Photo Credit : PTI 

ಹೊಸದಿಲ್ಲಿ: ದಿಲ್ಲಿಯಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಸಲು ನಿಗದಿಪಡಿಸಲಾಗಿದ್ದ ಜಂತರ್ ಮಂತರ್‌ನ ಮಾನ್ಯತೆಯನ್ನು ರದ್ದುಗೊಳಿಸಲಾಗಿದ್ದು, ಪ್ರತಿಭಟನೆಗಳಿಗೆ ಮೂರು ಪರ್ಯಾಯ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸೋಮವಾರ ಹೊರಡಿಸಲಾದ ದಿಲ್ಲಿ ಪೊಲೀಸರ ಸುತ್ತೋಲೆ ತಿಳಿಸಿದೆ.

ನಾಗರಿಕರು ತಮ್ಮ ಪ್ರತಿಭಟಿಸುವ ಮತ್ತು ಧರಣಿ ಆಯೋಜಿಸುವ ಹಕ್ಕನ್ನು ಚಲಾಯಿಸಲು ಪರ್ಯಾಯ ಸ್ಥಳಗಳನ್ನು ಗುರುತಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯವು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸಿನ ಆಧಾರದಲ್ಲಿ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಹೊಸ ಪ್ರತಿಭಟನಾ ಸ್ಥಳಗಳಾಗಿ ಗುರುತಿಸಲಾಗಿದೆ.

ಅತಿ ಭದ್ರತೆಯ ಕೇಂದ್ರ ದಿಲ್ಲಿಯಲ್ಲಿರುವ ಜಂತರ್ ಮಂತರ್ ಈವರೆಗೆ ಪ್ರತಿಭಟನೆ ಮತ್ತು ಧರಣಿಗಳಿಗೆ ಅಧಿಕೃತವಾಗಿ ನಿಗದಿಪಡಿಸಲಾದ ಪ್ರಮುಖ ಸ್ಥಳವಾಗಿತ್ತು.

ಹೊಸದಾಗಿ ಗುರುತಿಸಲಾದ ಮೂರು ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಧರಣಿಗಳನ್ನು ಆಯೋಜಿಸುವ ಕುರಿತು ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ)ಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor