Photo Credit : PTI and Facebook

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಹೆಸರು ಸೇರ್ಪಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ಪ್ರತಿ 10 ಮೇಲ್ಮನವಿಗಳಲ್ಲಿ ಸುಮಾರು ನಾಲ್ಕನ್ನು ಚುನಾವಣಾ ಆಯೋಗದ ಅಧಿಕಾರಿಗಳೇ ಸಲ್ಲಿಸಿದ್ದರು ಎಂದು SIR ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ, ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದ್ರಜಿತ್ ಚಟರ್ಜಿ ತಿಳಿಸಿದ್ದಾರೆ ಎಂದು thewire. in ವರದಿ ಮಾಡಿದೆ.

ಮುರ್ಷಿದಾಬಾದ್ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಮಂಡಳಿ–11ರ ಮುಂದೆ ಒಟ್ಟು 6,35,983 ಮೇಲ್ಮನವಿಗಳು ದಾಖಲಾಗಿವೆ. ಈ ಪೈಕಿ ಸುಮಾರು 2.54 ಲಕ್ಷ ಮೇಲ್ಮನವಿಗಳನ್ನು ಪಶ್ಚಿಮ ಬಂಗಾಳದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ (Additional CEO) ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಈ ಮೇಲ್ಮನವಿಗಳು ಮತದಾರರು ತಮ್ಮ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಸಲ್ಲಿಸಿದವುಗಳಲ್ಲ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವರ ಹೆಸರುಗಳನ್ನು ತೆಗೆದುಹಾಕುವಂತೆ ಚುನಾವಣಾ ಅಧಿಕಾರಿಗಳೇ ಸಲ್ಲಿಸಿದ ಮೇಲ್ಮನವಿಗಳಾಗಿವೆ ಎಂದು ನ್ಯಾಯಮೂರ್ತಿ ಚಟರ್ಜಿ ಹೇಳಿದ್ದಾರೆ.

‘ದಿ ವೈರ್’ ಜೊತೆ ಮಾತನಾಡಿದ ಅವರು, ತಮ್ಮ ನ್ಯಾಯಮಂಡಳಿಯ ಮುಂದೆ ಹೆಸರು ಸೇರ್ಪಡೆಯನ್ನು ಪ್ರಶ್ನಿಸಿ ದಾಖಲಾಗಿದ್ದ ಎಲ್ಲ 2.54 ಲಕ್ಷ ಮೇಲ್ಮನವಿಗಳನ್ನೂ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಯೇ ಸಲ್ಲಿಸಿದ್ದರು ಎಂದು ದೃಢಪಡಿಸಿದ್ದಾರೆ.

“ಈ ಮೇಲ್ಮನವಿಗಳು ಈಗಾಗಲೇ ಆಯೋಗದ ಪೋರ್ಟಲ್‌ನಲ್ಲಿದ್ದವು. ಆಯೋಗವು ಮೇಲ್ಮನವಿ ಸಲ್ಲಿಸಿದ್ದ ಮತದಾರರು ಹಾಗೂ ವ್ಯಕ್ತಿಗಳು ಮೇಲ್ಮನವಿ ಸಲ್ಲಿಸಿದ್ದ ಮತದಾರರನ್ನು ಪಟ್ಟಿಗೆ ಸೇರಿಸಲು ನಾನು ಆದೇಶಿಸಿದೆ” ಎಂದು ಅವರು ಹೇಳಿದ್ದಾರೆ.

ಮತದಾರರ ಹೆಸರು ತೆಗೆದುಹಾಕುವ ಅಥವಾ ಸೇರ್ಪಡೆಗೊಳಿಸುವ ಆದೇಶಗಳನ್ನು ಮೇಲ್ಮನವಿ ಪ್ರಾಧಿಕಾರಗಳು ಎಚ್ಚರಿಕೆಯಿಂದ ನೀಡಬೇಕು. ಅಂತಹ ಆದೇಶದ ವಿರುದ್ಧ ಕೈಬಿಡಲಾದ ಅಥವಾ ಸೇರ್ಪಡೆಗೊಂಡ ವ್ಯಕ್ತಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

2026ರ ಸೆಪ್ಟೆಂಬರ್ 16ರಂದು ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮೇಲ್ಮನವಿ ನ್ಯಾಯಮಂಡಳಿಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿತ್ತು.

ಅದರ ಪ್ರಕಾರ ಒಟ್ಟು 38,31,429 ಮೇಲ್ಮನವಿಗಳು ದಾಖಲಾಗಿದ್ದವು. ಈ ಪೈಕಿ ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟವರು ಸಲ್ಲಿಸಿದ 22,21,118 ಮೇಲ್ಮನವಿಗಳು ಮತ್ತು ಮತದಾರರ ಹೆಸರು ಸೇರ್ಪಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ 16,10,311 ಮೇಲ್ಮನವಿಗಳು ಸೇರಿದ್ದವು.

ಆದರೆ, ಹೆಸರು ಸೇರ್ಪಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ 16,10,311 ಮೇಲ್ಮನವಿಗಳ ಮೂಲವನ್ನು ಆಯೋಗ ಬಹಿರಂಗಪಡಿಸಿರಲಿಲ್ಲ. ಆಗಸ್ಟ್ 25ರಂದು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದಲ್ಲಿಯೂ ಈ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಿರಲಿಲ್ಲ.

ಮೇಲ್ಮನವಿಗಳ ಮೂಲದ ಬಗ್ಗೆ ಆಯೋಗದೊಳಗೆಯೇ ಪ್ರಶ್ನೆಗಳು ಎದ್ದಿದ್ದವು. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಪ್ರಕಾರ, ಆಗಸ್ಟ್ 12ರಂದು ಚುನಾವಣಾ ಆಯುಕ್ತ ಸುಖಬೀರ್ ಸಿಂಗ್ ಸಂಧು ಈ ವಿಚಾರವಾಗಿ ಅಧಿಕೃತ ವಿಚಾರಣೆ ನಡೆಸಿದ್ದರು. ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿದ್ದ ಮೇಲ್ಮನವಿಗಳ ಕುರಿತು ತಮ್ಮೊಂದಿಗೆ, ಸಹ ಚುನಾವಣಾ ಆಯುಕ್ತ ವಿವೇಕ್ ಜೋಶಿ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿದ್ದರು.

ಸೆಪ್ಟೆಂಬರ್ 27ರಂದು ‘ದಿ ವೈರ್’ ಪ್ರಕಟಿಸಿದ್ದ ವರದಿಯಲ್ಲಿಯೂ ಮೇಲ್ಮನವಿ ನ್ಯಾಯಮಂಡಳಿ–11ರ ಸಾರ್ವಜನಿಕ ದಾಖಲೆಗಳನ್ನು ಉಲ್ಲೇಖಿಸಲಾಗಿತ್ತು. ಫರಕ್ಕಾ ಮತ್ತು ರಘುನಾಥಗಂಜ್ ಮತದಾರರಿಗೆ ಸಂಬಂಧಿಸಿದಂತೆ ಮೇ 8 ಮತ್ತು 11ರಂದು ಹೊರಡಿಸಲಾದ ಸೂಚನೆಗಳಲ್ಲಿ, ಹೆಸರು ಸೇರ್ಪಡೆಯನ್ನು ಪ್ರಶ್ನಿಸಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಯೇ ಮೇಲ್ಮನವಿಗಳನ್ನು ಸಲ್ಲಿಸಿದ್ದರು ಎಂಬುದು ದಾಖಲಾಗಿತ್ತು.

ಮುರ್ಷಿದಾಬಾದ್ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 9,02,351 ಮತದಾರರ ಅರ್ಹತೆಯನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಅವರಲ್ಲಿ 4,92,807 ಮಂದಿಯನ್ನು ಅರ್ಹರೆಂದು ಹಾಗೂ 4,00,681 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ. ಅಂದರೆ ಶೇ 44.4ರಷ್ಟು ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.

ಫರಕ್ಕಾದಲ್ಲಿ 82,580 ಮತದಾರರ ಪರಿಶೀಲನೆ ನಡೆದಿದ್ದು, 38,222 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ. ಶಂಶೇರ್‌ಗಂಜ್‌ ನಲ್ಲಿ 1,08,400 ಮಂದಿಯ ಪೈಕಿ 74,775 ಮಂದಿ ಅನರ್ಹರಾಗಿದ್ದಾರೆ. ಸುತಿಯಲ್ಲಿ 1,04,980 ಮಂದಿಯ ಪೈಕಿ 37,965, ಜಂಗೀಪುರದಲ್ಲಿ 75,720 ಮಂದಿಯ ಪೈಕಿ 36,581, ರಘುನಾಥಗಂಜ್‌ ನಲ್ಲಿ 1,15,087 ಮಂದಿಯ ಪೈಕಿ 46,100, ಸಾಗರ್‌ದಿಘಿಯಲ್ಲಿ 72,147 ಮಂದಿಯ ಪೈಕಿ 21,474 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.

ಲಾಲ್‌ಗೋಲಾದಲ್ಲಿ 99,082 ಮಂದಿಯ ಪೈಕಿ 55,420, ಭಗಬಂಗೋಲಾದಲ್ಲಿ 1,09,435 ಮಂದಿಯ ಪೈಕಿ 47,493, ರಾಣಿನಗರದಲ್ಲಿ 92,796 ಮಂದಿಯ ಪೈಕಿ 17,140, ಮುರ್ಷಿದಾಬಾದ್‌ನಲ್ಲಿ 21,150 ಮಂದಿಯ ಪೈಕಿ 16,042 ಮತ್ತು ನಬಗ್ರಾಮ್‌ನಲ್ಲಿ 20,974 ಮಂದಿಯ ಪೈಕಿ 9,469 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.

ಮುರ್ಷಿದಾಬಾದ್ ಕ್ಷೇತ್ರದಲ್ಲಿ ಅನರ್ಹರ ಪ್ರಮಾಣ ಶೇ 75.8ರಷ್ಟಿದ್ದು, ಶಂಶೇರ್‌ಗಂಜ್‌ನಲ್ಲಿ ಶೇ 69 ಮತ್ತು ಲಾಲ್‌ಗೋಲಾದಲ್ಲಿ ಶೇ 55.9ರಷ್ಟಿದೆ. ಈ 11 ಕ್ಷೇತ್ರಗಳ ಪೈಕಿ ಪ್ರತಿಯೊಂದರಲ್ಲೂ ಕೈಬಿಡಲಾದ ಮತದಾರರ ಸಂಖ್ಯೆಗೆ ಹೋಲಿಸಿದರೆ ಬಾಕಿ ಇರುವ ಮೇಲ್ಮನವಿಗಳ ಸಂಖ್ಯೆಯೇ ಹೆಚ್ಚಿದೆ.

ರಾಜ್ಯಾದ್ಯಂತ ಪ್ರತಿ ಅನರ್ಹ ಮತದಾರನಿಗೆ 1.40 ಮೇಲ್ಮನವಿಗಳಿದ್ದರೆ, ಈ 11 ಕ್ಷೇತ್ರಗಳಲ್ಲಿ ಈ ಪ್ರಮಾಣ ಶೇ. 1.59ರಷ್ಟಿದೆ.

ರಾಣಿನಗರದಲ್ಲಿ 17,140 ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದರೆ, 56,323 ಮೇಲ್ಮನವಿಗಳು ಬಾಕಿ ಇವೆ. ಇಲ್ಲಿ ಹೆಸರು ಕೈಬಿಡುವಿಕೆ ಕುರಿತು ಶೇ. 3.29 ಮೇಲ್ಮನವಿಗಳಿವೆ.

ಕೇವಲ ಈ ಅಂಕಿಅಂಶಗಳನ್ನು ಗಮನಿಸಿದರೂ, ಎಲ್ಲ ಮೇಲ್ಮನವಿಗಳೂ ತಮ್ಮದೇ ಹೆಸರು ಕೈಬಿಡುವಿಕೆಯನ್ನು ಪ್ರಶ್ನಿಸಿ ಮತದಾರರು ಸಲ್ಲಿಸಿದವು ಎಂದು ಹೇಳಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

ಮತದಾರರ ಸಂಖ್ಯೆ ಶೇ. 19ರಷ್ಟು ಇಳಿಕೆ:

2025ರ ಕರಡು ಮತದಾರರ ಪಟ್ಟಿ ಮತ್ತು 2026ರ ಫೆಬ್ರುವರಿಯ ಅಂತಿಮ ಪಟ್ಟಿಯ ನಡುವೆ ಈ 11 ಕ್ಷೇತ್ರಗಳ ಮತದಾರರ ಸಂಖ್ಯೆ 29,10,219ರಿಂದ 23,57,325ಕ್ಕೆ ಇಳಿದಿದೆ. ಅಂದರೆ 5,52,894 ಮತದಾರರು ಕಡಿಮೆಯಾಗಿದ್ದು, ಶೇ. 19ರಷ್ಟು ಇಳಿಕೆಯಾಗಿದೆ.

ರಾಜ್ಯಾದ್ಯಂತ ಮತದಾರರ ಸಂಖ್ಯೆಯಲ್ಲಿನ ಇಳಿಕೆ ಶೇ. 15.2ರಷ್ಟಿತ್ತು.

ಶಂಶೇರ್‌ಗಂಜ್‌ನಲ್ಲಿ ಮತದಾರರ ಸಂಖ್ಯೆ ಶೇ 36.2, ಲಾಲ್‌ಗೋಲಾದಲ್ಲಿ ಶೇ 26.1 ಮತ್ತು ರಘುನಾಥಗಂಜ್‌ನಲ್ಲಿ ಶೇ 24.8ರಷ್ಟು ಕುಸಿದಿದೆ.

ಅನರ್ಹಗೊಂಡವರಲ್ಲಿ ಶೇ. 97.6ರಷ್ಟು ಮುಸ್ಲಿಮರು!:

ಈ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಇಲ್ಲಿ ಮುಸ್ಲಿಮರ ಸರಾಸರಿ ಪ್ರಮಾಣ ಶೇ. 63.7ರಷ್ಟಿದೆ. ಭಗಬಂಗೋಲಾದಲ್ಲಿ ಇದು ಶೇ. 79.6ರಷ್ಟಿದೆ.

ಈ ಕ್ಷೇತ್ರಗಳಲ್ಲಿ ಅನರ್ಹರೆಂದು ಗುರುತಿಸಲ್ಪಟ್ಟ ಮತದಾರರ ಪೈಕಿ ಶೇ. 97.6ರಷ್ಟು ಮಂದಿ ಮುಸ್ಲಿಮರು ಎಂದು ವರದಿ ತಿಳಿಸಿದೆ.

ಪಶ್ಚಿಮ ಬಂಗಾಳದಾದ್ಯಂತ ಮತದಾರರ ಪಟ್ಟಿಯಿಂದ ಕೈಬಿಡಲಾದ ಒಟ್ಟು ಮುಸ್ಲಿಂ ಮತದಾರರ ಪೈಕಿ ಸುಮಾರು ಐದನೇ ಒಂದು ಭಾಗದಷ್ಟು ಮಂದಿ ಈ 11 ಕ್ಷೇತ್ರಗಳಿಗೇ ಸೇರಿದವರಾಗಿದ್ದಾರೆ.

11 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಅನರ್ಹರೆಂದು ಘೋಷಿಸಲ್ಪಟ್ಟವರಲ್ಲಿ ಮುಸ್ಲಿಮರ ಪ್ರಮಾಣ ಶೇ 95ಕ್ಕಿಂತ ಹೆಚ್ಚಿದೆ.

ಶಂಶೇರ್‌ಗಂಜ್‌ನಲ್ಲಿ ಒಟ್ಟು ಮುಸ್ಲಿಂ ಮತದಾರರ ಪೈಕಿ ಶೇ. 39.1ರಷ್ಟು ಹೆಸರುಗಳನ್ನು ಕೈಬಿಡಲಾಗಿದೆ. ಲಾಲ್‌ಗೋಲಾದಲ್ಲಿ ಈ ಪ್ರಮಾಣ ಶೇ. 30.7ರಷ್ಟಿದೆ.

ರಾಜ್ಯದಾದ್ಯಂತ ಮತದಾರರ ಪಟ್ಟಿಯ ಕನಿಷ್ಠ ಅರ್ಧದಷ್ಟು ಹೆಸರುಗಳನ್ನು ಅಳಿಸಲಾಗಿರುವ 49 ಮತಗಟ್ಟೆಗಳ ಪೈಕಿ 38 ಮತಗಟ್ಟೆಗಳು ಮುರ್ಷಿದಾಬಾದ್‌ ನಲ್ಲಿವೆ ಎಂದು ಈ ಹಿಂದೆ ಪ್ರಕಟವಾದ ವರದಿಯೊಂದು ತಿಳಿಸಿತ್ತು.

ರಾಜ್ಯದಲ್ಲಿ ಅನರ್ಹಗೊಂಡ ಮುಸ್ಲಿಂ ಮತದಾರರ ಪೈಕಿ ಶೇ. 20ರಷ್ಟು ಮಂದಿ ಈ ಕ್ಷೇತ್ರಗಳಲ್ಲಿದ್ದಾರೆ. ಇದೇ ಕ್ಷೇತ್ರಗಳಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಹೆಸರು ಸೇರ್ಪಡೆಯನ್ನು ವಿರೋಧಿಸಿ ಹೆಚ್ಚಿನ ಸಂಖ್ಯೆಯ ಮೇಲ್ಮನವಿಗಳನ್ನು ಸಲ್ಲಿಸಿದೆ ಎಂದು ವರದಿ ಹೇಳಿದೆ.

‘ಬಾಕಿ ಪ್ರಕರಣಗಳ ವಿಲೇವಾರಿಗೆ 174 ವರ್ಷ ಬೇಕು’!

ನ್ಯಾಯಮಂಡಳಿಯ ಮುಂದಿರುವ ಪ್ರಕರಣಗಳ ಪ್ರಮಾಣವು ಅಸಾಧಾರಣವಾಗಿದೆ ಎಂದು ನ್ಯಾಯಮೂರ್ತಿ ಚಟರ್ಜಿ ಹೇಳಿದ್ದಾರೆ.

ಒಂದು ಮೇಲ್ಮನವಿಯ ವಿಚಾರಣೆ ನಡೆಸಿ, ಸೂಕ್ತ ಕಾರಣಗಳನ್ನು ಒಳಗೊಂಡ ಆದೇಶ ಬರೆಯಲು ಕನಿಷ್ಠ 30 ನಿಮಿಷ ಬೇಕಾಗುತ್ತದೆ. ಹೀಗಾಗಿ ದಿನಕ್ಕೆ ಗರಿಷ್ಠ 10 ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಈ ವೇಗದಲ್ಲಿ ವರ್ಷದ ಪ್ರತಿದಿನವೂ ಕೆಲಸ ಮಾಡಿದರೂ, ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸುಮಾರು 174 ವರ್ಷಗಳು ಬೇಕಾಗುತ್ತವೆ ಎಂದು ಆಯೋಗದ ಅಂಕಿಅಂಶಗಳನ್ನು ಆಧರಿಸಿ ಅವರು ಹೇಳಿದ್ದಾರೆ.

ನ್ಯಾಯಮಂಡಳಿಯ ಮುಂದೆ ಬಂದ 6,35,983 ಮೇಲ್ಮನವಿಗಳ ಪೈಕಿ 6,34,156 ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಮೇಲ್ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಿಂದ ಕೈಬಿಡಲಾದ ವ್ಯಕ್ತಿಗೆ ಮತ ಚಲಾಯಿಸುವ ಹಕ್ಕು ಸಿಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2026ರ ಎಪ್ರಿಲ್ 13ರಂದು ತೀರ್ಪು ನೀಡಿತ್ತು.

ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 23 ಮತ್ತು 29ರಂದು ಮತದಾನ ನಡೆದಿತ್ತು. ಬಳಿಕ BJP ಪಕ್ಷ ಅಧಿಕಾರಕ್ಕೆ ಬಂದಿತು.

ನ್ಯಾಯಮೂರ್ತಿ ಚಟರ್ಜಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧಾರ:

ಸೆಪ್ಟೆಂಬರ್ 25ರಂದು ಬರೆದ ಪತ್ರದಲ್ಲಿ ನ್ಯಾಯಮೂರ್ತಿ ಇಂದ್ರಜಿತ್ ಚಟರ್ಜಿ ಅವರು ನವೆಂಬರ್ 2ರಿಂದ ಜಾರಿಗೆ ಬರುವಂತೆ ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಾಧೀಶ ಹುದ್ದೆಯಿಂದ ಕೆಳಗಿಳಿಯುವ ತಮ್ಮ ನಿರ್ಧಾರವನ್ನು ಕಲ್ಕತ್ತಾ ಹೈಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿದ್ದಾರೆ.

ಸಾಲ್ಟ್ ಲೇಕ್‌ ನಲ್ಲಿರುವ ತಮ್ಮ ನಿವಾಸದಿಂದ ಜೋಕಾದಲ್ಲಿರುವ ನ್ಯಾಯಮಂಡಳಿ ಕಚೇರಿಗೆ ಪ್ರತಿದಿನ ಸುಮಾರು 70 ಕಿ.ಮೀ. ಪ್ರಯಾಣಿಸಬೇಕಾಗಿರುವುದು ತಮ್ಮ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಒಂಭತ್ತು ದಿನಗಳ ಮೊದಲು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರತಿಕ್ರಿಯೆಯಲ್ಲಿ ಚುನಾವಣಾ ಆಯೋಗವು ಪರ್ಯಾಯ ವ್ಯವಸ್ಥೆಯೊಂದನ್ನು ಪ್ರಸ್ತಾಪಿಸಿತ್ತು. ತಾನು ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಯಾವುದೇ ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಗಿಲ್ಲ ಎಂದು ಆಯೋಗ ತಿಳಿಸಿತ್ತು.

ಹೀಗಾಗಿ ಮೇಲ್ಮನವಿ ನ್ಯಾಯಮಂಡಳಿಗಳ ಅಧ್ಯಕ್ಷತೆ ವಹಿಸುವ ನ್ಯಾಯಾಂಗ ಅಧಿಕಾರಿಗಳು ತಮ್ಮ ನಿವಾಸ ಸೇರಿದಂತೆ ಸೂಕ್ತವೆಂದು ಪರಿಗಣಿಸುವ ಯಾವುದೇ ಸ್ಥಳದಿಂದ ವಿಚಾರಣೆ ನಡೆಸಬಹುದು. ಇದರಿಂದ ಪ್ರಯಾಣದಲ್ಲಿ ವ್ಯರ್ಥವಾಗುವ ಸಮಯವನ್ನು ಕಡಿಮೆ ಮಾಡಿ ಪ್ರಕರಣಗಳ ವಿಲೇವಾರಿಗೆ ಸಹಾಯವಾಗಲಿದೆ ಎಂದು ಆಯೋಗ ಹೇಳಿತ್ತು.

ಅದೇ ದಾಖಲೆಯಲ್ಲಿ ಮೇಲ್ಮನವಿ ನ್ಯಾಯಮಂಡಳಿಗಳ ಸಂಖ್ಯೆಯನ್ನು 19ರಿಂದ 42ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನೂ ಆಯೋಗ ಮುಂದಿಟ್ಟಿತ್ತು.

ಕಲ್ಕತ್ತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರೂ ಮೇ ತಿಂಗಳಲ್ಲಿ ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor