ಅಭಿಜೀತ್ ದೀಪ್ಕೆ | Photo Credit : PTI 

ಹೊಸದಿಲ್ಲಿ: ಜಂತರ್ ಮಂತರ್‌ನ ಅಧಿಕೃತ ಪ್ರತಿಭಟನಾ ಸ್ಥಳದ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೋಮವಾರ ಟೀಕಿಸಿದ್ದಾರೆ.

ಇದು ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ.

‘‘ಅವರು ಜಂತರ್ ಮಂತರ್‌ನ ಅಧಿಕೃತ ಪ್ರತಿಭಟನಾ ಸ್ಥಳದ ಸ್ಥಾನ ಮಾನವನ್ನು ರದ್ದುಪಡಿಸಿದ್ದಾರೆ. ಹೌದು, ಜಂತರ್ ಮಂತರ್ ಇನ್ನು ಮುಂದೆ ಪ್ರತಿಭಟನಾ ಸ್ಥಳವಾಗಿ ಉಳಿಯುವುದಿಲ್ಲ. ಹೇಡಿ ಸರ್ವಾಧಿಕಾರಿ ಇದನ್ನು ಈಗಾಗಲೇ ಯುದ್ಧ ಭೂಮಿಯನ್ನಾಗಿ ಮಾಡಿದ್ದಾನೆ. ಈಗ ಇಡೀ ದೇಶವೇ ಜಂತರ್ ಮಂತರ್ ಆಗಲಿದೆ’’ ಎಂದು ದೀಪ್ಕೆ ಎಕ್ಸ್‌ನಲ್ಲಿ ಬರೆದಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಅವರು, ‘‘ಇಂದು ಮೋದಿ ಜಂತರ್ ಮಂತರ್‌ನ ಅಧಿಕೃತ ಪ್ರತಿಭಟನಾ ಸ್ಥಳದ ಸ್ಥಾನಮಾನವನ್ನು ರದ್ದುಗೊಳಿಸಿದ್ದಾರೆ. ನಾಳೆ ಅವರು ಪ್ರಜಾಪ್ರಭುತ್ವವನ್ನೇ ರದ್ದುಗೊಳಿಸುತ್ತಾರೆ. ಸರ್ವಾಧಿಕಾರಿಯ ಸಮಸ್ಯೆ ಎಂದಿಗೂ ಪ್ರತಿಭಟನಾ ಸ್ಥಳವಲ್ಲ. ಜನರು ಪ್ರತಿಭಟನೆ ಮಾಡುತ್ತಾರೆ ಎಂಬುದೇ ಅವರಿಗೆ ಸಮಸ್ಯೆ’’ ಎಂದಿದ್ದಾರೆ.

ದಿಲ್ಲಿ ಪೊಲೀಸರ ನಿರ್ಧಾರವನ್ನು ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಶ್ ರಂಕಾ ಕೂಡ ಖಂಡಿಸಿದ್ದಾರೆ. ಇದು ಶಾಂತಿಯುತ ಸಭೆ ಸೇರುವ ಹಕ್ಕಿನ ಮೇಲಿನ ದಾಳಿಯಾಗಿದೆ ಎಂದು ಸೌರವ್ ದಾಸ್ ಬಣ್ಣಿಸಿದ್ದಾರೆ. ಪೊಲೀಸರು ಸೂಚಿಸಿರುವ ಪರ್ಯಾಯ ಸ್ಥಳಗಳ ಬಗ್ಗೆ ರಂಕಾ ಪ್ರಶ್ನಿಸಿದ್ದಾರೆ.

‘‘ನರೇಂದ್ರ ಮೋದಿ ಜಂತರ್ ಮಂತರ್ ಬಗ್ಗೆ ಏಕೆ ಭಯಪಡುತ್ತಾರೆ ? ಜಂತರ್ ಮಂತರ್ ಭಾರತದ ಜನರಿಗೆ ಸೇರಿದೆ’’ ಎಂದು ದಾಸ್ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಗೃಹ ಸಚಿವಾಲಯವು ನಾಗರಿಕರು, ಸಂಘಟನೆಗಳು ಅಥವಾ ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor