ದ್ವಿತೀಯ ಹಂತದ ಲೋಕಸಭಾ ಚುನಾವಣೆ : ಬಹುತೇಕ ಶಾಂತ, ಶೇ. 61 ಮತದಾನ

Update: 2024-04-26 17:56 GMT

PC : PTI 

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಎರಡನೆ ಹಂತದ ಮತದಾನ ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತಗಳ 88 ಕ್ಷೇತ್ರಗಳಲ್ಲಿ ಶುಕ್ರವಾರ ನಡೆದಿದ್ದು, ಶೇ.61ಕ್ಕೂ ಅಧಿಕ ಮಂದಿ ಹಕ್ಕು ಚಲಾಯಿಸಿದ್ದಾರೆ.

ಈಶಾನ್ಯ ಭಾರತದ ರಾಜ್ಯವಾದ ತ್ರಿಪುರಾದಲ್ಲಿ ಗರಿಷ್ಠ (77.53 ಶೇಕಡ) ಮತದಾನವಾಗಿದ್ದು, ಉತ್ತರಪ್ರದೇಶದಲ್ಲಿ ಅತ್ಯಂತ ಕನಿಷ್ಠ (52.74 ಶೇ.) ಮತದಾನವಾಗಿದೆ.

ಕೆಲವೊಂದು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ದೇಶಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳದ ಬಲೂರ್‌ಘಾಟ್ ಮತಗಟ್ಟೆಯೊಂದರಲ್ಲಿ ಲೋಕಸಬಾ ಅಭ್ಯರ್ಥಿ, ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೇರಳ ಹಾಗೂ ಪಶ್ಚಿಮಬಂಗಾಳದ ಕೆಲವು ಮತಗಟ್ಟೆಗಳಲ್ಲಿ ಬೋಗಸ್ ಮತದಾನ ನಡೆದಿರುವುದಾಗಿ ವರದಿಯಾಗಿದೆ. ಅಲ್ಲದೆ ಕೆಲವೆಡೆ ಇವಿಎಂ ಯಂತ್ರಗಳಲ್ಲಿ ತೊಂದರೆಕಾಣಿಸಿಕೊಂಡಿದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಕೇರಳದ ಎಲ್ಲಾ 20 ಕ್ಷೇತ್ರಗಳು, ರಾಜಸ್ಥಾನದ 13 ಕ್ಷೇತ್ರಗಳು, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ ತಲಾ ಎಂಟು, ಮಧ್ಯಪ್ರದೇಶದ ಆರು, ಅಸ್ಸಾಂ ಹಾಗೂ ಬಿಹಾರದ ತಲಾ ಐದು, ಚತ್ತೀಸ್‌ಗಡ ಹಾಗೂ ಪಶ್ಚಿಮಬಂಗಾಳದ ತಲಾ ಮೂರು, ಮಣಿಪುರ,ತ್ರಿಪುರ ಹಾಗೂ ಜಮ್ಮುಕಾಶ್ಮೀರದ ತಲಾ ಒಂದು ಕ್ಷೇತ್ರಗಳಿಗೆ ಮತದಾನವಾಗಿದೆ.

ಕಾಂಗ್ರೆಸ್ ನಾಯಕರಾದ ರಾಹುಲ್‌ಗಾಂಧಿ, ಶಶಿಥರೂರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ನಟ-ರಾಜಕಾರಣಿ ಅರುಣ್‌ಗೋವಿರ ಕಣದಲ್ಲಿರುವ ಪ್ರಮುಖರು. ಗಜೇಂದ್ರ ಸಿಂಗ್ ಶೇಖಾವತ್, ಹೇಮಾಮಾಲಿನಿ, ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಸಲದ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಬೆಳಗ್ಗೆ 7:00 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6:00 ಗಂಟೆಯವರೆಗೂ ಮುಂದುವರಿಯಿತು. ಎರಡನೆ ಹಂತದ ಚುನಾವಣೆಯೊಂದಿಗೆ ಕೇರಳ, ರಾಜಸ್ಥಾನ ಹಾಗೂ ತ್ರಿಪುರದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ.

ದ್ವಿತೀಯ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ 1202 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 102 ಮಂದಿ ಮಹಿಳೆಯರು ಹಾಗೂ ಇಬ್ಬರು ತೃತೀಯ ಲಿಂಗಿಗಳು. ಎರಡನೆ ಹಂತದಲ್ಲಿ ಬಿಎಸ್ಪಿ ಗರಿಷ್ಠ 74 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ 69 ಹಾಗೂ ಕಾಂಗ್ರೆಸ್‌ನಿಂದ 68 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಅಶೋಕ್ ಬಾಲಾವಿ ಅವರ ನಿಧನ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿದ್ದ ಮತದಾನವನ್ನು ರದ್ದುಪಡಿಸಲಾಗಿದ್ದು, ಅದನ್ನು ಮೇ 7ಕ್ಕೆ ಮುಂದೂಡಲಾಗಿದೆ.

ಎಪ್ರಿಲ್ 19ರಂದು ಮೊದಲ ಹಂತದ ಚುನಾವಣೆಯಲ್ಲಿ 102 ಕ್ಷೇತ್ರಗಳಿಗೆ ಮತದಾನವಾಗಿತ್ತು.

ಕೇರಳದಲ್ಲಿ 67.27 ಶೇಕಡ ಮತದಾನವಾಗಿದ್ದು, ಪ್ರಖರ ಬಿಸಿಲನ್ನೂ ಲೆಕ್ಕೆಸದೆ ಎಲ್ಲೆಡೆ ನಾಗರಿಕರು ಅತ್ಯುತ್ಸಾಹದಿಂದ ಪಾಲ್ಗೊಂಡು, ತಮ್ಮ ಹಕ್ಕನ್ನು ಚಲಾಯಿಸಿದರು.ಆದರೆ ರಾಜ್ಯದ ವಿವಿಧೆಡೆ ಮತದಾನದ ವೇಳೆ ಬಿಸಿಲಿನ ತೀವ್ರ ಬೇಗೆಯಿಂದಾಗಿ ಅಸ್ವಸ್ಥಗೊಂಡು 9 ಮಂದಿ ಸಾವನ್ನಪ್ಪಿದ್ದಾರೆ.

ಚತ್ತೀಸ್‌ಗಡದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ಶೇ.72.13ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.ಈ ಮೂರು ಕ್ಷೇತ್ರಗಳಲ್ಲಿ ನಕ್ಸಲ್ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿರುವುದರಿಂದ ಮತದಾನದ ವೇಳೆ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿತ್ತು.ಮಧ್ಯಪ್ರದೇಶದ ಸರಕಾರಿ ಶಾಲೆಯೊಂದರ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತನಾದ ರಾಜ್ಯ ವಿಶೇಷ ಸಶಸ್ತ್ರ ಪಡೆಯ ಯೋಧನೊಬ್ಬ ತನಗೆ ಗುಂಡುಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂರನೇ ಹಂತದ ಚುನಾವಣೆ ಮೇ 7ರಂದು ನಡೆಯಲಿದ್ದು, 12 ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ 94 ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News