"ಇಂಧನ ಸಮಸ್ಯೆಗೆ ಪರಿಹಾರ ಹುಡುಕಲು ಅವಸರವಿಲ್ಲ, ಆದರೆ ಮಿಸ್ ಮೆಲೋನಿಗೆ ʼಮೆಲೋಡಿʼ ಕೊಡೋದನ್ನು ತಡಮಾಡುವಂತಿಲ್ಲ": ಪ್ರಧಾನಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ
"ದೇಶಕ್ಕೆ ಬೇಕಿದ್ದದ್ದು ಒಬ್ಬ ಧೀಮಂತ ಪ್ರಧಾನಿ, ಆದರೆ ನಮಗೆ ಸಿಕ್ಕಿದ್ದು ಸ್ವಯಂಮೋಹಿ ಇನ್‌ಫ್ಲೂಯೆನ್ಸರ್"
Photo source: X
ಬೆಂಗಳೂರು: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಚಾಕಲೇಟ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸಚಿವರು, ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಇಂಧನ ಸಮಸ್ಯೆ ಹಾಗೂ ಜನಜೀವನಕ್ಕೆ ಸಂಬಂಧಿಸಿದ ಗಂಭೀರ ವಿಚಾರಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ತಾಳುತ್ತಿದೆ ಎಂದು ಆರೋಪಿಸಿದರು.
"ದೇಶದ ಇಂಧನ ಸಮಸ್ಯೆ, ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಹುಡುಕೋಕೆ ಅವಸರವಿಲ್ಲ, ಆದರೆ ಮಿಸ್ ಮೆಲೋನಿ ಅವರಿಗೆ ಮೆಲೋಡಿ ಕೊಡೋದನ್ನು ತಡಮಾಡುವಂತಿಲ್ಲ" ಎಂದು ಅವರು ವ್ಯಂಗ್ಯವಾಡಿದ್ದಾರೆ.
"ಒಮ್ಮೆ ಯೋಚಿಸಿ, ಗಂಭೀರ ದ್ವಿಪಕ್ಷೀಯ ವಿಷಯಗಳು ಮತ್ತು ವಿದೇಶಾಂಗ ನೀತಿ ಚರ್ಚೆಯ ಮಧ್ಯೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೀಗೆ ಅಂದುಕೊಂಡಿರಬಹುದು: “ನಾನು ಮೆಲೋಡಿ ಚಾಕೊಲೇಟ್ ಪ್ಯಾಕ್ ತೆಗೆದುಕೊಂಡು ಹೋಗುತ್ತೇನೆ, ಇದರಿಂದ ಒಳ್ಳೆ ಕಂಟೆಂಟ್ ಮಾಡಬಹುದು" ಎಂದು. ಈ ಹಾಸ್ಯಾಸ್ಪದ ರೀಲ್ ಜನರ ಗಮನವನ್ನು ನಿಜವಾದ ವಿಷಯಗಳಿಂದ ಬೇರೆಡೆ ತಿರುಗಿಸುತ್ತದೆ ಎನ್ನುವುದು ಅವರ ಕಲ್ಪನೆಯಾಗಿತ್ತು. ಆದರೆ ಅದು ನಿಜಕ್ಕೂ ನಮ್ಮನ್ನೇ ಹಾಸ್ಯಮಾಡುತ್ತಿದೆ." ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
"ದೇಶಕ್ಕೆ ಬೇಕಿದ್ದದ್ದು ಒಬ್ಬ ಧೀಮಂತ ಪ್ರಧಾನಿ, ಒಬ್ಬ ಮುತ್ಸದ್ಧಿ. ಆದರೆ ದುರದೃಷ್ಟವಶಾತ್ ನಮಗೆ ಸಿಕ್ಕಿದ್ದು ಸ್ವಯಂಮೋಹಿ ಇನ್‌ಫ್ಲೂಯೆನ್ಸರ್" ಎಂದು ಸಚಿವ ಖರ್ಗೆ ಪೋಸ್ಟ್ ಮಾಡಿದ್ದಾರೆ.