ದೀಪಕ್ ಕುಮಾರ್

ಡೆಹ್ರಾಡೂನ್: ಉತ್ತರಾಖಂಡದ ಕೋಟ್ದ್ವಾರದಲ್ಲಿ ಈ ವರ್ಷದ ಆರಂಭದಲ್ಲಿ ವೃದ್ಧ ಮುಸ್ಲಿಂ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದ ಬಜರಂಗದಳದ ಸದಸ್ಯರನ್ನು ಪ್ರಶ್ನಿಸಿ ಗಮನ ಸೆಳೆದಿದ್ದ ದೀಪಕ್ ಕುಮಾರ್ ಅಲಿಯಾಸ್ ‘ಮುಹಮ್ಮದ್’ ದೀಪಕ್ ಅವರನ್ನು ಸ್ಥಳೀಯ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಕಾಮೆಂಟ್‌ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೌರಿ ಗಢ್ವಾಲ್‌ ಎಸ್‌ಎಸ್‌ಪಿ ಸರ್ವೇಶ್ ಪನ್ವಾರ್ ಅವರ ಪ್ರಕಾರ, ವ್ಯಾಪಾರಿ ಸಂಜೀವ್ ಟೋಂಕ್ ನೀಡಿದ ದೂರಿನ ಆಧಾರದ ಮೇಲೆ ದೀಪಕ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ 115 — ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು ಮತ್ತು ಸೆಕ್ಷನ್‌ 351 — ಅಪರಾಧಾತ್ಮಕ ಬೆದರಿಕೆ ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಟೋಂಕ್ ಅವರು ಫೇಸ್‌ಬುಕ್‌ನಲ್ಲಿ ದೀಪಕ್‌ಗೆ ಸಂಬಂಧಿಸಿದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದರು. ಆ ಕಾಮೆಂಟ್‌ ದೀಪಕ್‌ಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಅವರು ಟೋಂಕ್ ಅವರ ಅಂಗಡಿಗೆ ತೆರಳಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂಬುದು ದೂರಿನಲ್ಲಿರುವ ಆರೋಪ.

ಈ ಎರಡೂ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆಯ ಅವಧಿ ಏಳು ವರ್ಷಕ್ಕಿಂತ ಕಡಿಮೆ ಇರುವುದರಿಂದ, ಸಾಮಾನ್ಯವಾಗಿ ತಕ್ಷಣದ ಬಂಧನಕ್ಕೆ ಸಂಬಂಧಿಸಿದ ಕಾನೂನು ನಿಯಮಗಳು ಅನ್ವಯಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ, ಅಪರಾಧ ಸಂಭವಿಸುವುದನ್ನು ತಡೆಯುವ ಉದ್ದೇಶದಿಂದ BNSS ಸೆಕ್ಷನ್‌ 170ರ ಅಡಿಯಲ್ಲಿ ದೀಪಕ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಅವರನ್ನು ಶುಕ್ರವಾರ ಸಂಬಂಧಿತ ಕಾನೂನು ಕ್ರಮಕ್ಕಾಗಿ ಎಸ್‌ಡಿಎಂ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಉಜ್ಜಯಿನಿ ಮಸೀದಿ ವಿಚಾರದ ಬಗ್ಗೆ ದೀಪಕ್‌ ಪೋಸ್ಟ್ :

ಸೆಪ್ಟೆಂಬರ್‌ 28ರಂದು ದೀಪಕ್ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸುಮಾರು ಎರಡು ನಿಮಿಷಗಳ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಉಜ್ಜಯಿನಿಯ ಮುಸ್ಲಿಮರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.

ಆ ಪೋಸ್ಟ್‌ಗೆ 19,000ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸುಮಾರು 750 ಕಾಮೆಂಟ್‌ಗಳು ಬಂದಿದ್ದವು. ಅವುಗಳಲ್ಲಿ ಒಂದು ಪ್ರತಿಕೂಲ ಕಾಮೆಂಟ್‌ ಸಂಜೀವ್ ಟೋಂಕ್ ಅವರಿಂದ ಬಂದಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿರುವ ಕೋಟ್ದ್ವಾರದ ನಿವಾಸಿಯೊಬ್ಬರ ಪ್ರಕಾರ, ಬುಧವಾರ ಮಧ್ಯಾಹ್ನ ದೀಪಕ್ ಟೋಂಕ್ ಅವರ ಅಂಗಡಿಗೆ ತೆರಳಿದ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor