×
Ad

ಪತ್ರಕರ್ತ ಮುಖೇಶ್ ಕೌಶಿಕ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ : ಫೈಟರ್ ಪೈಲಟ್ ಬಗ್ಗೆ ಪ್ರಶ್ನಿಸಿದ್ದಾರೆ ಎಂಬ ಆರೋಪ ನಿರಾಕರಿಸಿದ ರವೀಶ್ ಕುಮಾರ್

Update: 2025-06-10 17:01 IST

ಖ್ಯಾತ ಪತ್ರಕರ್ತ ರವೀಶ್ ಕುಮಾರ್ | PTI

ಹೊಸದಿಲ್ಲಿ: ʼದೈನಿಕ್ ಭಾಸ್ಕರ್ʼ ಪತ್ರಕರ್ತ ಮುಖೇಶ್ ಕೌಶಿಕ್, ಖ್ಯಾತ ಪತ್ರಕರ್ತ ರವೀಶ್ ಕುಮಾರ್ ವಿರುದ್ಧ ಮಾಡಿದ ಆರೋಪದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ರವೀಶ್ ಕುಮಾರ್, ಮುಖೇಶ್ ಕೌಶಿಕ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.

ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯ ಬಳಿಕ ರಫೇಲ್ ಫೈಟರ್ ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಬಗ್ಗೆ ರವೀಶ್ ಕುಮಾರ್ ಮತ್ತು ಇತರ ಯೂಟ್ಯೂಬರ್‌ಗಳು ಪ್ರಶ್ನಿಸುತ್ತಿದ್ದಾರೆ ಎಂದು ಮುಖೇಶ್ ಕೌಶಿಕ್ ಆರೋಪಿಸಿದ್ದಾರೆ.

ಜೂನ್ 8ರಂದು ದೈನಿಕ್ ಭಾಸ್ಕರ್ ಪ್ರಕಟಿಸಿದ ಲೇಖನದ ಸ್ಕ್ರೀನ್‌ಶಾಟ್‌ ಜೊತೆಗೆ ಮುಖೇಶ್ ಕೌಶಿಕ್ ತಮ್ಮ ಹೇಳಿಕೆಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ವಾಯುಪಡೆಯು ಪೈಲಟ್‌ಗೆ ಸಂಬಂಧಿಸಿದ ಪಾಕಿಸ್ತಾನದ ನಿರೂಪಣೆಯನ್ನು ತಳ್ಳಿಹಾಕಿದೆ ಮತ್ತು ಸ್ಕ್ವಾಡ್ರನ್ ಲೀಡರ್ ಸಿಂಗ್ ಕರ್ತವ್ಯದಲ್ಲಿದ್ದಾರೆ ಎಂದು ದೃಢಪಡಿಸಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರವೀಶ್ ಕುಮಾರ್ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಬಗ್ಗೆ ನಾನು ಎಂದಿಗೂ ಯಾವುದೇ ಪ್ರಶ್ನೆಗಳನ್ನು ಎತ್ತಿಲ್ಲ ಮತ್ತು ಈ ವೀಡಿಯೊ ನಕಲಿ ಎಂದು ಹೇಳಿದ್ದಾರೆ.

ತನ್ನ ಹೆಸರಿನಲ್ಲಿ ದಾರಿ ತಪ್ಪಿಸುವ ವೀಡಿಯೊ ಮೂಲಕ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಮುಖೇಶ್ ಅವರನ್ನು ರವೀಶ್ ಕುಮಾರ್ ಟೀಕಿಸಿದ್ದಾರೆ. ಕೌಶಿಕ್‌ಗೆ ನಕಲಿಯನ್ನು ಗ್ರಹಿಸಲು ಸಾಧ್ಯವಾಗಬೇಕಿತ್ತು ಎಂದೂ ಹೇಳಿದ್ದಾರೆ.

ʼಯಾರೋ ನನ್ನ ಹೆಸರು ಮತ್ತು ಮುಖವನ್ನು ಬಳಸಿಕೊಂಡು ಡೀಪ್ ಫೇಕ್ ಬಳಸಿ ವೀಡಿಯೊ ಮಾಡಿದ್ದಾರೆ. ನಾನು ಶಿವಾನಿ ಸಿಂಗ್ ಬಗ್ಗೆ ಯಾವುದೇ ವೀಡಿಯೊ ಮಾಡಿಲ್ಲ ಮತ್ತು ಇದು ಡೀಪ್ ಫೇಕ್ ಎಂದು ಟ್ವೀಟ್ ಮಾಡಿದ್ದೆ. ಆದರೂ ಮುಖೇಶ್ ಕೌಶಿಕ್ ಈ ನಕಲಿ ಸುದ್ದಿಯನ್ನು ನನ್ನ ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ. ನಕಲಿ ಸುದ್ದಿಗಳನ್ನು ಹರಡಿದ್ದಾರೆ. ನನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ನನ್ನ ಟ್ವಿಟರ್ ಖಾತೆಯ ಬಗ್ಗೆ ಅವರಿಗೆ ತಿಳಿದಿಲ್ಲದಿರಬಹುದು. ಆದರೆ, ವೀಡಿಯೊ ಡೀಪ್ ಫೇಕ್ ಆಗಿದ್ದರೆ, ಅದನ್ನು ನೋಡುವ ಮೂಲಕ ಅದನ್ನು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ, ಬಹಳ ಬುದ್ಧಿವಂತಿಕೆಯಿಂದ ಅವರು ನನ್ನ ಹೆಸರನ್ನು ಸೇರಿಸಿ ಬರೆದಿದ್ದಾರೆ. ನಾನು ಸುಳ್ಳುಗಳನ್ನು ಹರಡುತ್ತಿದ್ದೇನೆ ಎಂದು ಅವರು ಆರೋಪಿಸುತ್ತಿದ್ದಾರೆ.

ಕೌಶಿಕ್ ನಕಲಿ ವೀಡಿಯೊವನ್ನು ಹೆಚ್ಚು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಕೆಲವು ಮಾಧ್ಯಮಗಳ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ವಾಷಿಂಗ್ಟನ್ ಪೋಸ್ಟ್ ವರದಿಯನ್ನು ಓದಬೇಕು ಎಂದು ಹೇಳಿದರು.

ತನ್ನ ಫೋಟೊ ಮತ್ತು ಧ್ವನಿಯನ್ನು ಬಳಸಿಕೊಂಡು ನಕಲಿ ವೀಡಿಯೊ ಹಂಚಿಕೊಂಡಿರುವ ಬಗ್ಗೆ ರವೀಶ್ ಕುಮಾರ್ ಈ ಮೊದಲು ಪೋಸ್ಟ್ ಮಾಡಿದ್ದರು.

ಈ ಬಗ್ಗೆ ಕೆಲ ಪತ್ರಕರ್ತರು ಮುಖೇಶ್ ಕೌಶಿಕ್ ಅವರನ್ನು ಟೀಕಿಸಿದ್ದಾರೆ. ರವೀಶ್ ಕುಮಾರ್ ಅವರ ಜನಪ್ರಿಯತೆಯಿಂದ ಕೌಶಿಕ್ ಎಷ್ಟು ನಿರಾಶೆಗೊಂಡಿದ್ದಾರೆ ಎಂಬುದು ಈ ಪೋಸ್ಟ್‌ನಿಂದ ಬಹಿರಂಗವಾಗುತ್ತದೆ ಎಂದು ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News