West Bengal | ಮಾಲ್ದಾ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 3 ವಾರಗಳಲ್ಲಿ 60 ನವಜಾತ ಶಿಶುಗಳು ಮೃತ್ಯು; ವರದಿ ಕೇಳಿದ ಆರೋಗ್ಯ ಇಲಾಖೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 10 ನವಜಾತ ಶಿಶುಗಳು ಸೇರಿದಂತೆ ಆಗಸ್ಟ್‌ನ ಮೊದಲ 3 ವಾರಗಳಲ್ಲಿ ಒಟ್ಟು 60 ನವಜಾತ ಶಿಶುಗಳು ಮೃತಪಟ್ಟಿದೆ. ಇದರ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆಯು ಆಸ್ಪತ್ರೆ ಅಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿದ್ದು, ತನಿಖೆಯನ್ನು ಆರಂಭಿಸಿದೆ.
ರಾಜ್ಯ ಆರೋಗ್ಯ ಇಲಾಖೆಯು ಮಾಲ್ಡಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯವೈಖರಿಯ ಪರಿಶೀಲನೆಗೆ ಆದೇಶಿಸಿದೆ. ಇದಲ್ಲದೆ, ಮೃತಪಟ್ಟ ಹಲವು ಶಿಶುಗಳನ್ನು ಮಾಲ್ಡಾ ವೈದ್ಯಕೀಯ ಕಾಲೇಜಿಗೆ ದಾಖಲಿಸುವ ಮೊದಲು ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು ಹಾಗೂ ಬ್ಲಾಕ್ ಮಟ್ಟದ ಆರೋಗ್ಯ ಕೇಂದ್ರಗಳನ್ನು ಪರಿಶೀಲಿಸುತ್ತಿದೆ.
ಆಗಸ್ಟ್ ಎರಡನೇ ವಾರದಲ್ಲಿ ಒಂದೇ ದಿನ 10 ನವಾಜಾತ ಶಿಶುಗಳು ಮೃತಪಟ್ಟಿದೆ. ಇವುಗಳಲ್ಲಿ 8 ಶಿಶುಗಳನ್ನು ಇತರ ಸರಕಾರಿ ಆಸ್ಪತ್ರೆಗಳು ಅಥವಾ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಜನಿಸಿದ ನಂತರ ಮಾಲ್ಡಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಶಿಶುಗಳನ್ನು ವೈದ್ಯಕೀಯ ಕಾಲೇಜಿಗೆ ಕರೆ ತರಲಾಯಿತು. ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಶಿಶುಗಳು ಮೃತಪಟ್ಟಿದೆ ಎನ್ನಲಾಗಿದೆ.
ʼಆಗಸ್ಟ್ 12 ರಂದು ಒಂದೇ ದಿನ ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಒಂದೇ ದಿನದಲ್ಲಿ 10 ಶಿಶುಗಳು ಮೃತಪಟ್ಟಿದೆ. ಆದರೆ, ಅವುಗಳಲ್ಲಿ ಎರಡು ಮಾತ್ರ ಮಾಲ್ಡಾ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದೆ. ಇನ್ನುಳಿದ ಶಿಶುಗಳನ್ನು ಗಂಭೀರ ಸ್ಥಿತಿಯಲ್ಲಿ ಇತರ ಆಸ್ಪತ್ರೆಗಳಿಂದ ಕರೆತರಲಾಗಿತ್ತುʼ ಎಂದು ವೈದ್ಯಕೀಯ ಅಧೀಕ್ಷಕ ಪ್ರಸೇನ್ ಜಿತ್ ಬಾರ್ ಹೇಳಿದರು.
ಒಂದೇ ದಿನ ಮೃತಪಟ್ಟ 10 ನವಜಾತ ಶಿಶುಗಳಲ್ಲಿ 4 ಶಿಶುಗಳಿಗೆ ಜನ್ಮಜಾತ ಹೃದಯ ರೋಗ ಇತ್ತು, ಮತ್ತರಡು ಶಿಶುಗಳಿಗೆ ಉಸಿರಾಟದ ತೊಂದರೆ ಇತ್ತು ಎಂದು ಪ್ರಸೇನ್ ಜಿತ್ ಬಾರ್ ತಿಳಿಸಿದ್ದಾರೆ.