×
Ad

West Bengal | ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಪ್ರಕರಣ: ಐವರು ಆರೋಪಿಗಳ ಬಂಧನ

Update: 2026-05-31 14:48 IST
Photo| PTI

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ ಪುರಕ್ಕೆ ಭೇಟಿ ನೀಡಿದಾಗ, ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ.

ಸೋನಾರ್ ಪುರ ಪ್ರದೇಶದಿಂದ ಸಂಗ್ರಹಿಸಲಾದ ವಿಡಿಯೊ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ಸೋನಾರ್ ಪುರಕ್ಕೆ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿದ್ದಾಗ, ಜನರ ಗುಂಪೊಂದು ಅವರ ಮೇಲೆ ಮೊಟ್ಟೆ, ಕಲ್ಲುಗಳ ತೂರಾಟ ನಡೆಸಿತ್ತು. ಈ ವೇಳೆ, ಕ್ರಿಕೆಟ್ ಹೆಲ್ಮೆಟ್ ಧರಿಸಿ, ಭದ್ರತಾ ಸಿಬ್ಬಂದಿಗಳ ನೆರವಿನೊಂದಿಗೆ ಅಭಿಷೇಕ್ ಬ್ಯಾನರ್ಜಿ ಅಲ್ಲಿಂದ ಪಾರಾಗಿದ್ದರು.

ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಲು ಅಭಿಷೇಕ್ ಬ್ಯಾನರ್ಜಿ ಸೋನಾರ್ ಪುರ್ ಗೆ ಭೇಟಿ ನೀಡಿದ್ದಾಗ, ಅವರ ಮೇಲೆ ಈ ದಾಳಿ ನಡೆದಿತ್ತು. ಬಳಿಕ, ತನ್ನನ್ನು ಹತ್ಯೆ ನಡೆಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದರು ಎಂದು ಅವರು ದೂರಿದ್ದರು. ಸಂಸದ ಅಭಿಷೇಕ್ ಬ್ಯಾನರ್ಜಿಯೊಂದಿಗೆ ಸಂಘರ್ಷಕ್ಕಿಳಿದ ಅಪರಿಚಿತರ ಗುಂಪೊಂದು, ಅವರನ್ನು ತಳ್ಳಾಡಿ, ‘ಕಳ್ಳ, ಕಳ್ಳ’ ಎಂಬ ಘೋಷಣೆಗಳನ್ನು ಕೂಗಿತ್ತು.

ಇದರಿಂದ ಸ್ಥಳದಲ್ಲಿ ದಿಢೀರನೆ ಗದ್ದಲದ ವಾತಾವರಣ ನಿರ್ಮಾಣವಾಗಿ, ಅಭಿಷೇಕ್ ಬ್ಯಾನರ್ಜಿ ಮೇಲೆ ಜನರ ಗುಂಪು ಹಲ್ಲೆ ನಡೆಸಿ, ಅವರ ಮೇಲೆ ದೈಹಿಕ ದಾಳಿ ನಡೆಸಲು ಪ್ರಯತ್ನಿಸಿತು. ತಕ್ಷಣವೇ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿಗಳು, ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆದೊಯ್ದಿದ್ದರು.

ಈ ಕುರಿತು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News