Photo Credit : x.com/TOILucknow

ಲಖನೌ: ಹರ್ಯಾಣ್ವಿ ಗಾಯಕ ಹಾಗೂ ಯೂಟ್ಯೂಬರ್ ಅಂಕಿತ್ ಬಾಲ್ಯನ್ (32) ಅವರನ್ನು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಜಿಮ್  ಹೊರಗೆ ದುಷ್ಕರ್ಮಿಗಳು ಪಾಯಿಂಟ್-ಬ್ಲಾಂಕ್ ಅಂತರದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ದುಷ್ಕರ್ಮಿಗಳು ಅಂಕಿತ್ ಬಾಲ್ಯನ್ ಅವರ ಮೇಲೆ ಸುಮಾರು 18 ಸುತ್ತು ಗುಂಡು ಹಾರಿಸಿದ್ದಾರೆ.

ಶಾಮ್ಲಿ ನಗರ ಕೊತ್ವಾಲಿ ವ್ಯಾಪ್ತಿಯ ಆರ್ಯಪುರಿ ನಾಲಾಪತ್ರಿ ಬಳಿ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ. ಅಂಕಿತ್ ಬಾಲ್ಯನ್ ಜಿಮ್ ನಿಂದ ಹೊರಬಂದು ತಮ್ಮ ಸ್ಕಾರ್ಪಿಯೋ ಎಸ್ ಯು ವಿ ವಾಹನದತ್ತ ತೆರಳುತ್ತಿದ್ದಾಗ, ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ.

ವಾಹನದ ಚಾಲಕನ ಬದಿಯಲ್ಲಿ ಗೋಡೆ ಅಡ್ಡಲಾಗಿದ್ದರಿಂದ ಅಂಕಿತ್ ಪಕ್ಕದ ಬಾಗಿಲಿನತ್ತ ತೆರಳಿ ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಬಾಗಿಲನ್ನು ಬಲವಂತವಾಗಿ ತೆರೆದು, ಸಮೀಪದಿಂದಲೇ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ.

ಅಂಕಿತ್ ಅವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ 5 ಗುಂಡುಗಳು ತಗುಲಿದ್ದು, ವಾಹನದ ಮುಂಭಾಗದ ವಿಂಡ್ ಶೀಲ್ಡ್ ಗೆ 3 ಗುಂಡುಗಳು ಹೊಡೆದಿವೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಶಾಮ್ಲಿಯ ಬಂಟಿಖೇಡಾ ಗ್ರಾಮದ ನಿವಾಸಿಯಾಗಿದ್ದ ಅಂಕಿತ್ ಬಾಲ್ಯನ್ ಯೂಟ್ಯೂಬ್ ನಲ್ಲಿ 3.66 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದರು. ‘ಭರೀ ಕೋರ್ಟ್ ಮೇ ಗೋಲಿ ಮಾರೇಂಗೆ ಮೇರಿ ಜಾನ್’ ಸೇರಿದಂತೆ ಹಲವು ಹರ್ಯಾನ್ವಿ ಹಾಡುಗಳ ಮೂಲಕ ಅವರು ಜನಪ್ರಿಯರಾಗಿದ್ದರು. ಅವರ ವೀಡಿಯೊಗಳಲ್ಲಿ ಹೆಚ್ಚಾಗಿ ಎಸ್‌ ಯು ವಿ ಕಾರುಗಳು ಹಾಗೂ ಬಂದೂಕುಗಳು ಕಾಣಿಸಿಕೊಳ್ಳುತ್ತಿದ್ದವು.

ಇತ್ತೀಚೆಗೆ ಅವರು ಜಿಲ್ಲಾ ಪಂಚಾಯತ್ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದ್ದು, ಹತ್ಯೆಯ ಹಿಂದೆ ರಾಜಕೀಯ ದ್ವೇಷವಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೀರತ್ ವಲಯದ ಎಡಿಜಿಪಿ ಭಾನು ಭಾಸ್ಕರ್ ಹಾಗೂ ಎಸ್ಪಿ ಎಂ.ಪಿ. ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಹತ್ಯೆಯನ್ನು ಖಂಡಿಸಿ ಅಂಕಿತ್ ಅವರ ಕುಟುಂಬಸ್ಥರು, ಬೆಂಬಲಿಗರು ಹಾಗೂ ಗ್ರಾಮಸ್ಥರು ದೆಹಲಿ–ಮುಜಾಫರ್ ನಗರ ರಸ್ತೆಯನ್ನು ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಹಂತಕರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಹತ್ಯೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿರುವ ಅವರು, ಘಟನೆಯ ಹಿಂದೆ ರಾಜಕೀಯ ಪಿತೂರಿ ಇರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor