Gujarat | ಸುಪ್ರೀಂಕೋರ್ಟ್ ವರೆಗೂ ಹೋದ 30 ವರ್ಷಗಳ ಹಿಂದಿನ 20 ರೂಪಾಯಿ ಲಂಚ ಪಡೆದ ಪ್ರಕರಣ; ಮುಂದೇನಾಯ್ತು?

Update: 2026-08-20 07:10 IST

Photo: (AI)

ಹೊಸದಿಲ್ಲಿ, ಆ.20: ಗುಜರಾತ್‌ ನಲ್ಲಿ 20 ರೂ. ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಸುಮಾರು 30 ವರ್ಷಗಳ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಲಂಚದ ಬೇಡಿಕೆ ಸಾಬೀತಾಗದೆ ಕೇವಲ 20 ರೂ. ವಶಪಡಿಸಿಕೊಂಡಿರುವ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಗುಮಾಸ್ತ ಮತ್ತು ಪ್ಯೂನ್‌ ರನ್ನು ಖುಲಾಸೆಗೊಳಿಸಿದೆ.

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಯ ತೀರ್ಪುಗಳನ್ನು ರದ್ದುಗೊಳಿಸಿದೆ.

ಈ ಪ್ರಕರಣ 1996ರ ಫೆಬ್ರುವರಿಗೆ ಸಂಬಂಧಿಸಿದೆ. ಶೈಕ್ಷಣಿಕ ರಿಯಾಯಿತಿ ಪಡೆಯಲು ವಿದ್ಯಾರ್ಥಿಯೊಬ್ಬ ಆನಂದ್ ಜಿಲ್ಲೆಯ ಬೇಚಾರಿ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದ. ಪ್ರಮಾಣಪತ್ರ ನೀಡಲು ಗುಮಾಸ್ತ 120 ರೂ. ಲಂಚ ಕೇಳಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಇದರಲ್ಲಿ 100 ರೂ. ತನಗಾಗಿ ಮತ್ತು 20 ರೂ. ಪ್ಯೂನ್‌ ಗಾಗಿ ಎಂದು ಹೇಳಲಾಗಿತ್ತು.

ವಿದ್ಯಾರ್ಥಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದ. ಬಳಿಕ ACB ಬಲೆ ಬೀಸಿ, ಗುರುತು ಹಾಕಿದ 120 ರೂ. ನೋಟುಗಳನ್ನು ವಿದ್ಯಾರ್ಥಿಗೆ ನೀಡಿ ಕಳುಹಿಸಿತ್ತು.

ಪ್ರಮಾಣಪತ್ರ ಪಡೆದ ಬಳಿಕ ವಿದ್ಯಾರ್ಥಿ ಪ್ಯೂನ್‌ ಗೆ 20 ರೂ. ನೀಡಿದ್ದ. ದಾಳಿ ನಡೆಸಿದ ತಂಡ ಪ್ಯೂನ್‌ ನಿಂದ ಅದೇ ನೋಟನ್ನು ವಶಪಡಿಸಿಕೊಂಡಿತ್ತು. ಆದರೆ ಗುಮಾಸ್ತನ ಬಳಿ 100 ರೂ. ಪತ್ತೆಯಾಗಿರಲಿಲ್ಲ.

ಪ್ರಕರಣದ ವಿಚಾರಣೆಯ ವೇಳೆ ವಿದ್ಯಾರ್ಥಿಯ ಹೇಳಿಕೆಗಳಲ್ಲಿ ಅಸಮಂಜಸತೆ ಕಂಡುಬಂದಿತ್ತು. ಒಂದು ಸಂದರ್ಭದಲ್ಲಿ ಗುಮಾಸ್ತ ಮೊದಲು 200 ರೂ. ಕೇಳಿದ್ದರು ಮತ್ತು ಬಳಿಕ 120 ರೂ.ಗೆ ಒಪ್ಪಿಕೊಂಡಿದ್ದರು ಎಂದು ವಿದ್ಯಾರ್ಥಿ ಹೇಳಿದ್ದ. ಆದರೆ ವಿಚಾರಣಾ ನ್ಯಾಯಾಲಯದ ಮುಂದೆ ನೀಡಿದ ಸಾಕ್ಷ್ಯದಲ್ಲಿ ಈ ಅಂಶ ಇರಲಿಲ್ಲ.

ಲಂಚದ ಬೇಡಿಕೆ ಇದ್ದರೆ ಪೂರ್ಣ 120 ರೂ. ನೀಡುವಂತೆ ACB ವಿದ್ಯಾರ್ಥಿಗೆ ಸೂಚಿಸಿತ್ತು. ಆದರೆ ಆತ ಪ್ಯೂನ್‌ ಗೆ ಕೇವಲ 20 ರೂ. ನೀಡಿದ್ದ. ಗುಮಾಸ್ತ ಮತ್ತು ಪ್ಯೂನ್ ಇಬ್ಬರೂ ಇದ್ದಾಗ ಉಳಿದ 100 ರೂ. ಏಕೆ ನೀಡಲಿಲ್ಲ ಎಂಬುದೂ ಅನುಮಾನಕ್ಕೆ ಕಾರಣವಾಯಿತು.

ಪಾಟಿ ಸವಾಲಿನ ವೇಳೆ ಪ್ಯೂನ್ ತನ್ನಿಂದ ಯಾವುದೇ ಲಂಚ ಕೇಳಿರಲಿಲ್ಲ ಎಂದು ವಿದ್ಯಾರ್ಥಿ ಒಪ್ಪಿಕೊಂಡಿದ್ದ. ಆದಾಯ ಪ್ರಮಾಣಪತ್ರ ಪಡೆದ ಬಳಿಕವೇ ವಿದ್ಯಾರ್ಥಿ ಪ್ಯೂನ್‌ ಗೆ 20 ರೂ. ನೀಡಿದ್ದನ್ನೂ ಪೀಠವು ಗಮನಿಸಿತು.

ಪ್ರಕರಣದ ಒಟ್ಟಾರೆ ಸನ್ನಿವೇಶಗಳು ಪ್ರಾಸಿಕ್ಯೂಷನ್‌ ನ ಆರೋಪದ ಬಗ್ಗೆ ಗಂಭೀರ ಅನುಮಾನ ಮೂಡಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ಇರುವ ಕಾನೂನು ಊಹೆಯನ್ನೂ ನ್ಯಾಯಾಲಯ ಪರಿಗಣಿಸಿತು. ಆರಂಭಿಕ ಲಂಚದ ಬೇಡಿಕೆಯೇ ಸಾಬೀತಾಗದ ಹಿನ್ನೆಲೆಯಲ್ಲಿ ಪ್ಯೂನ್‌ ನಿಂದ ಕೇವಲ 20 ರೂ. ವಶಪಡಿಸಿಕೊಂಡಿರುವುದು ಪ್ರಾಸಿಕ್ಯೂಷನ್ ಪ್ರಕರಣವನ್ನು ಸಾಬೀತುಪಡಿಸಲು ಸಾಕಾಗುವುದಿಲ್ಲ ಎಂದು ಪೀಠ ಹೇಳಿತು.

ಮರುದಿನ ಈದ್ ಹಬ್ಬ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತನಗೆ 20 ರೂ. ನೀಡಿದ್ದಾನೆ ಎಂಬ ಪ್ಯೂನ್‌ ನ ಹೇಳಿಕೆ ಹೆಚ್ಚು ಸಮಂಜಸವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದಲ್ಲದೆ, ಗುಮಾಸ್ತನ ವಿರುದ್ಧ ಮೊಕದ್ದಮೆ ಹೂಡಲು ನೀಡಿದ್ದ ಅನುಮತಿಯನ್ನು ಸಮರ್ಥ ಅಧಿಕಾರ ಹೊಂದಿರದ ವ್ಯಕ್ತಿಯೊಬ್ಬರು ನೀಡಿದ್ದರಿಂದ ಅದು ಅಮಾನ್ಯವಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿತು.

ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್‌ನ ತೀರ್ಪುಗಳನ್ನು ರದ್ದುಗೊಳಿಸಿ, ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News