ಆಪರೇಷನ್ 'ಮಹಾದೇವ್': ಪಹಲ್ಗಾಮ್ ದಾಳಿಯ ಮೂವರು ಉಗ್ರರ ಹತ್ಯೆ: ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (Photo: PTI)
ಹೊಸದಿಲ್ಲಿ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತಯ್ಯಿಬಾದ ಉಗ್ರರ ವಿರುದ್ಧ “ಆಪರೇಷನ್ ಮಹಾದೇವ್” ಎಂಬ ಹೆಸರಿನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸಂಸತ್ತಿನಲ್ಲಿ ಘೋಷಿಸಿದರು.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ನಡೆದ ಭಯಾನಕ ದಾಳಿಯಲ್ಲಿ, ಮೂವರು ಲಷ್ಕರ್ ಉಗ್ರರು—ಸುಲೇಮಾನ್ ಶಾ (ಲಷ್ಕರ್ ಉನ್ನತ ಕಮಾಂಡರ್), ಅಫ್ಘಾನ್ ಹಾಗೂ ಜಿಬ್ರಾನ್—ಅಮಾಯಕ ನಾಗರಿಕರನ್ನು ಹತ್ಯೆಗೈದಿದ್ದರು. ಈ ಘಟನೆಗೆ ಪ್ರತೀಕಾರವಾಗಿ ಸೇನೆ, ಸಿಆರ್‌ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಉಗ್ರರು ಹತ್ಯೆಯಾಗಿದ್ದಾರೆ ಎಂದು ಶಾ ತಿಳಿಸಿದರು.
ದಾಳಿಕೋರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಸ್ಥಳೀಯರು ಪರ್ವೈಝ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. "ಭಯೋತ್ಪಾದಕರಿಗೆ ಆಹಾರ ಹಾಗೂ ಆಶ್ರಯ ನೀಡುತ್ತಿದ್ದವರನ್ನು ಮೊದಲೇ ಬಂಧಿಸಲಾಗಿತ್ತು. ಅವರ ಶವಗಳನ್ನು ಶ್ರೀನಗರಕ್ಕೆ ತರಲಾದ ನಂತರ ಬಂಧಿತರು ಗುರುತಿಸಿದ್ದಾರೆ" ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಲೋಕಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ, ಶಾ ವಿರೋಧ ಪಕ್ಷದ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. "ಪಹಲ್ಗಾಮ್ ದಾಳಿಕೋರರ ಹತ್ಯೆಯಾದ ಸುದ್ದಿ ಕೇಳಿದಾಗ ಎಲ್ಲರೂ ಸಂತೋಷಪಡಬೇಕು ಎಂಬುದು ನನ್ನ ನಿರೀಕ್ಷೆ. ಆದರೆ, ಅವರು ಸಂತೋಷಪಟ್ಟಂತೆ ಕಾಣುತ್ತಿಲ್ಲ" ಎಂದು ಅವರು ವಿಪಕ್ಷದವರನ್ನು ಟೀಕಿಸಿದರು.