́ಚಿನ್ನ ಖರೀದಿಸಬೇಡಿ, ವಿದೇಶದಲ್ಲಿ ವಿವಾಹವಾಗಬೇಡಿ': ವಿಡಿಯೋ ಮೂಲಕ ಭಾರತೀಯರಿಗೆ ಪ್ರಧಾನಿ ಮೋದಿ ಮನವಿ
" ಮೊದಲ ತ್ರೈಮಾಸಿಕದಲ್ಲಿ ಭಾರತದ GDP 7.8% ಏರಿಕೆ"
Photo credit | X/narendramodi
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತೀಯರು ವಿದೇಶ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ವಿದೇಶಗಳಿಂದ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ ಗೆ ತೆರಳಿರುವ ಪ್ರಧಾನಿ ಮೋದಿ, ಸೆಲ್ಫಿ ಶೈಲಿಯ ವಿಡಿಯೋ ಮೂಲಕ ಭಾರತೀಯರಿಗೆ ಈ ಮನವಿ ಮಾಡಿದ್ದಾರೆ. ಭಾರತವು ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದ್ದಾರೆ.
ಸ್ವಾವಲಂಬನೆಗೆ ಉತ್ತೇಜನ ನೀಡುವುದರ ಜೊತೆಗೆ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಹೇಳಿದ ಅವರು, “ನೀವು ಕೇವಲ ವಿಹಾರಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರೆ, ಹೋಗಬೇಡಿ. ವಿದೇಶದಲ್ಲಿ ಮದುವೆಯಾಗುತ್ತಿದ್ದರೆ, ಹಾಗೆ ಮಾಡಬೇಡಿ. ಅಗತ್ಯವಿಲ್ಲದಿದ್ದರೆ ಚಿನ್ನವನ್ನೂ ಖರೀದಿಸಬೇಡಿ” ಎಂದು ಮನವಿ ಮಾಡಿದ್ದಾರೆ.
“ನಾವು ಸ್ವದೇಶಿಗೆ ಮತ್ತು ಸ್ವಾವಲಂಬನೆಗೆ ಎಷ್ಟು ಹೆಚ್ಚು ಒತ್ತು ನೀಡುತ್ತೇವೆಯೋ, ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಳ್ಳುವ ವೇಳೆಗೆ ನಮ್ಮ ಯುವ ಪೀಳಿಗೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನೀಡಲು ಸಾಧ್ಯವಾಗುತ್ತದೆ ಎಂಬ ದೃಢವಾದ ನಂಬಿಕೆ ನನಗಿದೆ” ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಮರ್ಶಕರ ವಿರುದ್ಧ ವಾಗ್ದಾಳಿ
ತಮ್ಮ ವಿಮರ್ಶಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ದೇಶದೊಳಗಿನ ಕೆಲವರು ಹತಾಶೆಯ ವಾತಾವರಣದಲ್ಲಿ ಮುಳುಗಿದ್ದು, ಸುತ್ತಮುತ್ತಲೂ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ಇವೆಲ್ಲವನ್ನೂ ಮೆಟ್ಟಿ ನಿಂತು, ಎಲ್ಲಾ ಸವಾಲುಗಳನ್ನು ಎದುರಿಸಿ ದೇಶವು ಶೇ.7.8ರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ನಾವು ಇದೇ ವೇಗವನ್ನು ಮುಂದುವರಿಸಿಕೊಂಡು ಹೋಗಬೇಕು” ಎಂದು ಅವರು ಹೇಳಿದ್ದಾರೆ.
“ಭಾರತದೊಳಗೇ ಹತಾಶೆಯ ವಾತಾವರಣದಲ್ಲಿ ಮುಳುಗಿರುವ ಕೆಲವರು ಸುತ್ತಲೂ ‘ಜೂಟ್ ಕಿ ಗೂಂಜ್’ (ಸುಳ್ಳಿನ ಪ್ರತಿಧ್ವನಿ) ಹರಡುವುದರಲ್ಲಿ ನಿರತರಾಗಿದ್ದಾರೆ” ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.