Mumbai | ʼಕಾಕ್ರೋಚ್ʼ ಪ್ರತಿಭಟನಾಕಾರರ ಬಿಡುಗಡೆಗೆ ಆಗ್ರಹಿಸಿ ಪೊಲೀಸ್ ವಾಹನದ ಮುಂದೆ 40 ನಿಮಿಷ ಅಚಲವಾಗಿ ನಿಂತ ರಿಯಾ ಅಹಿರ್; ವೀಡಿಯೋ ವೈರಲ್
Photo Credit : AP
ಮುಂಬೈ: ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರಿ ಉದ್ಯೋಗಗಳಿಗೆ ನಡೆಯುವ ದೇಶದ ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ 'ಕಾಕ್ರೋಚ್' ಪ್ರತಿಭಟನೆಯ ವೇಳೆ, ಬಂಧಿಸಲ್ಪಟ್ಟ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೂಪದರ್ಶಿಯಾಗಿರುವ ರಿಯಾ ಅಹಿರ್ ಎಂಬ ಯುವತಿ ಸುಮಾರು 40 ನಿಮಿಷ ಪೊಲೀಸ್ ವ್ಯಾನ್ ಮುಂದೆ ಅಚಲವಾಗಿ ನಿಂತ ಘಟನೆ ಮುಂಬೈನಲ್ಲಿ ಬುಧವಾರ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಪ್ರತಿಭಟನೆಯ ಬಳಿಕ ಬಂಧಿಸಲ್ಪಟ್ಟ ಯುವ ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ನೀಲಿ ಬಣ್ಣದ ಪೊಲೀಸ್ ವ್ಯಾನ್ ಎದುರು ಮಳೆಯಲ್ಲಿ ನೆನೆದ ಹೂಡಿ ಧರಿಸಿದ್ದ ರಿಯಾ ಅಹಿರ್, ಒಂದು ಕೈಯನ್ನು ವ್ಯಾನ್ ನ ಬಾನೆಟ್ ಮೇಲೆ ಇರಿಸಿಕೊಂಡು ನಿಂತಿದ್ದರು. ವಾಹನದಲ್ಲಿ ಪೊಲೀಸ್ ಅಧಿಕಾರಿಗಳು ಕುಳಿತಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಆರಂಭವಾದ 'ಕಾಕ್ರೋಚ್' ಪ್ರತಿಭಟನೆಗಳು, ನಂತರ ಪರೀಕ್ಷೆಗೆ ಸಂಬಂಧಿಸಿದ ದೂರುಗಳನ್ನು ಮೀರಿ ವಿಸ್ತರಿಸಿವೆ. ವೃತ್ತಿಪರರು, ಸಾಮಾನ್ಯ ಜನರು ಸೇರಿದಂತೆ ವಿವಿಧ ವರ್ಗಗಳ ಜನರು ಈ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರತಿಭಟನೆಗೆ ಸೇರುವ ಮೊದಲು ಸ್ನೇಹಿತರಿಗಾಗಿ ಕಾಯುತ್ತಿದ್ದ ವೇಳೆ ಪೊಲೀಸ್ ವಾಹನ ಗಮನಿಸಿದ್ದಾಗಿ ಅಹಿರ್ ಹೇಳಿದ್ದಾರೆ. ಪ್ರತಿಭಟನಾಕಾರರನ್ನು ಬಂಧಿಸಲು ಅಗತ್ಯವಿರುವ ದಾಖಲೆಗಳು ಪೊಲೀಸ್ ಅಧಿಕಾರಿಗಳ ಬಳಿ ಇದೆಯೇ ಎಂದು ಅವರು ಪ್ರಶ್ನಿಸಿದ್ದರು. ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಅವರು ಮೊದಲಿಗೆ ಚಲಿಸುತ್ತಿದ್ದ ವಾಹನದ ಪಕ್ಕದಲ್ಲಿ ನಡೆದರು. ಮುಂದೆ ಹಾಗೆ ಸಾಗಲು ಸಾಧ್ಯವಾಗದಾಗ ವಾಹನದ ಮುಂದೆಯೇ ನಿಂತರು.
ಕೇವಲ ಪ್ರತಿಭಟನೆ ನಡೆಸಿದ ಕಾರಣಕ್ಕೆ ಸಾಮಾನ್ಯ ನಾಗರಿಕರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು 27 ವರ್ಷದ ಅಹಿರ್ ಹೇಳಿದ್ದಾರೆ. ವ್ಯಾನ್ ಚಾಲಕ ಇಂಜಿನ್ ನ ವೇಗ ಹೆಚ್ಚಿಸಿದಾಗ ತಾನು ಆತಂಕಗೊಂಡಿದ್ದೆ. ಬಂಧನಕ್ಕೊಳಗಾಗುವ ಅಥವಾ ಗಾಯಗೊಳ್ಳುವ ಸಾಧ್ಯತೆ ಮನಸ್ಸಿಗೆ ಬಂದಿತಾದರೂ, ಅಲ್ಲಿಂದ ಸರಿಯಲು ನಿರಾಕರಿಸಿದರು. ಬಂಧಿಸಲ್ಪಟ್ಟ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವವರೆಗೆ ಅವರು ತಮ್ಮ ನಿಲುವನ್ನು ಬದಲಾಯಿಸಲಿಲ್ಲ.
ತಾನು ಹೆದರಿದ್ದೆ ಎಂಬುದನ್ನು ಒಪ್ಪಿಕೊಂಡ ಅಹಿರ್, "ನನಗೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿತ್ತು. ನಾನೇ ಇದನ್ನು ಆರಂಭಿಸಿದ್ದರೆ, ಅದನ್ನು ಪೂರ್ಣಗೊಳಿಸಲೇಬೇಕಾಗಿತ್ತು" ಎಂದು ಹೇಳಿದ್ದಾರೆ.