ಬ್ಯಾಂಕ್ ಆಫ್ ಬರೋಡಾದ ಗ್ರಾಹಕರ ದತ್ತಾಂಶ ಆನ್‌ಲೈನ್‌ನಲ್ಲಿ ಸೋರಿಕೆ: ವರದಿ
ಬ್ಯಾಂಕ್ ಆಫ್ ಬರೋಡಾ | Photo Credit : bankofbaroda.bank.in
ಮುಂಬೈ,ಜು.27: ಕೇಂದ್ರ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದ (ಬಿಒಬಿ) ಗ್ರಾಹಕರ ಮಾಹಿತಿ ಮತ್ತು ಆಂತರಿಕ ದಾಖಲೆಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿವೆ ಎಂದು ಬಲ್ಲ ಮೂಲವೊಂದು ತಿಳಿಸಿದ್ದು, ಸೈಬರ್ ಭದ್ರತಾ ಸಂಶೋಧಕರೋರ್ವರು ಸಹ ಇದನ್ನು ಪುಷ್ಟೀಕರಿಸಿದ್ದಾರೆ.
ಆರಂಭಿಕ ತಡೆಗಟ್ಟುವ ಕ್ರಮಗಳನ್ನು ಕೈಗೊಂಡ ನಂತರ ವಿಧಿವಿಜ್ಞಾನ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಂಬಂಧಿತ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಬ್ಯಾಂಕ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯೋಗಿಯೋರ್ವರ ಇಮೇಲ್ ಖಾತೆ ಹ್ಯಾಕ್ ಆಗಿದ್ದರಿಂದ ಕೆಲವು ಡೇಟಾಗಳಿಗೆ ಅನಧಿಕೃತ ಪ್ರವೇಶ ಸಿಕ್ಕಿದೆ ಎಂದು ಮುಂಬೈ ಮೂಲದ ಬಿಒಬಿ ಹೇಳಿದೆ.
ಬ್ಯಾಂಕಿನ ಕೋರ್ ಬ್ಯಾಂಕಿಂಗ್ ಸಿಸ್ಟಮ್‌ಗಳಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ ಮತ್ತು ಅವು ಸುರಕ್ಷಿತವಾಗಿವೆ ಎಂದೂ ಅದು ತಿಳಿಸಿದೆ.
ಸೋರಿಕೆಯಾದ ಮಾಹಿತಿಗಳಲ್ಲಿ ಗ್ರಾಹಕರ ವಿವರಗಳು, ಗುರುತಿನ ದಾಖಲೆಗಳು, ಸಾಲದ ದಾಖಲೆಗಳು ಮತ್ತು ಆಂತರಿಕ ಆಡಿಟ್ ದಾಖಲೆಗಳು ಸೇರಿವೆ ಎಂದು ಕ್ಯಾಶ್‌ಲೆಸ್ ಕನ್ಸ್ಯೂಮರ್ ಸಂಸ್ಥೆಯ ಸ್ಥಾಪಕ ಹಾಗೂ ಸೈಬರ್ ಭದ್ರತಾ ಸಂಶೋಧಕ ಶ್ರೀಕಾಂತ್ ಎಲ್. ತಿಳಿಸಿದ್ದಾರೆ.
ಎಷ್ಟು ಮಂದಿ ಗ್ರಾಹಕರು ಇದರಿಂದ ಬಾಧಿತರಾಗಿದ್ದಾರೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ವಿಪುಲ ಪ್ರಮಾಣದ ಗ್ರಾಹಕ ಹಾಗೂ ವ್ಯವಹಾರದ ಡೇಟಾವನ್ನು ಸಂಗ್ರಹಿಸಿಡುವ ದೊಡ್ಡ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ಸೈಬರ್ ಭದ್ರತಾ ಅಪಾಯಗಳ ಕುರಿತು ಕಳವಳ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಾಹಿತಿ ಸೋರಿಕೆ ವರದಿಯಾಗಿದೆ.
ಶನಿವಾರ ರಾತ್ರಿ ಡಾರ್ಕ್ ವೆಬ್ ಸೈಟ್ ಒಂದರಲ್ಲಿ ಈ ಡೇಟಾ ಕಾಣಿಸಿಕೊಂಡಿದ್ದು, ಸೈಟ್‌ನ ಮೆಟಾಡೇಟಾ ವಿಶ್ಲೇಷಣೆಯ ಪ್ರಕಾರ ಇದು 700 ಗಿಗಾಬೈಟ್‌ಗಿಂತಲೂ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುವ ಸಂಗ್ರಹ ಎಂದು ಪ್ರಚಾರ ಮಾಡಲಾಗಿತ್ತು ಎಂದು ಶ್ರೀಕಾಂತ್ ಹೇಳಿದ್ದಾರೆ.
ಜೂನ್ ತಿಂಗಳಿನಲ್ಲಿ ಆ್ಯಪಲ್ ಪೂರೈಕೆದಾರ ಸಂಸ್ಥೆ ಟಾಟಾ ಎಲೆಕ್ಟ್ರಾನಿಕ್ಸ್ ಮೇಲಿನ ಸೈಬರ್ ದಾಳಿಯ ಪರಿಣಾಮವಾಗಿ ಆ್ಯಪಲ್ ಮತ್ತು ಟೆಸ್ಲಾಗೆ ಸಂಬಂಧಿಸಿದ ಬಿಡಿಭಾಗಗಳ ವಿನ್ಯಾಸ ಹಾಗೂ ವಿವರಣೆಯ ದಾಖಲೆಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದ್ದವು.
ಈ ತಿಂಗಳ ಆರಂಭದಲ್ಲಿ,ವರ್ಲ್ಡ್ ಲೀಕ್ಸ್ ಎಂಬ ರ್ಯಾನ್ಸಮ್‌ವೇರ್ ಗುಂಪು ಭಾರತದ ಅತಿದೊಡ್ಡ ಅಣುಸ್ಥಾವರಕ್ಕೆ ಸಂಬಂಧಿಸಿದ ಫೈಲ್‌ಗಳನ್ನು ಡಾರ್ಕ್ ವೆಬ್‌ನಲ್ಲಿ ಹಂಚಿಕೊಂಡಿತ್ತು.