ನೇಪಾಳ ಪ್ರವಾಹ | 300 ಭಾರತೀಯರು ನಾಪತ್ತೆ: ನೇಪಾಳ ವಿದೇಶಾಂಗ ಸಚಿವರಿಂದ ಮಾಹಿತಿ
Photo credit: PTI
ಹೊಸದಿಲ್ಲಿ: ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ 300 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ.
ಪ್ರವಾಹದಿಂದಾಗಿ ಕೆಲವೇ ಗಂಟೆಗಳಲ್ಲಿ ಒಂದರ ಮೇಲೊಂದು ಪಟ್ಟಣಗಳು ಸಂಪೂರ್ಣವಾಗಿ ನಾಶವಾಗಿವೆ. ರಾಸುವಾ ಪ್ರದೇಶದಲ್ಲಿ 160 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಶಿಶಿರ್ ಖನಾಲ್ ಹೇಳಿದ್ದಾರೆ.
ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ ಮತ್ತು ಹಲವಾರು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಹಾನಿಯ ಸಂಪೂರ್ಣ ಪ್ರಮಾಣವನ್ನು ಅಂದಾಜಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕನಿಷ್ಠ 300 ಭಾರತೀಯ ಪ್ರಜೆಗಳು, ಅವರಲ್ಲಿ ಹೆಚ್ಚಿನವರು ಮಾನಸ ಸರೋವರ ಯಾತ್ರಿಕರು, ಹಠಾತ್ ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದರು.
ಸುಮಾರು 500 ವಿದೇಶಿ ಪ್ರಜೆಗಳ ಸಂಪರ್ಕ ಸಾಧ್ಯವಾಗಿಲ್ಲ. ವಿದೇಶಿ ಪ್ರಜೆಗಳ ಸುರಕ್ಷತೆಗಾಗಿ ನೇಪಾಳ ಸರಕಾರ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ನೇಪಾಳದ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಎಷ್ಟು ಬದ್ಧರಾಗಿದ್ದೇವೆಯೋ, ಅಷ್ಟೇ ಬದ್ಧತೆಯನ್ನು ವಿದೇಶಿ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೂ ಹೊಂದಿದ್ದೇವೆ ಎಂದು ಸಚಿವರು ಹೇಳಿದರು.
"ಸದ್ಯ ನಮ್ಮ ಗಮನ ರಕ್ಷಣಾ ಕಾರ್ಯಾಚರಣೆ ಮತ್ತು ತಕ್ಷಣದ ಪರಿಹಾರದತ್ತ ಕೇಂದ್ರೀಕೃತವಾಗಿದೆ. ವಿಶ್ವದಾದ್ಯಂತ ಅನೇಕರು ನೇಪಾಳಕ್ಕೆ ಬೆಂಬಲ ನೀಡುತ್ತಿದ್ದು, ನಮ್ಮ ಸಂಕಷ್ಟಕ್ಕೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಸರಕಾರ ಈಗಾಗಲೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಇದಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ" ಎಂದು ಶಿಶಿರ್ ಖನಾಲ್ ಹೇಳಿದರು.