×
Ad

ಇಸ್ರೋ ಮುಖ್ಯಸ್ಥರಿಗೆ ಇಂಡಿಗೋ ಸಿಬ್ಬಂದಿಗಳಿಂದ ವಿಶೇಷ ಸ್ವಾಗತ; ವಿಡಿಯೋ ವೈರಲ್

Update: 2023-08-31 22:56 IST

 ಎಸ್.ಸೋಮನಾಥ್ ,ಇಂಡಿಗೊ ಸಿಬ್ಬಂದಿ| Photo: twitter \ @IndiGo6E

ಹೊಸದಿಲ್ಲಿ: ಇತ್ತೀಚೆಗೆ ವಿಮಾನ ಪ್ರಯಾಣ ಬೆಳೆಸಿದ್ದ ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಇಂಡಿಗೊ ಸಿಬ್ಬಂದಿ ಹಾಗೂ ಪ್ರಯಾಣಿಕರು ಅವರಿಗೆ ಗೌರವ ಸಲ್ಲಿಸಿದ್ದಾರೆ.

ವಿಮಾನದೊಳಗೆ ಬಂದ ಎಸ್. ಸೋಮನಾಥ್ ಅವರನ್ನು ಸ್ವಾಗತಿಸಿರುವ ಗಗನ ಸಖಿಯು, ‘ರಾಷ್ಟ್ರೀಯ ಹೀರೊ’ವನ್ನು ಸ್ವಾಗತಿಸುವಂತೆ ಇತರ ಪ್ರಯಾಣಿಕರಿಗೂ ತಿಳಿಸಿದ್ದಾರೆ. ಪ್ರಯಾಣಿಕರು ಕೂಡಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಬ್ಬ ಗಗನ ಸಖಿಯು ಅವರಿಗೆ ಸ್ಮರಣಿಕೆಯನ್ನು ನೀಡಿ, ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದು, ಅದನ್ನು ಎಸ್.ಸೋಮನಾಥ್ ಮುಗುಳ್ನಗುತ್ತಾ ಸ್ವೀಕರಿಸಿರುವ ವಿಡಿಯೋ ವೈರಲ್ ಆಗಿದೆ.

“ಇಂಡಿಗೊ ವಿಮಾನ ಪ್ರಯಾಣದ ಸಂದರ್ಭದಲ್ಲಿ ಶ್ರೀ ಸೋಮನಾಥ್ ಅವರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದಕ್ಕೆ ಧನ್ಯರಾಗಿದ್ದೇವೆ. ನಮ್ಮ ವಿಮಾನದಲ್ಲಿ ರಾಷ್ಟ್ರೀಯ ಹೀರೊಗಳನ್ನು ನೋಡುವುದು ನಮ್ಮ ಪಾಲಿಗೆ ಸಂತಸದ ಸಂಗತಿಯಾಗಿದೆ” ಎಂಬ ಶೀರ್ಷಿಕೆ ಟಿಪ್ಪಣಿಯೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

ಚಂದ್ರಯಾನ-3 ಯೋಜನೆಯ ಭಾಗವಾಗಿ ಉಡಾವಣೆಗೊಂಡಿದ್ದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರಂದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದರೊಂದಿಗೆ ಭಾರತವು ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೆ ದೇಶವಾಗಿ ಹೊರಹೊಮ್ಮಿತ್ತು. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸಿದ ಪ್ರಥಮ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಿತ್ತು. ಭಾರತದ ಈ ಮಹತ್ವಾಕಾಂಕ್ಷಿ ಚಂದ್ರಯಾನದ ಯಶಸ್ಸಿನ ಹಿಂದಿನ ರೂವಾರಿ ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News