ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ದೇಶದ್ರೋಹಿಗಳು: ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ
“ದೇಶದ ಆರ್ಥಿಕತೆಯ ಮೇಲೆ ಬಿರುಗಾಳಿ ಬೀಸುತ್ತಿರುವ ಮಧ್ಯೆ ಪ್ರಧಾನಿ ಸಿಹಿತಿಂಡಿಗಳನ್ನು ಹಂಚಲು ಇಟಲಿಗೆ ಹೋಗಿದ್ದಾರೆ”
ನರೇಂದ್ರ ಮೋದಿ , ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ, ಮೇ 20: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದ್ರೋಹಿಗಳು ಎಂದು ಕರೆದಿದ್ದು, ಪ್ರಧಾನಿ ಮೋದಿ ಅವರ ‘ಮೆಲೋಡಿ’ ಕ್ಷಣವನ್ನು ನಾಟಕ ಎಂದು ಟೀಕಿಸಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿಯವರ ಭಾಷೆಯನ್ನು ವಿಷಾದನೀಯ ಎಂದು ಕರೆದಿದೆ.
ಪ್ರಧಾನಿ ಮೋದಿ ಇಟಲಿ ಪ್ರವಾಸದಲ್ಲಿರುವ ವೇಳೆ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೋಡಿ’ ಟಾಫಿಗಳನ್ನು ಉಡುಗೊರೆಯಾಗಿ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ದೇಶದ ಆರ್ಥಿಕತೆಯ ಮೇಲೆ ಬಿರುಗಾಳಿ ಬೀಸುತ್ತಿರುವ ಮಧ್ಯೆ ಪ್ರಧಾನಿ ಸಿಹಿತಿಂಡಿಗಳನ್ನು ಹಂಚಲು ಇಟಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಸಂದರ್ಭದಲ್ಲಿ ಇಂಧನ ಉಳಿತಾಯ ಮಾಡಲು ಹಾಗೂ ಅನಗತ್ಯ ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡಲು ಜನತೆಗೆ ಮನವಿ ಮಾಡಿದ್ದ ಕೇಂದ್ರ ಸರ್ಕಾರವೇ, ಇದೇ ವೇಳೆ ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವುದನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ ಎಂದು ಆರೋಪಿಸಿದರು. ಮೋದಿ ಸರ್ಕಾರದ ಆರ್ಥಿಕ ನೀತಿಗಳು ದೇಶದ ಆರ್ಥಿಕತೆಯನ್ನು ಹಾನಿಗೊಳಿಸಿವೆ ಎಂದೂ ಅವರು ಹೇಳಿದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ “ಭಾರತವನ್ನು ಮಾರಾಟ ಮಾಡಲು ಕೆಲಸ ಮಾಡಿದ್ದಾರೆ” ಎಂದು ಆರೋಪಿಸಿದ ರಾಹುಲ್ ಗಾಂಧಿ, ಅವರನ್ನು “ದೇಶದ್ರೋಹಿಗಳು” ಎಂದು ಕರೆದರು.
ಬಿಜೆಪಿ ಪ್ರತಿಕ್ರಿಯೆ
ರಾಹುಲ್ ಗಾಂಧಿಯವರ ಹೇಳಿಕೆಗೆ ಬಿಜೆಪಿ ತೀವ್ರ ತಿರುಗೇಟು ನೀಡಿದೆ. ಬಿಜೆಪಿ ನಾಯಕ ನಿತಿನ್ ನಬಿನ್ ಪ್ರತಿಕ್ರಿಯಿಸಿ, “ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಬಳಸಿರುವ ಭಾಷೆ ಅತ್ಯಂತ ವಿಷಾದನೀಯ. ಇದು ಅವರ ಅರಾಜಕ ಮತ್ತು ವಿಭಜಕ ಮನೋಭಾವವನ್ನು ಬಹಿರಂಗಪಡಿಸುತ್ತದೆ” ಎಂದು ಹೇಳಿದರು.
“ಪರಸ್ಪರ ಗೌರವದ ಪರಂಪರೆ ಇರುವ ಭಾರತೀಯ ರಾಜಕೀಯದಲ್ಲಿ ಇಂತಹ ಭಾಷೆ ಸಂಪೂರ್ಣವಾಗಿ ಅಸ್ವೀಕಾರಾರ್ಹ. ನಿರಂತರ ಚುನಾವಣಾ ಸೋಲುಗಳಿಂದ ಉಂಟಾಗಿರುವ ಹತಾಶೆ ಮತ್ತು ನಿರಾಶೆ ಈಗ ಅವರ ಹೇಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂದು ಅವರು ಆರೋಪಿಸಿದರು.
“ರಾಹುಲ್ ಗಾಂಧಿಯವರ ಪೂರ್ವಜರು ದೇಶದ ಭೂಮಿ ಮತ್ತು ಆತ್ಮಸಾಕ್ಷಿಯನ್ನು ಅಡವಿಟ್ಟಿದ್ದರು. ಆದರೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದ ಭೂಮಿ ಸುರಕ್ಷಿತವಾಗಿದೆ ಮತ್ತು ನಾಗರಿಕರ ವಿಶ್ವಾಸವೂ ಬಲಗೊಂಡಿದೆ” ಎಂದೂ ನಬಿನ್ ಹೇಳಿದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿ, “ರಾಹುಲ್ ಗಾಂಧಿ ಭಾರತ ಮತ್ತು ಭಾರತದಲ್ಲಿ ತಯಾರಾಗುವ ಎಲ್ಲವನ್ನೂ ಏಕೆ ಇಷ್ಟೊಂದು ದ್ವೇಷಿಸುತ್ತಾರೆ?” ಎಂದು ಪ್ರಶ್ನಿಸಿದರು.
“‘ಮೇಡ್ ಇನ್ ಇಂಡಿಯಾ’ ಹಾಗೂ ‘ಲೋಕಲ್ ಗೋಸ್ ಗ್ಲೋಬಲ್’ ಮೂಲಕ ಭಾರತ ಇಂದು ವಿಶ್ವದ ವಿಶ್ವಾಸಾರ್ಹ ತಾಣವಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ದಶಕಗಳಿಂದ ಕಾಯುತ್ತಿದ್ದ ಜಾಗತಿಕ ಗೌರವ, ಹೂಡಿಕೆ ಮತ್ತು ನಂಬಿಕೆಯನ್ನು ಗಳಿಸಿದೆ. ಆದರೆ ಕಾಂಗ್ರೆಸ್ ಪ್ರತಿಯೊಂದು ಭಾರತೀಯ ಸಾಧನೆಯಲ್ಲೂ ಸಮಸ್ಯೆ ನೋಡುತ್ತದೆ” ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಕೂಡ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಬಳಸಿದ ಪದಗಳು ಅವರ ಸಂಸ್ಕಾರವನ್ನು ತೋರಿಸುತ್ತವೆ. ಕಾಂಗ್ರೆಸ್ ನಾಯಕರು ಪ್ರಧಾನಿಯನ್ನು ಪದೇ ಪದೇ ಅವಮಾನಿಸುತ್ತಾರೆ. ಪ್ರಧಾನಿ ಒಬಿಸಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದಲೇ ಈ ರೀತಿಯ ವರ್ತನೆ ತೋರಲಾಗುತ್ತಿದೆ” ಎಂದು ಆರೋಪಿಸಿದರು.
“ದೇಶದ್ರೋಹದ ಬಗ್ಗೆ ಮಾತನಾಡುವ ಮೊದಲು ರಾಹುಲ್ ಗಾಂಧಿ ತಮ್ಮ ಕುಟುಂಬದ ಇತಿಹಾಸವನ್ನು ನೋಡಬೇಕು” ಎಂದೂ ಅವರು ಹೇಳಿದರು.