×
Ad

ಅಕ್ಷರ ಭೂಮಿ ಸ್ವಾಭಿಮಾನದ ‘ಲ್ಯಾಂಡ್ ಲಾರ್ಡ್’

Update: 2026-02-09 12:38 IST

ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನುವುದು ಭೂ ತಾಯಿಯ ಮಕ್ಕಳು ಸಮಸಮಾಜದಲ್ಲಿ ಸಮಸಮವಾಗಿ ಸ್ವಾಭಿಮಾನದಿಂದ ಬದುಕುವ ಸೌಂದರ್ಯವನ್ನೇ ಹೇಳುತ್ತದೆ.

ಜಗತ್ತಿನಲ್ಲಿ ಸಿನೆಮಾ ಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮ. ಉಳ್ಳವರಿಗೂ ಇಲ್ಲದವರಿಗೂ ಸಮಾನವಾಗಿ ಮನರಂಜಿಸುವ ಮಾಧ್ಯಮ. ಮನುಷ್ಯ ತನ್ನದೇ ಆಗು-ಹೋಗುಗಳನ್ನ್ನು ತನ್ನಂತೆ ಇರುವವರು ಮಾಡುವಾಗ, ಅವರಲ್ಲಿ ತನ್ನನ್ನು ಕಂಡುಕೊಳ್ಳುತ್ತಾ ಒಳಿತು-ಕೆಡುಕುಗಳನ್ನ್ನು ಆವಾಹಿಸಿಕೊಳ್ಳುತ್ತಾನೆ. ಪ್ರೀತಿಸುತ್ತಾನೆ, ದುಃಖಿಸುತ್ತಾನೆ, ಅಳುತ್ತಾನೆ, ನಗುತ್ತಾನೆ, ಹಾಡು ಹೇಳುತ್ತಾನೆ, ನೋವು ಮರೆಯುತ್ತಾನೆ, ಪ್ರೀತಿಸುತ್ತಾನೆ... ಹೀಗೆ ಜೀವನದ ಒಂದು ಸಣ್ಣ ನಿರಂಬಳತೆಯನ್ನು ಈ ಸಿನೆಮಾದಿಂದ ಪಡೆಯುತ್ತಾನೆ. ಕ್ಯಾಮರಾ ಮುಖಾಂತರ ತನ್ನನ್ನೇ ಮೋಹಿಸಿಕೊಳ್ಳುವ ಮನುಷ್ಯ ಅತ್ಯಂತ ಕಡುಮೋಹಿಯಾಗಿರುತ್ತಾನೆ. ಜಗತ್ತಿನಲ್ಲಿ ಎಷ್ಟೊಂದು ಸಿನೆಮಾಗಳು ಬಂದು ಹೋಗಿವೆ. ಎಷ್ಟೊಂದು ಜನರನ್ನು ಪ್ರಭಾವಿಸಿವೆೆ, ಪ್ರಭಾವಿಸುತ್ತಿವೆೆ. ನನ್ನ ಬಾಲ್ಯದಲ್ಲಿ ನಮ್ಮೂರಿನ ಟೆಂಟುಗಳಲ್ಲಿ ನಡೆಯುತ್ತಿದ್ದ ಸಿನೆಮಾಗಳು ಅದು ಎಷ್ಟು ಪ್ರದರ್ಶನ ಕಂಡಿದೆಯೋ ಅಷ್ಟು ಪ್ರದರ್ಶನಗಳನ್ನು ನಾನು ತಪ್ಪದೇ ನೋಡಿದ್ದೇನೆ. ಅವುಗಳೆಲ್ಲವನ್ನು ನಾನು ಬಹುತೇಕ ಕದ್ದೇ ನೋಡಿದ್ದೇನೆ. ಅದನ್ನು ಹೇಳುವುದಕ್ಕೆ ಹೋದರೆ ದೊಡ್ಡ ಪುಸ್ತಕವೇ ಆಗುತ್ತದೆ. ಆದರೆ ನಾನು ‘ನೀನಾಸಂ’ ಸೇರಿದ ಮೇಲೆ ಜಗತ್ತಿನ ಶ್ರೇಷ್ಠ ಸಿನೆಮಾಗಳನ್ನು ನೋಡಲು ದೊಡ್ಡ ಅವಕಾಶ ಸಿಕ್ಕಿದ್ದು ನನ್ನ ಜೀವಮಾನದ ದೊಡ್ಡ ಗ್ರಹಿಕೆಯ ಕಾಲ ಎನ್ನಬಹುದು. ಜಗತ್ತಿನಲ್ಲಿ ಸಿನಿಮಾ ನೋಡದ ಕಣ್ಣುಗಳು ಮತ್ತು ಸಿನೆಮಾ ಹಾಡುಗಳನ್ನು ಕೇಳದ ಕಿವಿಗಳು ಇಲ್ಲದ್ದಿಲ್ಲ. ಅಷ್ಟರಮಟ್ಟಿಗೆ ಸಿನೆಮಾ ಮನುಷ್ಯನಲ್ಲಿ ಹಾಸುಹೊಕ್ಕಾಗಿದೆ.

ಇತ್ತೀಚೆಗೆ ನಮ್ಮ ಪ್ರೀತಿಯ ಪತ್ರಕರ್ತರಾದ ಮಂಜುನಾಥ್ ಅದ್ದೆಯವರು ನಮ್ಮೆಲ್ಲರ ಹೆಮ್ಮೆಯ ‘ಕನ್ನಡದ ಸಾರ್ವಕಾಲಿಕ ನಟ, ಕಲಾವಿದ ಡಾ. ರಾಜ್‌ಕುಮಾರ್’ ಬಗ್ಗೆ ‘ಬಡವರ ರಾಜಕುಮಾರ’ ಎನ್ನುವ ಒಂದು ಅಪರೂಪದ ಪುಸ್ತಕ ಬರೆದಿದ್ದಾರೆ. ಇದರ ಬಿಡುಗಡೆ ಸಮಾರಂಭಕ್ಕೆ ಕನ್ನಡ ಸಿನೆಮಾಕ್ಕೆ ಹೊಸ ಭಾಷ್ಯೆ ಬರೆದ ಸೂರಿ ನಿರ್ದೇಶನದ ದುನಿಯಾ ಸಿನೆಮಾದಿಂದ ದುನಿಯಾ ವಿಜಯ್ ಎಂದೇ ಪ್ರಸಿದ್ಧರಾದ ಶ್ರೀ ವಿಜಯ್‌ಕುಮಾರ್ ಬಂದಿದ್ದರು. ತನ್ನ ಬಣ್ಣದಿಂದ ಅಪಾರ ನೋವು, ಅವಮಾನ ಅನುಭವಿಸಿದ ಶ್ರೀ ವಿಜಯ್‌ಕುಮಾರ್ ಇಡೀ ನಾಡಿಗೆ ದುನಿಯಾ ವಿಜಯ್ ಆದರು. ಅದರಿಂದ ಕನ್ನಡ ಸಿನೆಮಾಗೆ ಒಂದು ಅಪರೂಪದ ಪ್ರತಿಭೆ ಸಿಕ್ಕಂತಾಯಿತು. ಈ ನೆಲದ ಅಪ್ಪಟ ಕಲಾವಿದ ನಿರ್ದೇಶಕ, ನಿರ್ಮಾಪಕ ದುನಿಯಾ ವಿಜಯ್ ತನ್ನ ಸಿನೆಮಾ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಹೊಸ ಪ್ರಯೋಗಗಳಿಗೆ ಒಡ್ಡಿಕೊಂಂಡಿದ್ದಾರೆ. ಕೆಲವೊಮ್ಮೆ ಈ ನೆಲದಲ್ಲಿ ನಡೆದ ಸತ್ಯದ ಘಟನೆಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದಾರೆ. ಈ ಸಿನೆಮಾ ಮಾಧ್ಯಮ ತುಂಬಾ ಸಂಕೀರ್ಣವಾದದ್ದು ಹೌದು. ಸಂಕಷ್ಟದ ಮಾಧ್ಯಮವೂ ಹೌದು. ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರು ತಮ್ಮ ಪ್ರತಿಭೆಯಿಂದ ಮೇಲೆ ಬಂದಿದ್ದ್ದೂ ಇದೆ. ಇನ್ನು ಕೆಲವರು ಜಾತಿ ಪ್ರಭಾವವೋ ‘ಹಣದ ಪ್ರಭಾವವೋ’ ಕಾರಣವಾಗಿ ಬಂದಿರುವುದು ಇದೆ. ಆದರೆ ಅಂತಿಮವಾಗಿ ಯಾರು ಅಪ್ಪಟ ಕಲಾವಿದರಾಗಿದ್ದಾರೋ, ಜನರ ಪ್ರೀತಿ ಗಳಿಸಿದ್ದಾರೋ, ಸಮಾಜವನ್ನು ಪ್ರಭಾವಿಸಿದ್ದಾರೋ ಅಂಥವರು ಮಾತ್ರ ಎಲ್ಲಾ ಕಾಲಕ್ಕೂ ಉಳಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಮುದಾಯಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದರೆ ಅವು ಓಡುವುದಿಲ್ಲ. ಇವತ್ತಿಗೂ ನೇರವಾಗಿ ಅಸ್ಪಶ್ಯತೆಯನ್ನು ಕುರಿತು ಸಿನೆಮಾ ಮಾಡಿದರೆ ಓಡುವುದಿಲ್ಲ. ಕಾರಣ ಸ್ಪಷ್ಟ. ಇವತ್ತಿಗೂ ಅಸ್ಪಶ್ಯತೆ ಜೀವಂತವಾಗಿದೆ. ಅಸ್ಪಶ್ಯತೆಯ ಆಚರಣೆಗಳು ಇವತ್ತಿಗೂ ಘೋರವಾಗಿ ಆಚರಿಸಲ್ಪಡುತ್ತಿವೆ. ತಮಿಳು, ಮರಾಠಿ ಚಲನಚಿತ್ರಗಳು ಅಸ್ಪಶ್ಯತೆ ಮತ್ತು ಶೋಷಣೆಯ ವಿರುದ್ಧದ ಕಥನಗಳನ್ನು ಯಶಸ್ವಿಯಾಗಿ ಸಿನೆಮಾ ಆಗಿಸಿದ್ದಾರೆ. ಕನ್ನಡದಲ್ಲಿ ಅದಿನ್ನೂ ಸಾಧ್ಯವಾಗಿಲ್ಲ. ಸುಮಾರು 60-70 ವರ್ಷಗಳ ಹಿಂದೆ ಡಾ. ರಾಜ್ ಕುಮಾರ್ ರವರ ‘ಭಕ್ತಚೇತ’ ಮತ್ತು ನಂತರ ಬಂದ ‘ಹೇಮಾವತಿ’, ‘ಎಲ್ಲಿಂದಲೋ ಬಂದವರು’ ‘ಬೂತಯ್ಯನ ಮಗ ಅಯ್ಯು’ ಸಿನೆಮಾಗಳು ಪ್ರಭಾವಿಸಿವೆ. ಆ ನಂತರದ ದಿನಗಳಲ್ಲಿ ಬಂದ ತುಂಡು ಭೂಮಿಗಾಗಿ ಹೋರಾಡಿದ ‘ಚೋಮನದುಡಿ’ ನಮ್ಮ ನೆನಪಿನಾಳದಲ್ಲಿದೆ. ಇದನ್ನು ಹೊರತು ಪಡಿಸಿದರೆ ಇತ್ತೀಚೆಗೆ ಬಂದ ‘ಕಾಂತಾರ’ ಸಿನೆಮಾ ಭೂ ಹೀನರ ಭೂ ಹೋರಾಟದ ಕಥನವೇ ಆಗಿದ್ದರೂ ದೈವಗಳ ಆರಾಧನೆ ಕಡೆಯೇ ತಿರುಗಿಸಿದ್ದರಿಂದ ಭೂ ಹೋರಾಟ ನಗಣ್ಯವಾಯಿತು. ಹಾಗೆಯೇ ಬಂದ ಇನ್ನೊಂದು ಮಹತ್ವದ ಸಿನೆಮಾ ‘ಕಾಟೇರಾ’ ಕೂಡ ಅತ್ಯಂತ ಪ್ರಭಾವ ಬೀರಿದ ಸಿನೆಮಾ.

ನಾನು ಈಗ ಹೇಳ ಹೊರಟಿದ್ದು ‘ಲ್ಯಾಂಡ್ ಲಾರ್ಡ್’ ಸಿನೆಮಾದ ಬಗ್ಗೆ. ಇದರ ಅರ್ಥ ‘ಭೂ ಮಾಲೀಕ’. ಹಾಗೆ ನೋಡಿದರೆ ಇಲ್ಲಿ ಯಾರು ಕೂಡ ಭೂ ಮಾಲೀಕನಾಗಲು ಸಾಧ್ಯವಿಲ್ಲ. ಭೂಮಿಗೇ ಭೂಮಿಯೇ ಮಾಲಿಕ. ಆದರೆ ಭೂಮಿಯ ಒಡೆತನ, ಕೃಷಿಯ ಸಾಗುವಳಿ ಬದುಕುವವರ ವಿಶ್ವಾಸ ಹೆಚ್ಚಿಸುತ್ತದೆ. ಹೇಗೆಂದರೆ ಇನ್ನೊಬ್ಬರ ತೋಟ, ಗದ್ದೆ, ಜಮೀನುಗಳಲ್ಲಿ ಕೂಲಿ ಮಾಡುವುದೇ ಬದುಕಲ್ಲ; ತನಗೆ ಸಿಕ್ಕ ಅಥವಾ ಇರುವ ಭೂಮಿಯಲ್ಲೇ ಕೃಷಿ ಮಾಡುವ ಬದುಕು ಸ್ವಾಭಿಮಾನದ ಬದುಕು. ಆದರೆ ಭಾರತೀಯ ಸಮಾಜದಲ್ಲಿ ಮನುಸ್ಮತಿ ಸೃಷ್ಟಿಸಿದ ಅಸಮಾನತೆಯಿಂದಾಗಿ ಇಡೀ ಸಮಾಜವನ್ನು ಕತ್ತರಿಸಿ ಹೋಳು ಮಾಡಲಾಗಿದೆ. ಈ ನೆಲದಲ್ಲಿ ಭೂ ಹೀನರು, ಶೋಷಿತರು, ಅಸ್ಪಶ್ಯರು, ಶೂದ್ರರು... ಇವರೆಲ್ಲರಿಗೂ ಒಂದು ಆಶಾದಾಯಕ ಬೆಳಕು ಮೂಡಿದ್ದು ಅದು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಸ್ವತಃ ತಾನು ಅನುಭವಿಸಿ ಇದಕ್ಕೊಂದು ದೊಡ್ಡ ಪರಿಹಾರವನ್ನು ಸಂವಿಧಾನ ಮೂಲಕ ದೊರಕಿಸಿಕೊಟ್ಟಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ.

ಶೋಷಣೆಯ ಕೊಂಡಿಗಳನ್ನು ಕಳಚುವ ನಿರಂತರ ಪ್ರಯತ್ನ ಅನೇಕ ನಾಯಕರಿಂದ ನಡೆದಿದೆ. ಸ್ವತಃ ನೊಂದ ಜನರು ಕೂಡ ತನ್ನ ಕ್ಷೀಣ ಧ್ವನಿಯಿಂದಲೂ ಅಬ್ಬರದ ಧ್ವನಿಯಿಂದಲೂ ಇದಕ್ಕೆ ಪರಿಹಾರ ಕೇಳಲಾಗಿದೆ. ಆದರೆ ಒಂದು ಸಮುದಾಯವನ್ನು ಅಸ್ಪಶ್ಯರೆಂದು ಆಚೆಗಿಟ್ಟು ಇವತ್ತಿಗೂ ಮುಟ್ಟಿಸಿಕೊಳ್ಳಲೂ ಹಿಂಜರಿಯುವವರೆಂದರೆ ಇನ್ನು ಉಳಿದಿದ್ದನ್ನು ನೀವೇ ಊಹಿಸಿಕೊಳ್ಳಿ. ದಲಿತರು ಎನ್ನುವ ಕಾರಣಕ್ಕಾಗಿಯೇ ಅವರ ಏಳಿಗೆಯನ್ನು ಸಹಿಸದೆ ಕೊಲ್ಲಲಾಗುತ್ತಿದೆ ಎಂದರೆ ಇದಕ್ಕಿಂತಲೂ ದುರಂತ ಇನ್ನೇನಿದೆ ಇಂತಹ ಸಮಾಜ ಹೇಗೆ ತಾನೆ ಏಳಿಗೆಯಾದೀತು...? ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳೊಬ್ಬಳು ಅನ್ಯ ಸಮುದಾಯದ ಹುಡುಗನನ್ನು ಮದುವೆಯಾದಳೆಂಬ ಕಾರಣಕ್ಕೆ ಆ ಮಗಳ ಹೊಟ್ಟೆಯಲ್ಲಿ ಇನ್ನೊಂದು ಜೀವ ಚಿಗುರೊಡೆಯುತ್ತಿರುವುದನ್ನು ಕನಿಕರಿಸದೆ ಕೊಲ್ಲುವ ಕ್ರೌರ್ಯ ಮನುಷ್ಯ ಸಮಾಜದಲ್ಲಿ ಮಾತ್ರ ನಡೆಯುವಂತಹದ್ದು. ಇಂತಹ ಅಸಮಾನತೆಯ ಸಮಾಜಕ್ಕೆ ಕನಿಷ್ಠ್ಟ ಸಣ್ಣ ಅರಿವು ಮೂಡಿಸಲು ಕಥೆ, ಕವನ, ನಾಟಕ, ಸಿನೆಮಾಗಳು ನಿರಂತರವಾಗಿ ಈ ಸಮಾಜವನ್ನು ಎಚ್ಚರಿಸಲು ಪ್ರಯತ್ನಿಸುತ್ತಿವೆ. ಹಾಗೇ ಅಂತಹ ಅರಿವನು,್ನ ಎಚ್ಚರವನ್ನು ಮೂಡಿಸುವ ದೊಡ್ಡ ಪ್ರಯತ್ನವೇ ಇತ್ತೀಚೆಗೆ ರಾಜ್ಯದಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾವೆ ‘ಲ್ಯಾಂಡ್ ಲಾರ್ಡ್’. ಮನುಷ್ಯ ಯಾವುದರಿಂದಲಾದರೂ ಪ್ರಭಾವಕ್ಕೆ ಒಳಗಾಗಲೇ ಬೇಕು. ಜನ್ಮ ಕೊಟ್ಟ ತಂದೆ-ತಾಯಿಯಾಗಿರಬಹುದು. ತಾನು ಬದುಕಲು ಜೀವ ಪ್ರಾಣ ನೀಡುವ ಪಂಚಭೂತಗಳಾಗಿರಬಹುದು. ತಾನು ಬೆರೆತು ಬದುಕುತ್ತಿರುವ ಸಮಾಜ ಆಗಿರಬಹುದು. ಅಂತಿಮವಾಗಿ ಈ ಸಮಾಜದ ನೀತಿ, ಪ್ರೀತಿ, ಕರುಣೆ, ಭ್ರಾತೃತ್ವ, ಸಮಾನತೆಯ ಆಶಯಗಳನ್ನು ಕಟ್ಟಿಕೊಡುವ ‘ನೀನು ಬದುಕು, ಮತ್ತೊಬ್ಬರನ್ನು ಬದುಕಲು ಅವಕಾಶ ಮಾಡಿಕೊಡು’ ಎನ್ನುವುದು. ಇದು ಈ ದೇಶದ ಸಂವಿಧಾನದ ಶ್ರೇಷ್ಠ ಆಶಯವೂ ಆಗಿದೆ. ಇಂತಹ ಆಶಯಗಳನ್ನು ಹೊತ್ತ ಈ ದೇಶದಲ್ಲಿ ಎಷ್ಟೇ ದೊಡ್ಡವನಾಗಿರಲಿ, ಎಷ್ಟೇ ಸಾಮಾನ್ಯನಾಗಿರಲಿ ಅವರಿಬ್ಬರಿಗೂ ಒಂದೇ ಕಾನೂನು. ಈ ಸಿನೆಮಾದಲ್ಲಿ ಒಂದು ಮುಖ್ಯವಾದ ಘಟನೆ ಬರುತ್ತದೆ. ತಮಗೆ ದಕ್ಕಿದ ಎರಡು ಎಕರೆ ಜಮೀನನ್ನು ಯಾವುದೋ ಕಾರಣಕ್ಕೆ ಜಮೀನ್ದಾರರಿಗೆ ಬರೆದುಕೊಟ್ಟಿದ್ದು ಆ ನಂತರದ ದಿನಗಳಲ್ಲಿ ಈ ಚಿತ್ರದ ನಾಯಕ ರಾಚಯ್ಯ ತನ್ನ ಜಮೀನಿನಲ್ಲಿ ಕೃಷಿ ಮಾಡಿ ಸ್ವಾಭಿಮಾನದಿಂದ ಜೀವನ ಮಾಡಲು ಹೋರಾಡುತ್ತಾನೆ. ಆಗ ಆತನಿಗೆ ಇನ್ನೆಷ್ಟು ದಿನ ಈ ಅವಮಾನ, ಹಿಂಸೆ, ಗುಲಾಮಗಿರಿತನ... ಇವೆಲ್ಲದರಿಂದಲೂ ಮುಕ್ತವಾಗಲು ಅಕ್ಷರದಿಂದ ಮಾತ್ರ ಸಾಧ್ಯ ಎಂದು ಅರಿತು ತನ್ನ ಮಗಳನ್ನು ಶಾಲೆಗೆ ಸೇರಿಸುತ್ತಾನೆ. ಮೇಲ್ವರ್ಗದ ಮಕ್ಕಳು ಕೂಡ ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಅಂತಿವವಾಗಿ ಪರೀಕ್ಷೆಯಲ್ಲಿ ಉತ್ತೀರ್ಣಳಾದವಳು ಕೂಲಿಕಾರನ ಮಗಳು. ‘ವಿದ್ಯೆ ಓದುಗನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ’ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಮಗಳು ಓಡೋಡಿ ಬಂದು ತಂದೆ ತಾಯಿಯ ಜೊತೆ ಈ ಖುಷಿಯನ್ನು ಹಂಚಿಕೊಳ್ಳುತ್ತಾಳೆ. ಇದೇ ಸಂದರ್ಭದಲ್ಲಿ ಊರಿನಲ್ಲಿ ದೇವರ ಉತ್ಸವ ನಡೆಯುತ್ತಿರುತ್ತದೆ. ಆಗ ದೇವರ ಸೀರೆ ಗಾಳಿಗೆ ಹಾರಿದಾಗ ಅದನ್ನು ಈ ಹುಡುಗಿ ಹಿಡಿದು ದೇವರ ಮೇಲೆ ಹಾಕಿ ದೇವರನ್ನು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಕೆಳಜಾತಿಯವರು ದೇವರನ್ನು ಮುಟ್ಟಿ ಮೈಲಿಗೆಯಾಯಿತು ಎನ್ನುವ ಕಾರಣಕ್ಕೆ ಜಮೀನ್ದಾರ ಮತ್ತು ಊರಿನ ನಾಯಕರು ಸೇರಿ ಶಿಕ್ಷೆ ನೀಡುತ್ತಾರೆ. ಏನೆಂದರೆ ನಿನ್ನ ಮಗಳು ವಿದ್ಯೆ ಕಲಿಯುವುದು ನಿಲ್ಲಿಸಬೇಕು. ಇಲ್ಲ ಹತ್ತು ಏಟಿಗೆ ದೇವರ ಕಂಬ ಉರುಳಿಸಬೇಕೆಂದು. ತನ್ನ ಮಗಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಿಂದ ದೂರ ಉಳಿಯಬಾರದೆಂದು ಹತ್ತು ಏಟಿಗೆ ದೇವರ ಕಂಬವನ್ನು ಉರುಳಿಸಿ ತನ್ನ ಮಗಳನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಅವಳ ತಂದೆ. ಕೂಲಿಕಾರನ ಶ್ರಮದ ಶಕ್ತಿ, ನೈತಿಕ ಸಿಟ್ಟು ಒಂದೇ ಸಾರಿಗೆ ಜಮೀನ್ದಾರರನ್ನು ಅಲುಗಾಡಿಸುತ್ತದೆ. ಹೀಗಿರುವಾಗ ಈ ಹುಡುಗಿ ದೇವರು ಮುಟ್ಟಿದ್ದು ಮತ್ತು ತೇರು ಮೈಲಿಗೆಯಾಗಿದೆಯೆಂದು ರಾತ್ರೋರಾತ್ರಿ ತೇರು ಮತ್ತು ದೇವರನ್ನು ಸುಟ್ಟು ಹಾಕುತ್ತಾರೆ. ಇಲ್ಲಿ ಸುಟ್ಟಿದ್ದು ದೇವರನ್ನಲ್ಲ; ಮನುಷ್ಯನ ನಂಬಿಕೆ ಮತ್ತು ವಿಶ್ವಾಸವನ್ನು.

ಹಾಗೆಯೇ ಏಕಕಾಲದಲ್ಲಿ ಭಾಗ್ಯಾ ಎಸ್.ಐ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ರಾಚಯ್ಯ ತನ್ನ ಮತ್ತು ತನ್ನ ಸಮುದಾಯದವರ ಭೂಮಿಗಾಗಿ ಹೋರಾಟ ಮಾಡುತ್ತಿರುತ್ತಾರೆೆ. ಪೂ.ಚಂತೇ ರವರು ಹೇಳಿದ ಹಾಗೇ ‘ಹೋರಾಟವಿಲ್ಲದೆ ಯಾವುದನ್ನೂ ಪಡೆದುಕೊಳ್ಳಲು ಸಾಧ್ಯವಿಲ’್ಲ ಎನ್ನುವ ಮಾತು ಈ ಸಂದರ್ಭ ನೆನಪಿಸುತ್ತದೆ. ನಮ್ಮ ಸಂವಿಧಾನ ಎಲ್ಲರಿಗೂ ಸಮತೆಯಿಂದ, ಸಮಾನತೆಯಿಂದ, ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಅದಕ್ಕೆ ಒಂದು ಉದಾಹರಣೆ ಎಂದರೆ ಭಾಗ್ಯಾ ಎನ್ನುವ ಹೆಣ್ಣುಮಗಳಿಗೆ ಓದಿ ಸರಕಾರಿ ನೌಕರಿ ಪಡೆದು ಊರಿನ ಮಾನ ಪ್ರಾಣದ ಜೊತೆಗೆ ಸಂವಿಧಾನದ ಆಶಯವನ್ನು ತಿಳಿಸುವ ಹಂಬಲವಿರುತ್ತದೆ. ಇದಕ್ಕೆ ತನ್ನ ಪೋಷಕರಾದಂತಹ ರಾಚಯ್ಯ ಮತ್ತು ನಿಂಗವ್ವರವರೇ ನಿದರ್ಶನ. ಅಂದು ಬಾಬಾ ಸಾಹೇಬರ ಕನಸು ಹಿಂದೂ ಕೋಡ್ ಬಿಲ್ ಜಾರಿಗೆ ಬರಬೇಕು ಎನ್ನುವುದು. ಆದರೆ ಆ ದಿನಗಳಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಒಂದೊಂದೇ ಅಂಶಗಳು ಸಂವಿಧಾನದೊಳಗೆ ಸೇರಿದ ಕಾರಣ ಇಂದು ಒಬ್ಬ ದಿಟ್ಟ ಹೆಣ್ಣುಮಗಳು ತನ್ನನ್ನು ತಾನು ಕಾಪಾಡಿಕೊಳ್ಳಲು, ಸಮಾಜದ ಅಸ್ಮಿತೆಯನ್ನು ಉಳಿಸಲು, ಸಮಾನತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಗಂಡ ಸತ್ತ ನಂತರ ಹೆಣ್ಣನ್ನು ವಿಧವೆ ಮಾಡುವ ಶಾಸ್ತ್ರ ಬಂದಾಗ ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಬಂದಿದೆ ಅಲಂಕಾರ. ಅವಳಿಗ್ಯಾಕೆ ಈ ಕಟ್ಟುಪಾಡು ಎನ್ನುವ ಸಂದೇಶ ಮತ್ತು ತನ್ನ ಮಗಳನ್ನು ಬಸವಿ ಮಾಡಲು ಹೊರಟಾಗ ದಿಟ್ಟತನದಿ ಕತ್ತಿ ಮಸೆದು ಹೋರಾಟಕ್ಕೆ ನಿಲ್ಲುವ ಆಕೆಯ ಸ್ಥೈರ್ರ ಮೆಚ್ಚುವಂಹತದ್ದು. ಇಲ್ಲಿ ಸಂವಿಧಾನವನ್ನು ಉಲ್ಲೇಖಿಸಲಾಗಿದೆ. ಸಂವಿಧಾನದ ಹೆಸರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್! ಪ್ರಜಾಪ್ರಭುತ್ವ ಎನ್ನುವ ಅಂಶವೇ ಪ್ರಜೆಗಳಿಗೆ ಇರುವ ದಿಟ್ಟ ಅಸ್ತ್ರ. ಅನಾದಿಕಾಲದಿಂದಲೂ ಭೂಮಿಗಾಗಿ ಕೂಲಿಕಾರ್ಮಿಕರು ಹೋರಾಡುತ್ತಲೇ ಬರುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಬೆವರು ಹರಿಸಿಯೂ ಗೊತ್ತು, ಮಿತಿ ಮೀರಿ ತನ್ನ ಸಮುದಾಯ ಮತ್ತು ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಪ್ರತಿರೋಧ ಒಡ್ಡುವ ಸಾಮರ್ಥ್ಯವೂ ಇದೆ. ಆದರೂ ರಾಚಯ್ಯ ನಿಮ್ಮ ಮಕ್ಕಳಿಗೆ ನೆತ್ತರು ಬಸಿಯುವ ಆಯುಧಗಳನ್ನು ಕೊಡಬೇಡಿ ಅಕ್ಷರ ಕಲಿಯುವ ಬಳಪ ಪೆನ್ನು ನೀಡಿರಿ ಎನ್ನುವ ಸಂದೇಶ ಸಾರ್ವಕಾಲಿಕವಾದದ್ದು. ಇಂತಹ ಚಿತ್ರಗಳನ್ನು ಬೆಂಬಲಿಸಬೇಕು ಮತ್ತು ಆ ಆಶಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಇಡೀ ಚಿತ್ರದಲ್ಲಿ ‘ಭೂಹೀನರಿಗೆ ಭೂಮಿಯೂ ಬೇಕು. ಸ್ವಾಭಿಮಾನದಿಂದ ಬದುಕುವ ಅಕ್ಷರವೂ ಬೇಕು’. ಈ ಎರಡು ಸಂದೇಶವನ್ನು ಹೇಳುತ್ತದೆ ‘ಲ್ಯಾಂಡ್ ಲಾರ್ಡ್’. ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನುವುದು ಭೂ ತಾಯಿಯ ಮಕ್ಕಳು ಸಮಸಮಾಜದಲ್ಲಿ ಸಮಸಮವಾಗಿ ಸ್ವಾಭಿಮಾನದಿಂದ ಬದುಕುವ ಸೌಂದರ್ಯವನ್ನೇ ಹೇಳುತ್ತದೆ. ಇದನ್ನೇ ಸಂವಿಧಾನ ಎಂದು ಹೇಳುತ್ತೇವೆ. ಇಡೀ ಸಿನೆಮಾದಲ್ಲಿ ಎಲ್ಲಾ ಪಾತ್ರಗಳು ನೈಜತೆಯಿಂದ ಕೂಡಿದ್ದು ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಚಯ್ಯನ ಪಾತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದರೂ, ಮಗಳು ಭಾಗ್ಯಾ ಇಡೀ ಸಿನೆಮಾದ ಆಶಯಗಳ ರೂಪಕದಂತೆ ಎದ್ದು ಕಾಣುತ್ತಾಳೆ. ಪ್ರಥಮ ಸಿನೆಮಾ ಆದರೂ ಈಕೆಯ ನೈಜ ನಟನೆ ಚಿತ್ರಕ್ಕೆ ಜೀವ ತುಂಬಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಿನೆಮಾಕ್ಕೆ ಒಳ್ಳೆಯ ಕಲಾವಿದೆಯಾಗುವ ಎಲ್ಲಾ ಲಕ್ಷಣಗಳು ಇವೆ. ಕನ್ನಡಿಗರು ಇಂತಹ ಸಿನೆಮಾಗಳನ್ನು ಗೆಲ್ಲಿಸಬೇಕು. ಈಗ ಸರಕಾರ ತೆರಿಗೆ ವಿನಾಯಿತಿ ಕೊಟ್ಟಿದ್ದರಿಂದ ಎಲ್ಲರೂ ಥಿಯೇಟರಿಗೆ ಹೋಗಿ ಇಂತಹ ಕನ್ನಡ ಸಿನೆಮಾಗಳನ್ನು ಗೆಲ್ಲಿಸುವಂತಾಗಲಿ.

► ಸರಕಾರಕ್ಕೆ ಮನವಿ

ಲ್ಯಾಂಡ್ ಲಾರ್ಡ್ ಸಿನೆಮಾದಲ್ಲಿ ಒಳ್ಳೆಯ ಸಾಮಾಜಿಕ ಸಂದೇಶವಿದೆಯೆಂದು ಕನ್ನಡಿಗರು ಮತ್ತು ಸಿನೆಮಾ ಪ್ರಿಯರು ನೋಡುವಂತೆ ಮಾಡಿರುವುದು ‘ಮಾನ್ಯ ಮುಖ್ಯಂತ್ರಿಗಳಾದ ಸಿದ್ಧಾರಾಮಯ್ಯ’ನವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಅಭಿನಂದಿಸುತ್ತೇನೆ. ಹಾಗೆಯೇ ಅವರಿಗೊಂದು ಮನವಿಯನ್ನೂ ಸಹ ಮಾಡುತ್ತೇನೆ. ಅದೆಂದರೆ, ಈ ನಾಡಿನ ಶೋಷಿತರು ಮತ್ತು ದಲಿತರಿಗೆ ಇವತ್ತಿಗೂ ಅಂಗೈ ಅಗಲ ಜಾಗ ಸಿಕ್ಕಿಲ್ಲ. ಪಿಟಿಸಿಎಲ್ ಆಕ್ಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿ ಭೂ ಹೀನರಿಗೆ ಭೂಮಿ ಸಿಗುವಂತೆ ತಮ್ಮ ಇಚ್ಛಾಶಕ್ತಿಯನ್ನು ತೋರಿಸಬೇಕಾಗಿ ವಿನಂತಿ. ಕಳೆದ ಐದು ದಶಕಗಳಿಂದ ಈ ನಾಡಿನ ನೊಂದವರಿಗೆ ಅರಿವು ಮತ್ತು ಎಚ್ಚರವನ್ನು ಮೂಡಿಸಿದ ದಲಿತ ಸಂಘರ್ಷ ಸಮಿತಿ ಹೆಂಡ ಬೇಡ, ಭೂಮಿ ಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇವತ್ತಿಗೂ ಭೂ ಸುಧಾರಣೆ ನೀತಿಯಿಂದಲೂ ಭೂ ವಂಚಿತರಿಗೆ ಭೂಮಿ ದಕ್ಕಿಲ್ಲ. ಆದ್ದರಿಂದ ಪಿಟಿಸಿಎಲ್ ಆಕ್ಟ್ ಅನ್ನು ಬಲಗೊಳಿಸಿ ಪ್ರಬಲವಾಗಿ ಜಾರಿಗೊಳಿಸುವ ಮೂಲಕ ಭೂಹೀನರ ಕನಸನ್ನು ನನಸು ಮಾಡಲೇಬೇಕು. ಇದು ಪ್ರೀತಿಪೂರ್ವಕ ಒತ್ತಾಯ. ಮುಖ್ಯಮಂತ್ರಿಗಳಿಗೆ ಇಂತಹ ವಿಷಯಗಳ ಬಗ್ಗೆ ದೊಡ್ಡ ಜವಾಬ್ದಾರಿ ಇದೆ ಎಂದು ಗೊತ್ತಿದೆ. ರಾಚಯ್ಯನಂತಹ ಲಕ್ಷಾಂತರ ಭೂ ಹೀನರಿಗೆ ಭೂಮಿ ಸಿಗುವಂತಾದರೆ ದಲಿತರಿಗೆ ಅದು ದೊಡ್ಡ ಆಸರೆಯಾಗಿರುತ್ತದೆ. ತಾನು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದಲ್ಲದೆ ಮುಂದಿನ ತಲೆಮಾರು ನೆಮ್ಮದಿಯಿಂದ ಬದುಕಲು ಕಾರಣವಾಗುತ್ತದೆ. ಇದರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಿದಂತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುಬ್ಬು ಹೊಲೆಯಾರ್

contributor

Similar News