ಲೈಂಗಿಕ ಕಿರುಕುಳ ಆರೋಪ | Delhi ಪೊಲೀಸ್ ಎಸಿಪಿ ವಿವೇಕ್ ಭಗತ್ ಗೆ ನೀಡಿದ್ದ ಹೆಚ್ಚುವರಿ DCP ಹುದ್ದೆಯ ಭಡ್ತಿಗೆ ತಡೆ
Photo Credit : @abhijeet_dipke
ಹೊಸದಿಲ್ಲಿ: ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದಿಲ್ಲಿ ಪೊಲೀಸ್ ಸಹಾಯಕ ಪೊಲೀಸ್ ಆಯುಕ್ತ (ACP) ವಿವೇಕ್ ಭಗತ್ ಅವರಿಗೆ ನೀಡಲಾಗಿದ್ದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (Additional DCP) ಹುದ್ದೆಯ ‘ಪ್ರಸ್ತುತ ಕರ್ತವ್ಯದ ಹೊಣೆಗಾರಿಕೆ’ (CDC)ಯನ್ನು ತಡೆಹಿಡಿಯಲಾಗಿದೆ ಎಂದು ದೆಹಲಿ ಸರಕಾರ ಸೋಮವಾರ ತಡರಾತ್ರಿ ತಿಳಿಸಿದೆ.
ಭಗತ್ ಸೇರಿದಂತೆ 12 DANIPS ಅಧಿಕಾರಿಗಳಿಗೆ ಹೆಚ್ಚುವರಿ DCP ಹುದ್ದೆಯ CDC ಹೊಣೆಗಾರಿಕೆ ನೀಡುವ ಕುರಿತು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಈ ಅಧಿಕಾರಿಗಳಿಗೆ ಹೆಚ್ಚುವರಿ ಕರ್ತವ್ಯದ ಹೊಣೆಗಾರಿಕೆ ನೀಡುವ ಪ್ರಸ್ತಾವನೆಯನ್ನು ಆಗಸ್ಟ್ 25ರಂದೇ, ಅಂದರೆ ‘ಪ್ರಸ್ತುತ ಘಟನೆಗಳು ನಡೆಯುವುದಕ್ಕೂ ಬಹಳ ಮೊದಲೇ’ ಆರಂಭಿಸಲಾಗಿತ್ತು. ಸೂಕ್ತ ಅನುಮೋದನೆ ಪಡೆದ ಬಳಿಕ ಅಕ್ಟೋಬರ್ 5ರಂದು ಆದೇಶ ಹೊರಡಿಸಲಾಗಿತ್ತು ಎಂದು ಸರಕಾರ ‘ಎಕ್ಸ್’ನಲ್ಲಿ ತಿಳಿಸಿದೆ.
CDC ನಿಯೋಜನೆಯು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇದರಿಂದ ಯಾವುದೇ ಆರ್ಥಿಕ ಲಾಭ ದೊರೆಯುವುದಿಲ್ಲ. ಈ ಹೊಣೆಗಾರಿಕೆ ಪಡೆದ ಅಧಿಕಾರಿಗಳು ನಿಯಮಿತ ಹುದ್ದೆಯಲ್ಲಿರುವ ಅಧಿಕಾರಿಯ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದೂ ಸರಕಾರ ಸ್ಪಷ್ಟಪಡಿಸಿದೆ.
ಪತ್ರಕರ್ತೆಯರಿಗೆ ಕಿರುಕುಳ ನೀಡಿದ ಆರೋಪದ ಕುರಿತು ಸಂಪೂರ್ಣ ತನಿಖೆ ನಡೆದು, ಅದು ಪೂರ್ಣಗೊಳ್ಳುವವರೆಗೆ ಪ್ರಸ್ತುತ ಕರ್ತವ್ಯದ ಹೊಣೆಗಾರಿಕೆಯನ್ನು ಸ್ವೀಕರಿಸದಿರಲು ಎಸಿಪಿ ವಿವೇಕ್ ಭಗತ್ ಸ್ವಯಂಪ್ರೇರಣೆಯಿಂದ ಮನವಿ ಮಾಡಿದ್ದಾರೆ ಎಂದು ಸರಕಾರ ತಿಳಿಸಿದೆ.
ಹೀಗಾಗಿ ಹಿಂದಿನ ಆದೇಶವನ್ನು ಮಾರ್ಪಡಿಸಲಾಗುತ್ತಿದ್ದು, ಉಳಿದ 11 ಅಧಿಕಾರಿಗಳಿಗೆ CDC ಹೊಣೆಗಾರಿಕೆ ನೀಡುವ ಕುರಿತು ಆದೇಶವನ್ನು ಮರುಹೊರಡಿಸಲಾಗುವುದು ಎಂದು ತಿಳಿಸಿದೆ.
ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ವಿರುದ್ಧ ಅಕ್ಟೋಬರ್ 3ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ದೆಹಲಿ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಮೂವರು ಪತ್ರಕರ್ತೆಯರು ಆರೋಪಿಸಿದ್ದರು.
ಈ ಪೈಕಿ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎಸಿಪಿ ಭಗತ್ ಅವರ ಮೇಲೂ ಕೇಳಿಬಂದಿತ್ತು. ಅವರಿಗೆ ಹೆಚ್ಚುವರಿ DCP ಹುದ್ದೆಯ CDC ಹೊಣೆಗಾರಿಕೆ ನೀಡಿದ್ದ ಕ್ರಮವು ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
ದಿಲೈ ಪೊಲೀಸರು ಪತ್ರಕರ್ತೆಯರ ದೂರುಗಳನ್ನು ಸ್ವೀಕರಿಸಿದ್ದು, ಹೆಚ್ಚಿನ ತನಿಖೆಗಾಗಿ ಅವುಗಳನ್ನು ಅಪರಾಧ ವಿಭಾಗಕ್ಕೆ (Crime Branch) ವರ್ಗಾಯಿಸಿದ್ದಾರೆ.