ಪ್ರಧಾನಿ ಮೋದಿಗೆ ನಿಂದನೆ ಆರೋಪ: ಬಾಲಕಿ ಕ್ಷಮೆಯಾಚನೆ ಬಳಿಕ ಎಫ್ಐಆರ್ ಮುಂದುವರಿಸದಿರಲು ದಿಲ್ಲಿ ಪೊಲೀಸರು ನಿರ್ಧಾರ
Photo | indiatoday
ಹೊಸದಿಲ್ಲಿ : ಕಳೆದ ತಿಂಗಳು ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ ಆರೋಪದಲ್ಲಿ ಅಪ್ರಾಪ್ತ ಬಾಲಕಿಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಮುಂದುವರಿಸದಿರಲು ದಿಲ್ಲಿ ಪೊಲೀಸರು ನಿರ್ಧರಿಸಿದ್ದಾರೆ.
ಈ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಜೀರೋ ಎಫ್ಐಆರ್ ದಾಖಲಿಸಿದ್ದರು. ಬಳಿಕ ಅದನ್ನು ದಿಲ್ಲಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಬಳಿಕ ಬಾಲಕಿ ವಿಡಿಯೋ ಮೂಲಕ ಕ್ಷಮೆಯಾಚಿಸಿ, ತನಗೆ 15 ವರ್ಷ ವಯಸ್ಸು ಮತ್ತು ಪ್ರತಿಭಟನಾ ಸ್ಥಳದಲ್ಲಿ ಇತರರ ಪ್ರಭಾವದಿಂದಾಗಿ ಆ ರೀತಿ ಮಾತನಾಡಿದ್ದಾಗಿ ಹೇಳಿಕೊಂಡಿದ್ದಳು.
ಕೆಲ ದಿನಗಳ ಹಿಂದೆ ಬಿಡುಗಡೆಗೊಳಿಸಿದ ವಿಡಿಯೋದಲ್ಲಿ ಬಾಲಕಿ, "ನನಗೆ ಕೇವಲ 15 ವರ್ಷ. ನಾನು ಮಾಡಿದ್ದು ಕ್ಷಮೆಗೆ ಅರ್ಹವಾದದ್ದಲ್ಲ. ನಾನು ಬಹಳಷ್ಟು ಕೆಟ್ಟ ಮಾತುಗಳನ್ನು ಹೇಳಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ನಾನು ಇಡೀ ದೇಶದ ಕ್ಷಮೆಯಾಚಿಸುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ. ನನ್ನ ಮುಖವನ್ನು ನಾನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಹೇಳಿದ್ದಳು.
ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಗಾಗಿ ಮನವಿಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಕಳೆದ ಶುಕ್ರವಾರ, ತಮ್ಮನ್ನು ನಿಂದಿಸಿದ ಮಕ್ಕಳನ್ನು ಕ್ಷಮಿಸಿರುವುದಾಗಿ ತಿಳಿಸಿದ್ದರು.
"ಅವರಿಗೆ ಶಿಕ್ಷೆ ನೀಡುವುದು, ನ್ಯಾಯಾಲಯಗಳಿಗೆ ಅಲೆದಾಡಿಸುವುದು ಮತ್ತು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ನಾನು ಹೇಳುತ್ತಿರುವುದನ್ನು ಸಮಾಜವು ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ" ಎಂದು ಮೋದಿ ಹೇಳಿದ್ದರು.
ಬಾಲಕಿಯ ತಾಯಿ ಕೂಡ ಎಫ್ಐಆರ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲು ಪ್ರಧಾನಿಗೆ ಮನವಿ ಮಾಡಿದ್ದರು. "ಅಂತಹ ಕೆಟ್ಟ ಪದಗಳನ್ನು ಬಳಸಿದ್ದ ದೇಶದ ಮಗಳನ್ನು ಕ್ಷಮಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಕೈಮುಗಿದು ಅವರಿಗೆ ಧನ್ಯವಾದ ಹೇಳುತ್ತೇನೆ. ಇಂದು ಆಕೆಗೆ ಮರುಜನ್ಮ ಸಿಕ್ಕಿದೆ. ಪ್ರಧಾನಮಂತ್ರಿಯವರು ಆಕೆಗೆ ಜೀವದಾನ ನೀಡಿದ್ದಾರೆ" ಎಂದಿದ್ದರು.
“18 ವರ್ಷದೊಳಗಿನ ಮಕ್ಕಳಿಗೆ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಅನ್ನು ನಿಲ್ಲಿಸಬೇಕು ಎಂಬುದು ಪ್ರಧಾನಿ ಮೋದಿಯವರಲ್ಲಿ ನನ್ನ ವಿನಮ್ರ ವಿನಂತಿ. ಅವರಿಗೆ ಓದಲು ಮಾತ್ರ ಅವಕಾಶ ನೀಡಬೇಕು. ಪ್ರತಿಭಟನಾ ಸ್ಥಳಗಳಿಗೆ ಹೋಗಲು ಅವಕಾಶ ನೀಡಬಾರದು. ಈ ಮಕ್ಕಳನ್ನು ಸುಲಭವಾಗಿ ದಾರಿತಪ್ಪಿಸಬಹುದು. ಅವರಿಗೆ ಪ್ರಪಂಚದ ಬಗ್ಗೆ ಏನೂ ತಿಳಿದಿಲ್ಲ" ಎಂದು ಬಾಲಕಿಯ ತಾಯಿ ಮನವಿ ಮಾಡಿದ್ದರು.
ವಿಡಿಯೋ ವೈರಲ್ ಆದ ನಂತರ ಈ ಪ್ರಕರಣವು ಗಮನ ಸೆಳೆದಿತ್ತು, ದಿಲ್ಲಿ ಪೊಲೀಸರು ಈಗ ಅಪ್ರಾಪ್ತ ಬಾಲಕಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ.