×
Ad

ಹೈಕೋರ್ಟ್ ಗಳಲ್ಲಿನ ಅಪರಾಧ ಪ್ರಕರಣಗಳ ಬಾಕಿ ಅರ್ಜಿ ವಿಚಾರಣೆಗೆ ಹಂಗಾಮಿ ನ್ಯಾಯಮೂರ್ತಿಗಳು: ಸುಪ್ರೀಂ

Update: 2025-01-22 08:06 IST

ಹೊಸದಿಲ್ಲಿ: ಖಾಲಿ ಹುದ್ದೆಗಳ ಭರ್ತಿಯಲ್ಲಿ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಹೈಕೋರ್ಟ್ ಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂವಿಧಾನದ 224ಎ ವಿಧಿ ಅನ್ವಯ ಹಂಗಾಮಿ ನ್ಯಾಯಮೂರ್ತಿಗಳನ್ನು ಹೈಕೋರ್ಟ್ ಗಳಲ್ಲಿ ನೇಮಕ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲು ಇದು ಸಕಾಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗೆ ನೇಮಕಗೊಂಡ ನ್ಯಾಯಮೂರ್ತಿಗಳು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ಭಾಗವಾಗಿ ಅಪರಾಧ ಪ್ರಕರಣಗಳ ಮೇಲ್ಮನವಿಗಳ ವಿಚಾರಣೆಗೆ ಸಹಕರಿಸುವರು.

ಬಾಕಿ ಇರುವ ಅಪರಾಧ ಪ್ರಕರಣಗಳ ಮೇಲ್ಮನವಿ ಸಂಖ್ಯೆಗಳು ಹೈಕೋರ್ಟ್ ಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದ್ದು, ಪ್ರತಿ ನ್ಯಾಯಮೂರ್ತಿಗಳ ಸಂಖ್ಯೆಗೆ ಹೋಲಿಸಿದರೆ ಬಾಕಿ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿವೆ. ಆದ್ದರಿಂದ ಹೈಕೋರ್ಟ್ ಗಳಲ್ಲಿ ಹಂಗಾಮಿ ನ್ಯಾಯಮೂರ್ತಿಗಳ ನೇಮಕಾತಿಗೆ ಹಾದಿ ಮಾಡಿಕೊಡುವ ಸಂಬಂಧ 2021ರ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಹಲವು ಅಪರಾಧ ಪ್ರಕರಣಗಳಲ್ಲಿ ಶಿಕ್ಷಿತರು ಜೈಲುಗಳಲ್ಲಿ ಸೆರೆಮನೆವಾಸ ಅನುಭವಿಸುತ್ತಿದ್ದು, ತಮ್ಮ ಮೇಲ್ಮನವಿ ವಿಚಾರಣೆಗಾಗಿ ಕಾಯುತ್ತಿದ್ದಾರೆ. ಇಂಥ ಬಾಕಿ ಪ್ರಕರಣಗಳ ಹೆಚ್ಚಳ ಕಳವಳಕಾರಿ ಎಂದು ಸುಪ್ರೀಂಕೋರ್ಟ್ ಈ ಮೊದಲು ಅಭಿಪ್ರಾಯಪಟ್ಟಿತ್ತು.

ಉದಾಹರಣೆಗೆ 2000ನೇ ಇಸವಿ ಹಾಗೂ 2021ನೇ ಇಸ್ವಿಯಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಹೊಸದಾಗಿ ಸಲ್ಲಿಕೆಯಾಗುತ್ತಿರುವ ಮೇಲ್ಮವಿಗಳ ಸಂಖ್ಯೆ ಮತ್ತು ವಿಲೇವಾರಿ ದರವನ್ನು ಹೋಲಿಸಿದರೆ ಹೊಸ ಮೇಲ್ಮನವಿಗಳ ನಿರ್ಧಾರಕ್ಕೆ ಸರಾಸರಿ 35 ವರ್ಷಗಳ ಕಾಲ ಬೇಕಾಗುತ್ತದೆ. ಈ ಅವಧಿಯಲ್ಲಿ 1.7 ಲಕ್ಷ ಮೇಲ್ಮನವಿ ಪ್ರಕರಣಗಳು ಸಲ್ಲಿಕೆಯಾದರೆ ಕೇವಲ 31 ಸಾವಿರ ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News