×
Ad

ಕ್ಲಿನಿಕ್ ನಲ್ಲಿ ಬಾಲಕಿಯ ಮೃತದೇಹ ಪತ್ತೆ: ವೈದ್ಯನ ವಿರುದ್ಧ ಪ್ರಕರಣ ದಾಖಲು

Update: 2024-01-05 14:48 IST

ಮುಂಬೈ: ಮುಂಬೈನ ಉಪನಗರವಾದ ಮಲಾಡ್ ನ ಚಿಕಿತ್ಸಾಲಯವೊಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಹದಿಹರೆಯದ ಬಾಲಕಿಯ ಪ್ರಕರಣದ ಸಂಬಂಧ ಪೊಲೀಸರು ಕ್ಲಿನಿಕ್ನ ವೈದ್ಯನ ವಿರುದ್ಧ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯು ಡಿಸೆಂಬರ್ 28ರಂದು ಆಕೆ ಕೆಲಸ ಮಾಡುತ್ತಿದ್ದ ಚಿಕಿತ್ಸಾಲಯದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ನಲ್ಲಿ ಬಾಲಕಿಯು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುರಾರ್ ಠಾಣೆಯ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು.

ನನ್ನ ಪುತ್ರಿಯು ಆತ್ಮಹತ್ಯೆ ಮಾಡಿಕೊಂಡಿಲ್ಲ. ವೈದ್ಯರು ಅನುಚಿತವಾಗಿ ವರ್ತಿಸುತ್ತಾರೆ ಎಂದು ಆಕೆ ನನ್ನೊಂದಿಗೆ ದೂರಿದ್ದಳು ಎಂದು ಸಂತ್ರಸ್ತ ಬಾಲಕಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಾಯಿಯ ದೂರನ್ನು ಆಧರಿಸಿ ಪೊಲೀಸರು ಆರೋಪಿ ವೈದ್ಯನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಹಾಗೂ 376 (ಅತ್ಯಾಚಾರಕ್ಕಾಗಿ ದಂಡನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಬಾಲ ನ್ಯಾಯ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಸೂಕ್ತ ಸೆಕ್ಷನ್ ಗಳಡಿಯೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News