ಗಿಲ್ ಸೋದರಿಯ ಪೋಸ್ಟ್ ಗೆ ಹೊಸ ಅರ್ಥ ಕೊಟ್ಟು ನಗೆಪಾಟಲಿಗೀಡಾದ ಮಾಧ್ಯಮಗಳು
Screengrab | instagram
ಹೊಸದಿಲ್ಲಿ: ರಕ್ಷಾಬಂಧನದಂದು ಕ್ರಿಕೆಟಿಗ ಶುಭ್ಮನ್ ಗಿಲ್ ಅವರ ಸಹೋದರಿ ಶಾಹ್ನೀಲ್ ಗಿಲ್, ಅಣ್ಣನ ಜೊತೆಗಿನ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು “Annual subscription renewed” (ವಾರ್ಷಿಕ ಚಂದಾದಾರಿಕೆ ನವೀಕರಿಸಲಾಗಿದೆ) ಎಂದು ಕ್ಯಾಪ್ಷನ್ ಬರೆದಿದ್ದರು. ಅಣ್ಣ-ತಂಗಿಯ ಬಾಂಧವ್ಯವನ್ನು ಪ್ರತಿವರ್ಷದಂತೆ ಮುಂದುವರಿಸಲಾಯಿತು ಎಂಬರ್ಥ ಬರುವಂತೆ ತಮಾಷೆಯಾಗಿ ‘ವಾರ್ಷಿಕ ಸಬ್‌ಸ್ಕ್ರಿಪ್ಷನ್’ಗೆ ಹೋಲಿಸಿ ಅವರು ಈ ಕ್ಯಾಪ್ಷನ್ ಹಾಕಿದ್ದರು.
ಆದರೆ, ಕೆಲವು ಮಾಧ್ಯಮಗಳು ಈ ಕ್ಯಾಪ್ಷನ್ ಅನ್ನು ಅಕ್ಷರಶಃ ಅರ್ಥೈಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಕ್ಕೆ ಗುರಿಯಾಗಿವೆ. ಹಿಂದುಸ್ತಾನ್ ಟೈಮ್ಸ್ ಮತ್ತು ಇಂಡಿಯಾ ಟುಡೇ ಸೇರಿದಂತೆ ಕೆಲವು ಮಾಧ್ಯಮಗಳು, ಗಿಲ್ ಸಹೋದರ-ಸಹೋದರಿ ತಮ್ಮ ವಾರ್ಷಿಕ ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ನವೀಕರಿಸಿಕೊಂಡಿದ್ದಾರೆ ಎಂಬ ಅರ್ಥ ಬರುವಂತೆ ವರದಿ ಮಾಡಿವೆ.
ಈ ವಿಚಾರವನ್ನು ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ (@zoo_bear) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “What You Say v/s What News Channels Think You Said” (ನೀವು ಹೇಳಿದ್ದು ಏನು? ಸುದ್ದಿ ವಾಹಿನಿಗಳು ಅದನ್ನು ಅರ್ಥಮಾಡಿಕೊಂಡಿದ್ದು ಏನು?) ಎಂಬ ಶೀರ್ಷಿಕೆಯೊಂದಿಗೆ ಮೂಲ ಪೋಸ್ಟ್ ಮತ್ತು ಮಾಧ್ಯಮ ವರದಿಗಳನ್ನು ಹೋಲಿಸಿ ತೋರಿಸಿದ್ದಾರೆ.
ಈ ಪೋಸ್ಟ್ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದು, ಯುವಜನರು ಬಳಸುವ ಸ್ಲ್ಯಾಂಗ್, ಹಾಸ್ಯ ಮತ್ತು ವ್ಯಂಗ್ಯವನ್ನು ಅರ್ಥಮಾಡಿಕೊಳ್ಳದೆ ಮಾಧ್ಯಮಗಳು ಕೆಲವೊಮ್ಮೆ ಅವುಗಳನ್ನು ಅಕ್ಷರಶಃ ವರದಿ ಮಾಡುತ್ತಿವೆ ಎಂಬ ಟೀಕೆಗಳು ಕೇಳಿಬಂದಿವೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರ ರೋನಿ ದಿ ವಾಕರ್, ಈ ಹಿಂದೆ ರಿಯಾ ಚಕ್ರವರ್ತಿಯ ವಾಟ್ಸ್‌ಆ್ಯಪ್ ಸಂದೇಶದಲ್ಲಿದ್ದ “Imma Bounce” ಎಂಬ ಪದವನ್ನು ನವಿಕಾ ಕುಮಾರ್ ಅವರು ‘ಬ್ಯಾಂಕ್ ಚೆಕ್ ಬೌನ್ಸ್’ ಎಂದು ಅರ್ಥೈಸಿಕೊಂಡಿದ್ದ ಪ್ರಕರಣವನ್ನು ನೆನಪಿಸಿದ್ದಾರೆ. “ಅದನ್ನು ಮೀರಿಸುವಂತಹ ತಪ್ಪು ವ್ಯಾಖ್ಯಾನವನ್ನು ಯಾರಾದರೂ ಮಾಡಬಹುದೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
2020ರಲ್ಲಿ ಸುಶಾಂತ್ ಸಿಂಗ್ ರಾಜ್‌ಪುತ್ ಪ್ರಕರಣದ ಸಂದರ್ಭದಲ್ಲಿ, ಟೈಮ್ಸ್ ನೌ ಚಾನೆಲ್ ರಿಯಾ ಚಕ್ರವರ್ತಿಯ ಚಾಟ್‌ನಲ್ಲಿದ್ದ “Imma Bounce” ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡು, ಅದನ್ನು ‘ಚೆಕ್ ಬೌನ್ಸ್’ಗೆ ಸಂಬಂಧಿಸಿದ ಪದವೆಂಬಂತೆ ವರದಿ ಮಾಡಿತ್ತು.
ವಾಸ್ತವದಲ್ಲಿ “Imma bounce” ಎಂಬುದು ಆಡುಭಾಷೆಯ ಪದಪ್ರಯೋಗವಾಗಿದ್ದು, “ನಾನು ಹೊರಡುತ್ತೇನೆ” ಅಥವಾ “ನಾನು ಇಲ್ಲಿಂದ ಹೋಗುತ್ತೇನೆ” ಎಂಬ ಅರ್ಥ ನೀಡುತ್ತದೆ.
ಆ ವರದಿಯೂ ಆಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವ್ಯಂಗ್ಯ ಮತ್ತು ಮೀಮ್‌ಗಳಿಗೆ ಕಾರಣವಾಗಿತ್ತು.