AI ಹೂಡಿಕೆಗೆ ಒತ್ತು; 8,000 ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ
Photo|timesofindia.indiatimes
ಸ್ಯಾನ್ ಫ್ರಾನ್ಸಿಸ್ಕೊ, ಮೇ 20: ಸಾಮಾಜಿಕ ಜಾಲತಾಣ ದಿಗ್ಗಜ ಮೆಟಾ ತನ್ನ ಜಾಗತಿಕ ಮಟ್ಟದ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದ್ದು, ಸುಮಾರು 8,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಕಂಪೆನಿಯ ಒಟ್ಟು ಸಿಬ್ಬಂದಿಯ ಶೇ 10ರಷ್ಟಾಗಲಿದೆ ಎಂದು ವರದಿಯಾಗಿದೆ.
ಬ್ಲೂಮ್‌ಬರ್ಗ್ ವರದಿ ಪ್ರಕಾರ, ಮೊದಲ ಹಂತದಲ್ಲಿ ಸಿಂಗಾಪುರ ಕಚೇರಿಯ ಉದ್ಯೋಗಿಗಳಿಗೆ ಸ್ಥಳೀಯ ಕಾಲಮಾನ ಬೆಳಿಗ್ಗೆ 4 ಗಂಟೆ ಸುಮಾರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಬೆಳಿಗ್ಗೆ 1.30ಕ್ಕೆ ಸಮಾನವಾಗಿದೆ. ಕಂಪೆನಿಯು ಈ ವರ್ಷ AI ಕ್ಷೇತ್ರದಲ್ಲಿ ಶತಕೋಟಿ ಡಾಲರ್‌ಗಳ ಹೂಡಿಕೆಗೆ ಮುಂದಾಗಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಮೆಟಾದಲ್ಲಿ ಪ್ರಸ್ತುತ ಜಾಗತಿಕವಾಗಿ ಸುಮಾರು 78,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಮರು ನಿಯೋಜನೆ ಮತ್ತು ಉದ್ಯೋಗ ಕಡಿತದ ಬಳಿಕ ಈ ಸಂಖ್ಯೆ ಇಳಿಕೆಯಾಗಲಿದೆ.
ಇದಕ್ಕೂ ಮೊದಲು ಒರಾಕಲ್ ಸಂಸ್ಥೆಯೂ ಬೆಳಿಗ್ಗೆ 6 ಗಂಟೆಗೆ ಇಮೇಲ್ ಕಳುಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಹಿಂದಿನ ವರದಿಗಳ ಪ್ರಕಾರ, ವಿವಿಧ ದೇಶಗಳ ಕಾಲಮಾನವನ್ನು ಆಧರಿಸಿ ಮೆಟಾ ಹಂತ ಹಂತವಾಗಿ ವಜಾಗೊಳಿಸುವ ಮಾಹಿತಿಯನ್ನು ಕಳುಹಿಸುತ್ತಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ಪ್ರದೇಶಗಳ ಸಿಬ್ಬಂದಿಗೆ ಬುಧವಾರ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಮೆಟಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಜನೆಲ್ ಗೇಲ್ ಅವರು ಆಂತರಿಕ ಪ್ರಕಟಣೆಯಲ್ಲಿ, 8,000 ಉದ್ಯೋಗ ಕಡಿತದ ಜೊತೆಗೆ ಸುಮಾರು 7,000 ಉದ್ಯೋಗಿಗಳನ್ನು AI ಆಧಾರಿತ ಹೊಸ ತಂಡಗಳಿಗೆ ಮರು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ಸಣ್ಣ ಹಾಗೂ ವೇಗವಾಗಿ ಕಾರ್ಯನಿರ್ವಹಿಸುವ ತಂಡಗಳ ಮೇಲೆ ಗಮನಹರಿಸುವ ಉದ್ದೇಶದಿಂದ ನಿರ್ವಹಣಾ ಹುದ್ದೆಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹಂತದ ಉದ್ಯೋಗ ಕಡಿತವು ಮುಖ್ಯವಾಗಿ ಎಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವರ್ಷದ ಅಂತ್ಯದೊಳಗೆ ಮತ್ತಷ್ಟು ಉದ್ಯೋಗ ಕಡಿತ ನಡೆಯಬಹುದು ಎಂಬ ಸೂಚನೆಗಳು ದೊರೆತಿವೆ.
ಪುನರ್‌ರಚನೆಯ ಭಾಗವಾಗಿ ಕಂಪೆನಿಯು ಸುಮಾರು 6,000 ಖಾಲಿ ಹುದ್ದೆಗಳನ್ನು ರದ್ದುಪಡಿಸಿದೆ. ““ಸಣ್ಣ ತಂಡಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವುದರಿಂದ ಕೆಲಸದ ವೇಗ ಮತ್ತು ಉತ್ಪಾದಕತೆ ಹೆಚ್ಚಲಿದೆ” ಎಂದು ಜನೆಲ್ ಗೇಲ್ ತಿಳಿಸಿದ್ದಾರೆ.
ಮಾರ್ಕ್ ಝುಕರ್‌ಬರ್ಗ್ ನೇತೃತ್ವದ ಮೆಟಾ AI ಕ್ಷೇತ್ರವನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ. ಕಂಪೆನಿಯು ಈ ವರ್ಷ 125 ಬಿಲಿಯನ್ ಡಾಲರ್‌ನಿಂದ 145 ಬಿಲಿಯನ್ ಡಾಲರ್‌ವರೆಗೆ ವೆಚ್ಚ ಮಾಡಲು ಯೋಜಿಸಿರುವುದಾಗಿ ಕಳೆದ ತಿಂಗಳು ತಿಳಿಸಿತ್ತು. ಅದರ ಬಹುಪಾಲು AI ಅಭಿವೃದ್ಧಿಗೆ ಮೀಸಲಾಗಲಿದೆ.
AI ಕ್ಷೇತ್ರದ ಸ್ಪರ್ಧೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇತರೆ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗ ಕಡಿತದ ದಾರಿಗೆ ಸಾಗಿವೆ. ಸಿಸ್ಕೋ ಕಳೆದ ವಾರ 4,000 ಹುದ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿತ್ತು. ಮೈಕ್ರೋಸಾಫ್ಟ್, Amazon ಸೇರಿದಂತೆ ಹಲವು ಕಂಪೆನಿಗಳು ಇತ್ತೀಚೆಗೆ ಉದ್ಯೋಗ ಕಡಿತ ಅಥವಾ ಸ್ವಯಂಪ್ರೇರಿತ ನಿರ್ಗಮನ ಯೋಜನೆಗಳನ್ನು ಪ್ರಕಟಿಸಿವೆ.