಕ್ಸ್‌ಪೆಡ್ ಹೇಳಿದೆ. ‘ತಮ್ಮ ಧೈರ್ಯ, ವಿನಯ ಹಾಗೂ ಮಾನವ ಸಾಮರ್ಥ್ಯದ ಮೇಲಿನ ಅಚಲ ನಂಬಿಕೆಯ ಮೂಲಕ ಅವರು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು. ದೊಡ್ಡ ಕನಸು ಕಾಣಲು, ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಇಡಲು ಮತ್ತು ಮಿತಿಗಳನ್ನು ಮೀರಿ ಸಾಧಿಸಲು ಅವರು ಅನೇಕರನ್ನು ಪ್ರೇರೇಪಿಸಿದ್ದರು. ಅವರು ಸ್ಪರ್ಶಿಸಿದ ಅಸಂಖ್ಯಾತ ಜೀವನಗಳಲ್ಲಿ ಹಾಗೂ ಅವರು ಪ್ರೇರೇಪಿಸಿದ ಜನರಲ್ಲಿ ಅವರ ಪರಂಪರೆ ಸದಾ ಜೀವಂತವಾಗಿರಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ಪುರ್ಜಾ ಅವರು ಬ್ರಿಟನ್‌ನ ಗೂರ್ಖಾ ಬ್ರಿಗೇಡ್ ಹಾಗೂ ರಾಯಲ್ ಮೆರೀನ್ಸ್‌ನ ವಿಶೇಷ ದೋಣಿ ಸೇವೆ (SBS)ಯ ಮಾಜಿ ಸದಸ್ಯರಾಗಿದ್ದರು. ಬಳಿಕ ಪೂರ್ಣಾವಧಿಯ ಪರ್ವತಾರೋಹಿಯಾಗಿ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ್ದರು.

2019ರಲ್ಲಿ ‘ಪ್ರಾಜೆಕ್ಟ್ ಪಾಸಿಬಲ್’ ಅಭಿಯಾನದಡಿ ಕೇವಲ ಆರು ತಿಂಗಳು ಆರು ದಿನಗಳಲ್ಲಿ 8,000 ಮೀಟರ್‌ಗಿಂತ ಎತ್ತರದ ಎಲ್ಲ 14 ಶಿಖರಗಳನ್ನು ಏರುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. 2021ರಲ್ಲಿ ಕೆ2 ಪರ್ವತವನ್ನು ಮೊದಲ ಬಾರಿಗೆ ಚಳಿಗಾಲದಲ್ಲಿ ಯಶಸ್ವಿಯಾಗಿ ಏರಿದ 10 ಮಂದಿ ನೇಪಾಳಿ ಪರ್ವತಾರೋಹಿಗಳ ತಂಡದಲ್ಲೂ ಅವರು ಪ್ರಮುಖ ಸದಸ್ಯರಾಗಿದ್ದರು.

ಅವರ ಸಾಧನೆಗಳನ್ನು ಆಧರಿಸಿದ ‘14 ಪೀಕ್ಸ್: ನಥಿಂಗ್ ಈಸ್ ಇಂಪಾಸಿಬಲ್’ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರವು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿತ್ತು. ಇದರಿಂದ ಪುರ್ಜಾ ಆಧುನಿಕ ಪರ್ವತಾರೋಹಣ ಕ್ಷೇತ್ರದ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದರು. ಎತ್ತರದ ಶಿಖರಗಳ ಆರೋಹಣದತ್ತ ವಿಶ್ವದಾದ್ಯಂತ ಹೊಸ ತಲೆಮಾರಿನ ಆಸಕ್ತಿ ಮೂಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News