ನೇಹಾ ಬೋರಾ | Photo Credit : timesofindia

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರವಿವಾರ ನಡೆದ ಪ್ರತಿಭಟನೆಯ ವೇಳೆ AISA ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು ಕಿಕ್ಕಿರಿದ ಕೋಣೆಯಿರುವ ಬಸ್‌ ಗಳಲ್ಲಿ ಇರಿಸಲಾಗುತ್ತಿದೆ. ಪುರುಷ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ವಶಕ್ಕೆ ಪಡೆಯಲು ಬಳಸುವ ಬಸ್‌ ನಲ್ಲಿ ನಾಲ್ಕು ಪ್ರತ್ಯೇಕ ಕೋಣೆಗಳಿದ್ದು, ಅವುಗಳ ಒಳಗೆ ಉಸಿರಾಡಲೂ ಜಾಗವಿಲ್ಲ ಎಂದು ಬೋರಾ ಹೇಳಿದ್ದಾರೆ.

'ಇದು ಆ ಬಸ್. ಇದರಲ್ಲಿ ನಾಲ್ಕು ಕೋಣೆಗಳಿವೆ. ಉಸಿರಾಡಲೂ ಜಾಗವಿಲ್ಲ. ವಶಕ್ಕೆ ಪಡೆಯುವ ಬಸ್‌ಗಳನ್ನು ಜೈಲುಗಳನ್ನಾಗಿ ಪರಿವರ್ತಿಸಲಾಗುತ್ತಿದೆಯೇ? CRPF ದೇಶದ ಸಾಮಾನ್ಯ ಜನರ ವಿರುದ್ಧ ಯುದ್ಧ ಸಾರುತ್ತಿದೆ. ಕೇವಲ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಇಷ್ಟೊಂದು ಹಿಂಸಾಚಾರವೇಕೆ?' ಎಂದು ಅವರು ಪ್ರಶ್ನಿಸಿದ್ದಾರೆ.

ರಾಜಧಾನಿಯಾದ್ಯಂತ ಬಿಗಿ ಭದ್ರತೆ ನಡುವೆಯೂ ಪ್ರತಿಭಟನಾಕಾರರು ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಈ ವೇಳೆ ವಿಜಯ್ ಚೌಕ್ ಬಳಿ ನೇಹಾ ಬೋರಾ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರತಾ ಸಿಬ್ಬಂದಿ ತಡೆಯಲು ಮುಂದಾಗುವ ಮೊದಲು ಬೋರಾ ಮತ್ತು ಇತರ ಸದಸ್ಯರು ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

'ಕಾಕ್ರೋಚ್ ಜನತಾ ಪಾರ್ಟಿ' (CJP) ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI), AISA ಮತ್ತು ಕ್ರಾಂತಿಕಾರಿ ಯುವ ಸಂಘಟನೆ (KYS) ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಪ್ರತಿಭಟನೆಗೆ ಸಂಬಂಧಿಸಿದಂತೆ ರವಿವಾರ ಹೊಸದಿಲ್ಲಿಯ ವಿವಿಧೆಡೆ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

ವಶಕ್ಕೆ ಪಡೆದವರಲ್ಲಿ ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಕೂಡ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಂಜರದಂತಹ ಪೊಲೀಸ್ ವ್ಯಾನ್‌ ಗಳಲ್ಲಿ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು SFI ಆರೋಪಿಸಿದೆ. ಜಾನ್ ಬ್ರಿಟ್ಟಾಸ್ ಅವರ ಮೇಲೂ ಪೊಲೀಸರು ಹಲ್ಲೆ ನಡೆಸಿ, ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆ ಬದಿ ಬಿಟ್ಟುಹೋದರು ಎಂದು ಸಂಘಟನೆ ಹೇಳಿಕೊಂಡಿದೆ. ಪೊಲೀಸರ ದೌರ್ಜನ್ಯದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ದಿಲ್ಲಿಯ ಸೇಕ್ರೆಡ್ ಹಾರ್ಟ್ ಚರ್ಚ್‌ ನ ಧರ್ಮಗುರು ಫಾದರ್ ಬಿಜು ಕ್ಸೇವಿಯರ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದೂ SFI ಆರೋಪಿಸಿದೆ.

ಪ್ರತಿಭಟನಾಕಾರರು ಜಂತರ್ ಮಂತರ್ ತಲುಪುವುದನ್ನು ತಡೆಯಲು ಹೊಸದಿಲ್ಲಿಯಾದ್ಯಂತ 30,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ CJP ಮತ್ತು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor