ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಕಾನೂನು ನೆರವು | CJP ನಿಧಿಗೆ 1 ಕೋಟಿ ರೂ. ದೇಣಿಗೆ ಘೋಷಿಸಿದ ಕಪಿಲ್ ಸಿಬಲ್
ಕಪಿಲ್ ಸಿಬಲ್ , ಸೌರವ್ ದಾಸ್ | Photo Credit : PTI
ಹೊಸದಿಲ್ಲಿ, ಜು. 27: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ ವೇಳೆ ದಿಲ್ಲಿ ಪೊಲೀಸರು ಬಂಧಿಸಿದ್ದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರಿಗೆ ಕಾನೂನು ನೆರವು ನೀಡಲು ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಿಸಿರುವ ಕಾನೂನು ನೆರವು ನಿಧಿಗೆ ಹಿರಿಯ ವಕೀಲ ಕಪಿಲ್ ಸಿಬಲ್ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಸೋಮವಾರ ಘೋಷಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಜುಲೈ 25ರಂದು CJP ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತ್ತು. ಬಳಿಕ ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿರುವ ಎಲ್ಲ ಎಫ್‌ಐಆರ್ ಗಳನ್ನು ಹಿಂಪಡೆಯಬೇಕು ಹಾಗೂ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು CJP ಪ್ರತಿನಿಧಿಗಳು ಆಗ್ರಹಿಸಿದ್ದರು.
ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ CJP ವಕ್ತಾರ ಸೌರವ್ ದಾಸ್, ಕೇಂದ್ರ ಸರ್ಕಾರ ನೀಡಿದ್ದ ಭರವಸೆಯ ಹೊರತಾಗಿಯೂ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ದೊರೆಯುತ್ತಿದೆ ಎಂದು ಆರೋಪಿಸಿದರು. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಕಾನೂನು ನೆರವು ಒದಗಿಸಲು CJP ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, ಕಾನೂನು ನೆರವು ನೀಡಲು ತಾವು ಒಪ್ಪಿಕೊಂಡಿರುವುದಾಗಿ ಹೇಳಿದರು. ಎಫ್‌ಐಆರ್ ಗಳಿಂದ ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳ ವಿವರಗಳನ್ನು ದಾಖಲಿಸಲು CJP ವಿಶೇಷ ವೆಬ್‌ಸೈಟ್ ಆರಂಭಿಸಲಿದೆ. ಕಾನೂನು ನೆರವು ನೀಡಲು ಆಸಕ್ತಿ ಇರುವ ವಕೀಲರು ಉಚಿತವಾಗಿ ಅಥವಾ ಇತರ ರೀತಿಯಲ್ಲಿ ಈ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಂಡು ಸಂತ್ರಸ್ತರ ಪರವಾಗಿ ವಕಾಲತ್ತು ವಹಿಸಬಹುದು ಎಂದರು.
"ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಅಥವಾ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ದಾಖಲಿಸಿರುವ ಪ್ರಕರಣಗಳನ್ನು ಗುರುತಿಸಲು ಕಾರ್ಯವಿಧಾನ ರೂಪಿಸಲು ನಾವು ನಿರ್ಧರಿಸಿದ್ದೇವೆ. ಅದರ ಮೂಲಕ ನಮ್ಮ ವಕೀಲರು ಅವರಿಗೆ ಕಾನೂನು ನೆರವು ಒದಗಿಸಲಿದ್ದಾರೆ. ಯಾವುದೇ ಎಫ್‌ಐಆರ್ ದಾಖಲಾಗಬಾರದು. ದಾಖಲಾಗಿದ್ದರೆ ಅವುಗಳನ್ನು ಹಿಂಪಡೆಯಬೇಕು ಎಂಬುದು ನಮ್ಮ ಆಗ್ರಹ" ಎಂದು ಸಿಬಲ್ ಹೇಳಿದರು.
"ನಾನು ವೈಯಕ್ತಿಕವಾಗಿ 1 ಕೋಟಿ ರೂ. ದೇಣಿಗೆ ನೀಡಿದ್ದೇನೆ. ದೇಶದಾದ್ಯಂತದ ವಕೀಲರು ಕೂಡ ಈ ನಿಧಿಗೆ ತಮ್ಮ ನೆರವು ನೀಡಬೇಕು. ಕಾನೂನಿನ ದುರುಪಯೋಗದಿಂದ ತೊಂದರೆ ಅನುಭವಿಸಿರುವ ಸಂತ್ರಸ್ತರಿಗೆ ನೆರವಾಗಲು ಇದು ಸಹಕಾರಿಯಾಗಲಿದೆ. ನಮ್ಮ ವಕೀಲರು ಅವರ ಪರವಾಗಿ ನಿಲ್ಲಲಿದ್ದಾರೆ" ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸಿಬಲ್ ಇದೇ ವೇಳೆ ಮನವಿ ಮಾಡಿದರು.