ಪಾಕಿಸ್ತಾನಕ್ಕೆ ಐಎಂಎಫ್ ನೆರವು ತಡೆಯದ ಟ್ರಂಪ್ ಆಡಳಿತದ ಮೇಲೆ ಅಮೆರಿಕ ಮಿಲಿಟರಿ ತಂತ್ರಗಾರ ಕಿಡಿ
ಮೈಕಲ್ ರುಬಿನ್ PC: screengrab/ x.com/ANI
ವಾಷಿಂಗ್ಟನ್: ಭಯೋತ್ಪಾದಕರಿಗೆ ನೆರವಾಗುವುದನ್ನೇ ಸರ್ಕಾರಿ ನೀತಿಯಾಗಿ ಹೊಂದಿರುವ ಪಾಕಿಸ್ತಾನಕ್ಕೆ ನೂರು ಕೋಟಿ ಡಾಲರ್ ಐಎಂಎಫ್ ಪ್ಯಾಕೇಜ್ ನೀಡುವುದನ್ನು ತಡೆಯದ ಟ್ರಂಪ್ ಆಡಳಿತವನ್ನು ಖ್ಯಾತ ಸೇನಾ ತಂತ್ರಗಾರ, ಅಮೆರಿಕನ್ ಎಂಟರ್ ಪ್ರೈಸಸ್ ಇನ್ಸ್ಟಿಟ್ಯೂಟ್ ನ ಮೈಕಲ್ ರೂಬಿನ್ ಕಟುವಾಗಿ ಟೀಕಿಸಿದ್ದಾರೆ.
"ಪಾಕಿಸ್ತಾನಕ್ಕೆ ಹಣ ಕಳುಹಿಸುವ ಮೂಲಕ ಐಎಂಎಫ್ ಚೀನಾಕ್ಕೆ ಕೂಡಾ ನೆರವು ನೀಡಿದಂತಾಗಿದೆ. ಪಾಕಿಸ್ತಾನ ಇಂದು ಚೀನಾದ ತುಂಡು ರಾಜ್ಯವಾಗಿದ್ದು, ಆ ದೇಶದ ಗ್ವಾದರ್ ಬಂದರು ಚೀನಾದ ಬೇಹುಗಾರಿಕೆಗೆ ಮೂಲ ಸ್ಥಾನವಾಗಿದೆ. ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್, ಇಸ್ಲಾಮಾಬಾದ್ ನ 40 ಶತಕೋಟಿ ಡಾಲರ್ ಮೊತ್ತವನ್ನು ಅಪಾಯಕ್ಕೆ ಸಿಲುಕಿಸಿದೆ" ಎಂದು 2021ರವರೆಗೆ ನೇವಲ್ ಸ್ನಾತಕೋತ್ತರ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ರೂಬಿನ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಸೀಮಿತ ಅವಧಿಯ ಸಂಘರ್ಷದಲ್ಲಿ ಭಾರತ ಜಯ ಸಾಧಿಸಿದೆ ಎಂಬ ಅಮೆರಿಕದ ಭದ್ರತಾ ತಜ್ಞರ ಅಭಿಪ್ರಾಯಕ್ಕೆ ರೂಬಿನ್ ದನಿಗೂಡಿಸಿದರು. ಪಾಕಿಸ್ತಾನದ ಕ್ರಮದಿಂದ ಭಾರತಕ್ಕೆ ಸಂಕಷ್ಟ ಒದಗಿತ್ತು ಎಂಬ ಹೇಳಿಕೆಯನ್ನು ಅಲ್ಲಗಳೆದ ರೂಬಿನ್ ಅವರು, ಭಯಗೊಂಡ ನಾಯಿಯು ಬಾಲ ಮುಚ್ಚಿಕೊಂಡು ಹೋಗುವಂತೆ ಪಾಕಿಸ್ತಾನವು ಶಾಂತಿ ಒಪ್ಪಂದಕ್ಕೆ ಮೊರೆ ಹೋಯಿತು ಎಂದು ಲೇವಡಿ ಮಾಡಿದ್ದಾರೆ.
"ತನ್ನ ಮುಖ ಮುಚ್ಚಿಕೊಳ್ಳಲು ಪಾಕಿಸ್ತಾನ ಸೇನೆ ಏನೇ ಹೇಳಲಿ, ವಾಸ್ತವವಾಗಿ ಅದು ತೀರಾ ಹೀನಾಯವಾಗಿ ಸೋತಿದೆ" ಎಂದು ರೂಬಿನ್ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಭಾರತ ಪ್ರಮುಖ ವಾಯುನೆಲೆ ಮತ್ತು ಪ್ರಮುಖ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ ಮತ್ತೂ ಮೇಲುಗೈ ಸಾಧಿಸಿದ್ದಾಗಿ ಹೇಳಿಕೊಳ್ಳುತ್ತಿದೆ" ಎಂದು ವಿಶ್ಲೇಷಿಸಿದ್ದಾರೆ.