ಕ್ಷೇತ್ರಗಳ ಮರುವಿಂಗಡಣೆ ಮಸೂದೆ | ರಾಹುಲ್‌ ಗಾಂಧಿಯ ʼಎಟ್ಟಪ್ಪನ್' ಹೇಳಿಕೆಗೆ ಡಿಎಂಕೆ ತಿರುಗೇಟು

Update: 2026-08-03 12:21 IST
Photo | thenewsminute

ಚನ್ನೈ: ಲೋಕಸಭೆಯ ಬಲವನ್ನು ಹೆಚ್ಚಿಸುವ ಕ್ಷೇತ್ರಗಳ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಿ ಸರಕಾರದ ನಡೆಗೆ ಬೆಂಬಲ ನೀಡುವುದು ತಮಿಳುನಾಡಿಗೆ ಮಾಡುವ ದ್ರೋಹ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಡಿಎಂಕೆ ತಿರುಗೇಟು ನೀಡಿದ್ದು, ʼಅಧಿಕಾರಕ್ಕಾಗಿ ನಂಬಿಕೆಯನ್ನು ಮಾರಾಟ ಮಾಡುವ ವಿಷಪೂರಿತ ಹಾವುಗಳುʼ ಎಂದು ಕಾಂಗ್ರೆಸ್‌  ವಿರುದ್ಧ ಟೀಕಿಸಿದೆ.

ಡಿಎಂಕೆ ಪಕ್ಷವು ಈ ಮಸೂದೆಯನ್ನು ಬೆಂಬಲಿಸಬಹುದು ಎಂಬ ರಾಜಕೀಯ ವಲಯದ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ತಮಿಳುನಾಡು ಭೇಟಿಯ ವೇಳೆ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವ ಯಾವುದೇ ಪಕ್ಷವು 21ನೇ ಶತಮಾನದ 'ಎಟ್ಟಪ್ಪನ್' ಆಗಿರುತ್ತದೆ ಎಂದು ಹೇಳಿಕೆ ನೀಡಿದ್ದರು. ಎಟ್ಟಪ್ಪನ್ ಎಂದರೆ ದ್ರೋಹಕ್ಕಾಗಿ ನಿಂದಿಸಲ್ಪಡುವ ಐತಿಹಾಸಿಕ ವ್ಯಕ್ತಿಯಾಗಿ ತಮಿಳುನಾಡಿನಲ್ಲಿ ಪ್ರಚಲಿತದಲ್ಲಿರುವ ಹೆಸರಾಗಿದೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಎಂಕೆಯ ಹಿರಿಯ ಸಂಸದ ದಯಾನಿಧಿ ಮಾರನ್, "ಕೇವಲ ಸಚಿವ ಸ್ಥಾನಗಳಿಗಾಗಿ ನಮ್ಮ ನಂಬಿಕೆಯನ್ನು ಮಾರಿಕೊಂಡವರು ಇವರು” ಎಂದು ತಿರುಗೇಟು ನೀಡಿದ್ದಾರೆ.

“ಅಧಿಕಾರವನ್ನು ಖರೀದಿಸಲು ನಂಬಿಕೆಯನ್ನು ಮಾರಾಟ ಮಾಡುವ ವಿಷಪೂರಿತ ಹಾವುಗಳು” ಎಂದು ಅವರು ಇದೇ ವೇಳೆ ಕಾಂಗ್ರೆಸ್‌ ಪಕ್ಷವನ್ನು ಬಣ್ಣಿಸಿದರು.

ರಾಹುಲ್ ಅವರನ್ನು ಗುರಿಯಾಗಿಸಿ ಮಾತನಾಡಿದ ದಯಾನಿಧಿ ಮಾರನ್, "ತಮಿಳುನಾಡಿಗೆ ಬಂದು ಕಾವೇರಿ ಹಕ್ಕುಗಳ ಬಗ್ಗೆ ಮೌನವಾಗಿರುವವರು ದ್ರೋಹಿಗಳು. ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸುವ ಬದಲು, ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಮಾತ್ರ ಮಾತನಾಡುವವರು ದ್ರೋಹಿಗಳು. ಬಿಜೆಪಿಯ ಕುದುರೆ ವ್ಯಾಪಾರವನ್ನು ಖಂಡಿಸಿ ಟಿವಿಕೆಯ ಅಸಹ್ಯಕರ ಕುದುರೆ ವ್ಯಾಪಾರವನ್ನು ನಿರ್ಲಕ್ಷಿಸುವವರು ನಿಜವಾದ ದ್ರೋಹಿಗಳು. ಇಂತಹ ದ್ರೋಹಿಗಳು ತಮ್ಮ ದ್ರೋಹವನ್ನು ಮುಂದುವರಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ರಾಜಕಾರಣದಲ್ಲಿ ಕಾಂಗ್ರೆಸ್ ಡಿಎಂಕೆಯ ಮಿತ್ರಪಕ್ಷವಾಗಿ ಚುನಾವಣೆಯನ್ನು ಎದುರಿಸಿತ್ತು. ರಾಹುಲ್ ನಾಯಕತ್ವ ಸೇರಿದಂತೆ ಎಲ್ಲಾ ಪ್ರಮುಖ ವಿಷಯಗಳಲ್ಲೂ ಡಿಎಂಕೆಯು ಸಂಪೂರ್ಣವಾಗಿ ಕಾಂಗ್ರೆಸ್‌ ನ್ನು ಬೆಂಬಲಿಸುತ್ತಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಗೆಲುವಿನ ಬಳಿಕ , ಡಿಎಂಕೆ ಜೊತೆಗಿನ ತನ್ನ ಚುನಾವಣಾಪೂರ್ವ ಮೈತ್ರಿಯನ್ನು ಕಡಿದುಕೊಂಡ ಕಾಂಗ್ರೆಸ್ , ಟಿವಿಕೆ ಗೆ ಬೆಂಬಲ ನೀಡಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News