West Bengal | ಜಾದವ್‌ಪುರ ವಿವಿಯಲ್ಲಿ ತಡರಾತ್ರಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ: ಹಲ್ಲೆ, ಧ್ವಜಗಳಿಗೆ ಬೆಂಕಿ

Update: 2026-08-20 13:47 IST

Screengrab: X/@SFI_CEC

ಕೋಲ್ಕತ್ತಾ: ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಬುಧವಾರ ತಡರಾತ್ರಿ ಭಾರತೀಯ ವಿದ್ಯಾರ್ಥಿ ಒಕ್ಕೂಟ (SFI) ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಸದಸ್ಯರ ನಡುವೆ ಘರ್ಷಣೆ ನಡೆದಿದ್ದು, ಎರಡೂ ಕಡೆಯ ಹಲವು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಸಂಘದ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ  ಎಂದು indianexpress.com ವರದಿ ಮಾಡಿದೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ SFI, ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (DSO) ಮತ್ತು ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (DSF) ಸಭೆ ನಡೆಸುತ್ತಿದ್ದವು. ಈ ಸಭೆಗೆ ಆಕ್ಷೇಪ ವ್ಯಕ್ತಪಡಿಸಲು ತೆರಳಿದ್ದ ತಮ್ಮ ಸದಸ್ಯರ ಮೇಲೆ SFI ಸದಸ್ಯರು ಹಲ್ಲೆ ನಡೆಸಿದರು ಎಂದು ABVP ಆರೋಪಿಸಿದೆ.

ಆದರೆ, ABVP ಹೊರಗಿನವರನ್ನು ಕ್ಯಾಂಪಸ್‌ ಗೆ ಕರೆತಂದು ದಾಂಧಲೆ ನಡೆಸಿದೆ ಎಂದು DSO ಆರೋಪಿಸಿದೆ. ABVP ಸದಸ್ಯರು ಕೋಲುಗಳೊಂದಿಗೆ ಕ್ಯಾಂಪಸ್‌ ಗೆ ನುಗ್ಗಿ SFI, DSO ಸದಸ್ಯರು ಹಾಗೂ ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. SFI ಬ್ಯಾನರ್‌ಗಳು ಮತ್ತು ಧ್ವಜಗಳನ್ನು ಹರಿದು, ಘೋಷಣೆಗಳನ್ನು ಅಳಿಸಿ, ಧ್ವಜಗಳಿಗೆ ಬೆಂಕಿ ಹಚ್ಚಿದರು ಎಂದು DSO ಆರೋಪಿಸಿದೆ.

ಅರಬಿಂದೋ ಭವನಕ್ಕೆ ಬೆಂಕಿ ಹಚ್ಚಲು ಯತ್ನ: ಆರೋಪ

“ಅವರು ಗೇಟ್ 4ರ ಮೂಲಕ ಕ್ಯಾಂಪಸ್‌ ಗೆ ನುಗ್ಗಿ ಎಲ್ಲ ಬ್ಯಾನರ್‌ ಗಳನ್ನು ಹರಿದು ಹಾಕಿದರು. ನಮ್ಮ ಧ್ವಜಗಳಿಗೆ ಬೆಂಕಿ ಹಚ್ಚಿದರು. ಅರಬಿಂದೋ ಭವನಕ್ಕೆ ಬೆಂಕಿ ಹಚ್ಚಲು ಯತ್ನಿಸಿದರು. ಭದ್ರತಾ ಸಿಬ್ಬಂದಿ ಧಾವಿಸಿ ಗೇಟ್‌ ಗಳನ್ನು ಬಂದ್ ಮಾಡಿದರು. ಬಳಿಕ ABVP ಬೆಂಬಲಿಗರು ಗೇಟ್‌ ಗಳನ್ನು ಒದೆಯುತ್ತಿದ್ದರು” ಎಂದು SFI ಬೆಂಬಲಿಗರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾತ್ರಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಘಟನೆಯನ್ನು ‘ತುಂಬಾ ಭಯಾನಕ’ ಎಂದು ಬಣ್ಣಿಸಿದ್ದಾರೆ. ಅರಬಿಂದೋ ಭವನದಲ್ಲಿದ್ದ ಅವರು, ಕೆಲವು ವಿದ್ಯಾರ್ಥಿಗಳು ಗೇಟ್‌ಗಳನ್ನು ತೆರೆಯುವಂತೆ ಕೇಳಿಕೊಂಡರು ಎಂದು ಹೇಳಿದ್ದಾರೆ.

“ನಾನು ಗೇಟ್‌ಗಳನ್ನು ತೆರೆದೆ. ಅವರು ಒಳಗೆ ಬಂದ ನಂತರ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿದೆ. ಮತ್ತೊಂದೆಡೆ, ಅವರು ಗೇಟ್‌ಗಳನ್ನು ಒದೆಯುತ್ತಿದ್ದರು. ಧ್ವಜಗಳಿಗೆ ಬೆಂಕಿ ಹಚ್ಚಿ ಒಳಗೆ ಎಸೆಯುತ್ತಿದ್ದರು. ನಾನು ಆಡಳಿತ ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದೆ” ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ SFI ರಾಜ್ಯ ಕಾರ್ಯದರ್ಶಿ ದೇಬಂಜನ್ ಡೇ, ಅರಬಿಂದೋ ಭವನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ABVP ವಿರುದ್ಧ ವಾಗ್ದಾಳಿ ನಡೆಸಿದರು.

“ABVP, RSS ಮತ್ತು BJP ಶಾಸಕಿ ಹಾಗೂ ಅವರ ಬೆಂಬಲಿಗರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. ವಿಶ್ವವಿದ್ಯಾಲಯದ ವಾತಾವರಣವನ್ನು ಹಾಳುಮಾಡುವುದು ಈ ದಾಳಿಯ ಉದ್ದೇಶ. RSS ಮತ್ತು BJP ಜಾದವ್‌ಪುರ ವಿಶ್ವವಿದ್ಯಾಲಯವನ್ನು ನಿಗ್ರಹಿಸಲು ಪ್ರಯತ್ನಿಸುತ್ತಿವೆ. ಆದರೆ ಅವರು ಯಶಸ್ವಿಯಾಗುವುದಿಲ್ಲ” ಎಂದು ಅವರು ಹೇಳಿದರು.

SFI ಪ್ರಧಾನ ಕಾರ್ಯದರ್ಶಿ ಶ್ರೀಜನ್ ಭಟ್ಟಾಚಾರ್ಯ, ವಿದ್ಯಾರ್ಥಿಗಳು ಸಭೆ ನಡೆಸುತ್ತಿದ್ದ ವೇಳೆ ABVP ವಿದ್ಯಾರ್ಥಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.

“ಬಳಿಕ ಬಿಜೆಪಿ ಬೆಂಬಲಿಗರು ಕ್ಯಾಂಪಸ್‌ ಗೆ ಪ್ರವೇಶಿಸಿ ದಾಂಧಲೆ ನಡೆಸಿದರು. ಅವರನ್ನು ರಕ್ಷಿಸಲು ಬಿಜೆಪಿ ಶಾಸಕರೊಬ್ಬರು ಬಂದಿದ್ದಾರೆ ಎಂದು ನನಗೆ ತಿಳಿದುಬಂದಿದೆ” ಎಂದು ಅವರು ಹೇಳಿದರು.

‘ಸಾಮಾನ್ಯ ಸಭೆ ಹೇಗೆ ನಡೆಯಿತು?’

ಘಟನಾ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕಿ ಶರ್ಬೊರಿ ಮುಖರ್ಜಿ, ಸಾಮಾನ್ಯ ಸಭೆ ಆಯೋಜಿಸಿದ್ದರ ಬಗ್ಗೆ ಪ್ರಶ್ನಿಸಿದರು.

“ಕ್ಯಾಂಪಸ್‌ ನಲ್ಲಿ ಯಾವುದೇ ಒಕ್ಕೂಟಗಳು ಇರುವುದಿಲ್ಲ ಎಂದು ಅವರು ಒಪ್ಪಿಕೊಂಡಿದ್ದರು. ಹಾಗಾದರೆ ಸಾಮಾನ್ಯ ಸಭೆ ಹೇಗೆ ನಡೆಯಿತು? ಅದನ್ನು ಯಾರು ಕರೆದರು?” ಎಂದು ಅವರು ಪ್ರಶ್ನಿಸಿದರು.

‘ವಿಧ್ವಂಸಕ ಕೃತ್ಯ ಸ್ವೀಕಾರಾರ್ಹವಲ್ಲ’

ಜಾದವ್‌ಪುರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಚಿರಂಜೀಬ್ ಭಟ್ಟಾಚಾರ್ಯ ಅವರು ಘಟನೆಯನ್ನು ಖಂಡಿಸಿದರು.

“ಈ ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರಾಜಕೀಯ ಅಭಿಪ್ರಾಯಗಳನ್ನು ಹೊಂದುವ ಸ್ವಾತಂತ್ರ್ಯವಿದೆ. ಆದರೆ ಇದು ಅಧ್ಯಯನದ ಸ್ಥಳ. ವಿಧ್ವಂಸಕ ಕೃತ್ಯಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇಂತಹ ಘಟನೆಗಳು ಎಂದಿಗೂ ನಡೆಯಬಾರದು. ಜಾದವ್‌ಪುರ ವಿಶ್ವವಿದ್ಯಾಲಯ ಇತ್ತೀಚೆಗೆ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ನಾವು ಸಂಶೋಧನೆಯ ಶ್ರೇಷ್ಠತೆಗೆ ಹೆಸರಾಗಬೇಕು” ಎಂದು ಅವರು ಹೇಳಿದರು.

“ನಾವು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದರೆ ಈವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ” ಎಂದರು.

ನ್ಯಾಯಾಲಯವು ಕ್ಯಾಂಪಸ್‌ನಲ್ಲಿ CCTV ಕ್ಯಾಮೆರಾಗಳನ್ನು ಅಳವಡಿಸುವಂತೆ ಹಾಗೂ 24 ಗಂಟೆಯೂ ಪೊಲೀಸರ ಉಪಸ್ಥಿತಿ ಇರುವಂತೆ ನಿರ್ದೇಶಿಸಿತ್ತು. ಆದರೆ, ಕ್ಯಾಂಪಸ್‌ನೊಳಗೆ ಪೊಲೀಸರನ್ನು ನಿಯೋಜಿಸುವುದಕ್ಕೆ ವಿಶ್ವವಿದ್ಯಾಲಯದ ಆಡಳಿತ ಈ ಹಿಂದೆ ವಿರೋಧ ವ್ಯಕ್ತಪಡಿಸಿತ್ತು ಎಂದು ಕುಲಪತಿ ಪ್ರೊ. ಚಿರಂಜೀಬ್ ಭಟ್ಟಾಚಾರ್ಯ ಹೇಳಿದರು.

“ಪೊಲೀಸರು ನನಗೆ ಕರೆ ಮಾಡಿದ್ದರು. ಒಳಗೆ ಬರಬೇಡಿ, ಹೊರಗೇ ಇರಿ ಮತ್ತು ಅಗತ್ಯವಿದ್ದರೆ ಒಳಗೆ ಪ್ರವೇಶಿಸಲು ಸಿದ್ಧರಾಗಿರಿ ಎಂದು ಅವರಿಗೆ ತಿಳಿಸಿದ್ದೆ. ಗಲಾಟೆ ಯಾರು ಆರಂಭಿಸಿದರು, ಯಾರು ಪ್ರಚೋದಿಸಿದರು ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಲಾಗುವುದು. ವಿದ್ಯಾರ್ಥಿಗಳು ಮತ್ತು ಕ್ಯಾಂಪಸ್‌ನ ಭದ್ರತೆ ನಮ್ಮ ಪ್ರಮುಖ ಆದ್ಯತೆ. ಅಗತ್ಯವಿದ್ದರೆ ಪೊಲೀಸ್ ಹೊರಠಾಣೆ ಸ್ಥಾಪಿಸಲಾಗುವುದು” ಎಂದು ಅವರು ಹೇಳಿದರು.

ಗುರುವಾರ ಪೊಲೀಸರ ಉಪಸ್ಥಿತಿಯ ನಡುವೆಯೂ ಜಾದವ್‌ಪುರ ವಿಶ್ವವಿದ್ಯಾಲಯದ ಕ್ಯಾಂಪಸ್ ಶಾಂತವಾಗಿತ್ತು. ಆದರೆ ಬುಧವಾರ ರಾತ್ರಿ ನಡೆದ ಘರ್ಷಣೆಯನ್ನು ಖಂಡಿಸಿ ABVP ಮತ್ತು SFI ಪ್ರತ್ಯೇಕ ಪ್ರತಿಭಟನಾ ಮೆರವಣಿಗೆ ಕರೆ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News