ವಿದ್ಯಾರ್ಥಿಗಳ ವಿರುದ್ಧ ಎಕೆ-47 ಬಳಕೆ, ಲಾಠಿಪ್ರಹಾರ ತಪ್ಪು: ಶಾಂಭವಿ ಚೌಧರಿ
ಶಾಂಭವಿ ಚೌಧರಿ |Photo Credit : PTI
ಹೊಸದಿಲ್ಲಿ,ಜು.27: ಬಿಹಾರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಎಕೆ-47 ರೈಫಲ್‌ಗಳ ಬಳಕೆ ಮತ್ತು ದೇಶದ ವಿವಿಧೆಡೆಗಳಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ನಡೆದಿರುವ ಲಾಠಿ ಪ್ರಹಾರವನ್ನು ಎನ್‌ಡಿಎ ಮೈತ್ರಿಕೂಟದ ಲೋಕ ಜನಶಕ್ತಿ ಪಕ್ಷದ (ರಾಮವಿಲಾಸ್) ಸಂಸದೆ ಶಾಂಭವಿ ಚೌಧರಿ ಅವರು ‘ತಪ್ಪು’ ಎಂದು ಬಣ್ಣಿಸಿದ್ದು, ‘ನಾವು ಇದನ್ನು ವಿರೋಧಿಸುತ್ತೇವೆ’ ಎಂದು ಹೇಳಿದ್ದಾರೆ.
ಆದಾಗ್ಯೂ, ಪ್ರತಿಭಟನೆಗಳ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಸೇರಿಕೊಂಡಿದ್ದವು ಎನ್ನುವುದನ್ನು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿ ವಕ್ತಾರರು ಒಪ್ಪಿಕೊಂಡಿದ್ದಾರೆ ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ಸೋಮವಾರ ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ‘ಶಾಂತಿಯುತವಾಗಿ ನಿಮ್ಮ ದೃಷ್ಟಿಕೋನವನ್ನು ಮಂಡಿಸುವುದೇ ಪ್ರಜಾಪ್ರಭುತ್ವದ ಸೌಂದರ್ಯ. ಶಾಂತಿಯುತ ಪ್ರತಿಭಟನೆಯನ್ನು ಯಾವಾಗಲೂ ಸ್ವಾಗತಿಸಲಾಗುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ ಯುವಜನರಿಗೆ ಭಾಗವಹಿಸಲು ಹಾಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಹಕ್ಕಿದೆ’ ಎಂದು ಹೇಳಿದರು.
ಶನಿವಾರ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವ ಎಕೆ-47 ರೈಫಲ್‌ನ್ನು ಬಳಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ.
ಪ್ರತಿಭಟನೆಯ ಸಮಯದಲ್ಲಿ ಗುಂಡಿನ ದಾಳಿ ನಡೆಸದಂತೆ ಪೊಲೀಸ್ ಪಡೆಗೆ ಸ್ಪಷ್ಟ ನಿರ್ದೇಶನಗಳಿದ್ದ ಕಾರಣ ಈ ಕುರಿತು ತನಿಖೆ ಆರಂಭಿಸಲಾಗಿದೆ ಹಾಗೂ ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಸಿವಾನ್ ಎಸ್‌ಪಿ ಪೂರನ್ ಕುಮಾರ್ ಝಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಕರೆ ನೀಡಲಾಗಿದ್ದ ‘ಬಿಹಾರ ಬಂದ್’ ಬೆಂಬಲಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದು,ಹಲವು ಜಿಲ್ಲೆಗಳಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು.