ರಾಮಮಂದಿರ ದೇಣಿಗೆ ಕಳ್ಳತನದ ಕುರಿತು ಕಿರುನಾಟಕ : ಬಲಪಂಥೀಯ ಸಂಘಟನೆಗಳಿಂದ ಜೀವ ಬೆದರಿಕೆ ಆರೋಪಿಸಿದ ಪಪ್ಪು ಯಾದವ್
ಹೊಸ ದಿಲ್ಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣವನ್ನು ವಿರೋಧಿಸಿ ಕಳೆದ ವಾರ ಸಂಸತ್ತಿನ ಆವರಣದಲ್ಲಿ ಕಿರುನಾಟಕದ ಮೂಲಕ ಪ್ರತಿಭಟನೆ ನಡೆಸಿದ್ದ ಪಕ್ಷೇತರ ಸಂಸದ ಪಪ್ಪು ಯಾದವ್, ನನಗೆ ಬಲಪಂಥೀಯ ಸಂಘಟನೆಗಳಿಂದ ಜೀವ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
“ಇಂದು ಬೆಳಗ್ಗೆಯಿಂದ ನಾನು ನಾಲ್ಕು ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದೇನೆ. ಕರೆ ಮಾಡಿದ ವ್ಯಕ್ತಿಗಳು ಇಂದು ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆವೊಡ್ಡಿದ್ದಾರೆ. ಕರೆ ಮಾಡಿದ ವ್ಯಕ್ತಿಗಳು ತಾವು ವಿಶ್ವ ಹಿಂದೂ ಪರಿಷತ್ ಗೆ ಸೇರಿದವರು ಅಥವಾ ಬಜರಂಗದಳಕ್ಕೆ ಸೇರಿದವರು ಎಂದು ಹೇಳುತ್ತಿದ್ದಾರೆ. ನಾನೇನಾದರೂ ಮನೆಯಿಂದ ಹೊರಗೆ ಕಾಲಿಟ್ಟರೆ ಕೊಲ್ಲುವುದಾಗಿ ಬೆದರಿಸುತ್ತಿದ್ದಾರೆ. ಇಲ್ಲದಿದ್ದರೆ ಕ್ಷಮೆ ಕೋರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ನಾನು ಯಾವುದಕ್ಕಾಗಿ ಕ್ಷಮೆ ಕೋರಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದರು.
ಅವರು ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಹಾಗೂ ಸಾಮಾನ್ಯ ಜನರ ನಂಬಿಕೆಯೊಂದಿಗೆ ಆಟವಾಡಿದ್ದಾರೆ. ಇದರೊಂದಿಗೆ ದೇವರಿಗೂ ದ್ರೋಹವೆಸಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
“ನೀವು ಕಳ್ಳತನ ಮಾಡಿದವರಾಗಿದ್ದೀರಿ. ಸಾಮಾನ್ಯ ಜನರ ನಂಬಿಕೆಯೊಂದಿಗೆ ಆಟವಾಡುತ್ತಿರುವವರು ನೀವಾಗಿದ್ದೀರಿ. ದೇವರಿಗೆ ದ್ರೋಹ ಬಗೆದವರು ನೀವಾಗಿದ್ದೀರಿ. ಹಾಗಾದರೆ, ನಾನೀಗ ಯಾವ ದೂರನ್ನು ಸಲ್ಲಿಸಬೇಕು?” ಎಂದು ಪ್ರಶ್ನಿಸಿದರು.
ನನ್ನ ರುಂಡವನ್ನು ತರುವಂತೆ ಕಲ್ಮೇಮಿ ಸಾಧುಗಳು ಬೇಡಿಕೆ ಇಟ್ಟಿದ್ದಾರೆ. ಆದರೆ, ನಾವು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಅಥವಾ ನಿಂದನಾತ್ಮಕ ಭಾಷೆಯನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದರು.
ಶನಿವಾರ ಪಪ್ಪು ಯಾದವ್ ನಿವಾಸದೆದುರು ನಡೆದ ಪತ್ರಿಕಾಗೋಷ್ಠಿಯ ವೇಳೆ ವ್ಯಕ್ತಿಯೊಬ್ಬ ಅವರ ಮೇಲೆ ಕಲ್ಲು ತೂರಿ, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.