ದಿಲ್ಲಿ | CEC ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ತೀವ್ರ ; ಜಂತರ್ ಮಂತರ್‌ನಲ್ಲಿ ಸೌರಭ್ ಭಾರದ್ವಾಜ್, AAP ಕಾರ್ಯಕರ್ತರು ಪೊಲೀಸ್ ವಶಕ್ಕೆ
BNSS ಸೆಕ್ಷನ್ 163ರಡಿ ನಿರ್ಬಂಧ ವಿಧಿಸಿದ ಪೊಲೀಸರು
Photo Credit : indiatoday.in
ಹೊಸದಿಲ್ಲಿ : ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮ ಮತ್ತು ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ದಿಲ್ಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿದ ಆಪ್ ನಾಯಕ ಸೌರಭ್ ಭಾರದ್ವಾಜ್ ಮತ್ತು ಹಲವಾರು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ಯಾವುದೇ ಕಾರು ಬಳಸದೆ ನಾನು ಜಂತರ್ ಮಂತರ್‌ಗೆ ಬಂದಿದ್ದೇನೆ. ನೀವೂ ಇಲ್ಲಿಗೆ ಬರಬಹುದು, ಮಧ್ಯಾಹ್ನದ ವೇಳೆ ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್‌ಗೆ ಆಗಮಿಸಿ ಚುನಾವಣಾ ಆಯೋಗದ ವಿರುದ್ಧ ತಮ್ಮ ಧ್ವನಿ ಎತ್ತಲಿದ್ದಾರೆ ಎಂಬ ವಿಶ್ವಾಸವಿದೆ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಪ್ರತಿಭಟನೆಗೆ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ನಮಗೆ ಹೇಳುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿಗಾಗಿ ಆಪ್ ಆರು ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಿತ್ತು” ಎಂದು ಈ ವೇಳೆ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಈ ಮಧ್ಯೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅನುಮತಿಯಿಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಸಾರ್ವಜನಿಕ ಸಭೆ, ಸಮಾವೇಶ, ಮೆರವಣಿಗೆ, ಪ್ರತಿಭಟನೆ, ಹಾಗೂ ಧರಣಿಗಳನ್ನು ನಡೆಸುವುದನ್ನು ನಿರಾಕರಿಸಲಾಗಿದೆ.
ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರವನ್ನು ಖಚಿತಪಡಿಸುವ ಕಾರಣ ನೀಡಿ ದಿಲ್ಲಿ ಪೊಲೀಸರು BNSSನ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ.