ನಿಮಗೆ ಇಷ್ಟವಾದ ಬಿಜೆಪಿ ನಾಯಕ ಯಾರು ಎಂಬ ಪ್ರಶ್ನೆಗೆ ಅಚ್ಚರಿಯ ಹೆಸರು ಹೇಳಿದ ರಾಹುಲ್ ಗಾಂಧಿ!
Screengrab: X/@INCIndia
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಬಿಜೆಪಿಯಲ್ಲಿರುವ ಅಚ್ಚುಮೆಚ್ಚಿನ ನಾಯಕ ಬೇರಾರೂ ಅಲ್ಲ, ಕ್ಯಾಪ್ಟನ್ ಅಮರಿಂದರ್ ಸಿಂಗ್! ಹೀಗೆ ಉತ್ತರಿಸಿರುವುದು ಸ್ವತಃ ರಾಹುಲ್ ಗಾಂಧಿ.
ಇನ್ಸ್ಟಾಗ್ರಾಮ್ ನಲ್ಲಿ ಜೆನ್ ಝೀ ಬಳಕೆದಾರರಿಗೆ ಯಾವುದೇ ಪ್ರಶ್ನೆಯನ್ನಾದರೂ ಕೇಳಿ, ಉತ್ತರಿಸುತ್ತೇನೆ ಎಂದು ರಾಹುಲ್ ಗಾಂಧಿ ಆಹ್ವಾನ ನೀಡಿದ್ದರು. ಅದರಂತೆ ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರು, “ಬಿಜೆಪಿಯಲ್ಲಿರುವ ನಿಮ್ಮ ಮೆಚ್ಚಿನ ನಾಯಕ ಯಾರು?” ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ, ರಾಹುಲ್ ಗಾಂಧಿ ಉತ್ತರಿಸಿರುವ ಹೆಸರು ಕ್ಯಾಪ್ಟನ್ ಅಮರಿಂದರ್ ಸಿಂಗ್. ಅಷ್ಟು ಮಾತ್ರವಲ್ಲದೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಜ್ಞಾನ ಮತ್ತು ಸೇನಾ ಇತಿಹಾಸವನ್ನೂ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
“ನಿಶ್ಚಿತವಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ತಾಳ್ಮೆಯ ವ್ಯಕ್ತಿ ಹಾಗೂ ಅವರು ಸೇನಾ ಇತಿಹಾಸದಲ್ಲಿ ಅನುಭವಿಗಳಾಗಿದ್ದಾರೆ. ಹೀಗಾಗಿ, ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ” ಎಂದು ವಿಡಿಯೊದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, “ಹೆಲೊ, ಅಂಕಲ್ ಅಮರಿಂದರ್” ಎಂದೂ ನಗುತ್ತಾ ಅಭಿನಂದಿಸಿದ್ದಾರೆ.
( ಕ್ಯಾಪ್ಟನ್ ಅಮರಿಂದರ್ ಸಿಂಗ್ )
ಪಂಜಾಬ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ, 2021ರಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಬಳಿಕ, ಅವರು ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ, 2022ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.
ಕಾಂಗ್ರೆಸ್ ನಲ್ಲಿದ್ದಾಗ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ರಾಹುಲ್ ಗಾಂಧಿ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ ಬಳಿಕ, ಅವರಿಬ್ಬರ ನಡುವಿನ ಸಂಬಂಧ ಹದಗೆಟ್ಟಿತ್ತು.
ಬಿಜೆಪಿಯಲ್ಲಿರುವ ನಿಮ್ಮ ಮೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಹೆಸರಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.