×
Ad

ಬೆಳದಿಂಗಳನ್ನುಕಡೆದ ಕಾವ್ಯ ‘ಏಶ್ಯದ ಬೆಳಕು’

Update: 2026-02-23 12:05 IST

ಮಹಾಕಾವ್ಯದ ಪ್ರತೀ ಸಾಲುಗಳು ಒಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಆಲಿಸುವಂತಹದ್ದು. ಮನುಷ್ಯನಿಗೆ ಎಷ್ಟೇ ಆಸ್ತಿ, ಅಂತಸ್ತು, ಅಧಿಕಾರವಿದ್ದರೂ ಮತ್ತು ದ್ವೇಷದ ಮನೋಭಾವನೆ ಇದ್ದರೂ ಕೊನೆಗಳಿಗೆಯಲ್ಲಿ ಆತ ಬಯಸುವುದು ಹಿಡಿಯಷ್ಟು ನಿಷ್ಕಲ್ಮಶ ಪ್ರೀತಿಯಷ್ಟೇ. ಬುದ್ಧನಾಗುವುದೆಂದರೆ ಅಷ್ಟು ಸುಲಭವಲ್ಲ, ಸರಳವಲ್ಲ ಅದೊಂದು ತಪಸ್ಸು! ಹಾಗಾಗಿ ನಾವು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ನಡೆದರೆ ನಮ್ಮ ಮನಸ್ಸಿನೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಎಲ್ಲವೂ ಸುಂದರವಾಗಿರುತ್ತದೆ.

ಪವಿತ್ರವಾದ ಅವನ ತುಟಿಗಳಿಂದ ಸೂಸುತ್ತಿದ್ದ ಕರುಣಾಮಯ ಚಿತ್ತಾಕರ್ಷಕ. ಶ್ರೇಷ್ಠ.

ಶುದ್ಧ ಜ್ಞಾನದಾಯಕ ಅವನ ಮಾತುಗಳಲ್ಲಿ ಮುಳುಗಿ ಹೋದರು

-ಡಾ. ಮಹಾದೇವ್ ಅವರು ಕನ್ನಡಕ್ಕೆ ಅನುವಾದಿಸಿರುವ ಸರ್ ಎಡ್ವಿನ್ ಆರ್ನಾಲ್ಡ್ ರವರ ‘ದಿ ಲೈಟ್ ಆಫ್ ಏಶ್ಯ’ ಮಹಾಕಾವ್ಯವನ್ನು ಓದುತ್ತಿರುವ ಹೊತ್ತಿನಲ್ಲಿ ಕೋಲ್ಕೊತಾದ ಬೀದಿಗಳಲ್ಲಿ ಓಡಾಡಿಕೊಂಡಿದ್ದ ಪುಟ್ಟ ಬೀದಿ ನಾಯಿಯೊಂದು ಬೌದ್ಧ ಬಿಕ್ಕುವಿನ ಮನಸೆಳೆದು, ಬೆಳೆದು ಅಮೆರಿಕದಲ್ಲಿ ಜಗತ್ತಿನ ಶಾಂತಿಗಾಗಿ ಬೌದ್ಧ ಬಿಕ್ಕುಗಳೊಡನೆ ಹೆಜ್ಜೆ ಹಾಕಿದ್ದು ಬುದ್ಧ ಗುರುಗಳು ಹೇಳಿದ ‘ಮೈತ್ರಿ, ಕರುಣೆ, ಭ್ರಾತೃತ್ವ’ವನ್ನು ನೆನಪಿಸುತ್ತದೆ ಮತ್ತು ಸಕಲ ಜೀವಗಳ ಲೇಸು ಬಯಸಿದ ಈ ಶಬ್ದಗಳು ಬರೀ ಶಬ್ದಗಳಲ್ಲದೆ ನೂರಾರು ಕೋಟಿ ಜನರ ಬೆಳಕಾಗಿರುವಂತೆ ತೋರುತ್ತದೆ. ‘ಅಲೋಕ ಎಂದರೆ ಬೆಳಕು’. ಈ ಬೆಳಕಿಗೆ ಪ್ರತಿಜೀವವೂ ಹಂಬಲಿಸುತ್ತದೆ. ಹಾಗಂತ ಕತ್ತಲೆಯನ್ನು ಆರೋಪಿಸುತ್ತಿಲ್ಲ. ಕತ್ತಲೆ ಕೂಡ ಈ ಜಗದ ಅವಿಭಾಜ್ಯ ಅಂಗವೇ ಆಗಿದೆ. ಈ ಅಲೋಕದ ಬಗ್ಗೆ ಈಗಾಗಲೇ ನೀವು ಓದಿ ನೋಡಿ ತಿಳಿದುಕೊಂಡಿರುತ್ತೀರಿ. ಈ ಅಲೋಕನನ್ನು ನೋಡುತ್ತಿದ್ದರೆ ಇದು ನಮ್ಮ ಸಂಬಂಧಿಯೇ ಎನ್ನುವಷ್ಟು ಆಪ್ತ ಅದರ ಕಣ್ಣುಗಳು. ಇವನು ಇಡೀ ಜಗತ್ತಿನ ಕಣ್ಮಣಿಯಾಗಿ ಸೂಜಿಗಲ್ಲಿನಂತೆ ಎಲ್ಲರನ್ನು ಸೆಳೆದುಬಿಟ್ಟ. ಈ ಹೊತ್ತು ಜಗತ್ತಿನಲ್ಲಿ ವ್ಯಕ್ತಿ ದ್ವೇಷದಿಂದ ಹಿಡಿದು ದೇಶ-ದೇಶಗಳ ನಡುವೆ ದೊಡ್ಡ ಯುದ್ಧಗಳು ನಡೆಯುತ್ತಿವೆೆ. ಸಕಲವನ್ನು ಕೊಟ್ಟ ಈ ಭೂಮಿಯನ್ನು ಬೆಂಗಾಡಾಗಿಸುತ್ತಿರುವ ಮನುಷ್ಯನ ಕ್ರೌರ್ಯಕ್ಕೆ ಮಿತಿಯಿಲ್ಲದಂತಾಗಿದೆ. ಹೀಗೆ ಎಲ್ಲರೂ ಮಾತನಾಡುತ್ತಲೇ... ಬರೆಯುತ್ತಲೇ... ಓದುತ್ತಲೇ... ನಮ್ಮೊಳಗಿನ ತಮಸ್ಸು ನಮ್ಮ ನಮ್ಮ ನೆತ್ತಿಗೇರುತ್ತಲೇ ಇದೆ. ಇದೆಲ್ಲದರ ಶಮನಕ್ಕಾಗಿ ಬುದ್ಧ ಗುರುಗಳು ನಿರಂತರವಾಗಿ ಹಲವು ವರ್ಷಗಳ ಕಠಿಣವಾದ ತಪಸ್ಸು, ಜ್ಞಾನದಿಂದ ತನ್ನನ್ನು ತಾನು ಅರಿತುಕೊಳ್ಳುವ ಮಾರ್ಗವನ್ನು ಹುಡುಕಿಕೊಟ್ಟು ಹೋಗಿದ್ದಾರೆ. ಮನುಷ್ಯನ ಅಗತ್ಯಗಳನ್ನು ಪೂರೈಸುವುದಕ್ಕೆ ಪ್ರಕೃತಿ ನಿರಂತರವಾಗಿ ಏನೆಲ್ಲಾ ಕೊಡಬೇಕು ಅದನ್ನೆಲ್ಲಾ ನೀಡುತ್ತಲೇ ಬಂದಿದೆ. ಆದರೆ ಮನುಷ್ಯನಿಗೆ ತನ್ನ ಆಸೆಯನ್ನು ಮೀರುವುದಕ್ಕಾಗಲಿಲ್ಲ. ಈ ಆಸೆಯ ಮೂಲ ದುಃಖ ಎನ್ನುವುದನ್ನು ಬೆಟ್ಟು ಮಾಡಿ ಬುದ್ಧಗುರುಗಳು ತೋರಿದ್ದಾರೆ. ಇಂತಹ ಬುದ್ಧ ಗುರುಗಳ ಬಗ್ಗೆ ಹೇಳುವಾಗ ಅವರ ಕುರಿತ ಬರವಣಿಗೆಗಳು, ಪುಸ್ತಕಗಳು ಲೆಕ್ಕವಿಲ್ಲದಷ್ಟು. ಬುದ್ಧ ಎಲ್ಲವನ್ನೂ ಅರಗಿಸಿಕೊಂಡು ಅತ್ಯಂತ ಸರಳವಾಗಿ ಬದುಕುವುದನ್ನು ಹೇಳಿ ಕೊಟ್ಟಿದ್ದಾರೆ. ನಾವು ಮತ್ತೆ ಮತ್ತೆ ಕಲಿಯುತ್ತಲೇ ಇದ್ದೇವೆ. ಮತ್ತೆ ಮತ್ತೆ ಓದುತ್ತೇವೆ, ಧ್ಯಾನಿಸುತ್ತೇವೆ ಆದರೂ ಪರಿಪೂರ್ಣವಾಗುವಲ್ಲಿ ಎಡವುತ್ತೇವೆ. ಮನುಷ್ಯ ಮನುಷ್ಯನಾಗುವುದಕ್ಕೆ ಎಷ್ಟೆಲ್ಲಾ ಕಷ್ಟಗಳು. ಯಾರ್ಯಾರು ಎಲ್ಲಿಂದೆಲ್ಲಿಂದಲೋ ಬಂದು ಒಳ್ಳೆಯದನ್ನು ಹೇಳಿ ಹೋಗಿದ್ದಾರೆ. ಬುದ್ಧನನ್ನು ಅರ್ಥಮಾಡಿಕೊಳ್ಳುವುದೆಂದರೆ ಮೈ ಮನಸ್ಸುಗಳೆಲ್ಲಾ ಹಗುರವಾದಂತೆ. ಹಾಗೇ ಹಗುರಾದವರು ತುಂಬ ಒಳ್ಳೆಯದನ್ನು ಹೇಳಿ ಹೋಗಿದ್ದಾರೆ. ಅಂತಹವರಲ್ಲಿ ಒಬ್ಬರಾದ ‘ಎಡ್ವಿನ್ ಆರ್ನಾಲ್ಡ್’ ಅವರ ಬಗ್ಗೆ ಓದುವ, ಕೇಳುವ ತಿಳುವಳಿಕೆಯನ್ನು ಮೂಡಿಸಿಕೊಳ್ಳುತ್ತಿದ್ದೇನೆ. ವಿಶೇಷವಾಗಿ ಬುದ್ಧನ ಕುರಿತು ಯಾರಾದರು ಮಾತನಾಡುತ್ತಿದ್ದರೆ, ಪುಸ್ತಕಗಳಿದ್ದರೆ ಆ ಕಡೆ ನನ್ನ ಮನಸ್ಸು ಕೇಂದ್ರೀಕರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಬುದ್ಧನ ಕುರಿತು ಇಂತಹ ಪುಸ್ತಕ ಬಂದಿದೆ ಅಂದಾಗ ಸ್ವಲ್ಪ ನನ್ನ ಕಿವಿ ಮತ್ತು ಮನಸ್ಸು ಸಹಜವಾಗಿ ಆ ಕಡೆ ವಾಲುತ್ತದೆ. ಈಗ ನಾನು ಹೇಳುತ್ತಿರುವ ಪುಸ್ತಕದ ಹೆಸರು ‘ದಿ ಲೈಟ್ ಆಫ್ ಏಶ್ಯ’ ಬಗ್ಗೆ ಅಲ್ಲಲ್ಲಿ ಕೇಳಿದ ನೆನಪಿತ್ತು. ‘ನಮ್ಮ ನಾಡಿನ ಹೆಸರಾಂತ ಕವಿಗಳು ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತರು, ಬುದ್ಧನ ಅನುಯಾಯಿಗಳು ಆದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಈ ಕಾವ್ಯದ ಕುರಿತು ನನಗೆ ಹೇಳಿದ್ದು ನೆನಪಿದೆ. ನಾನು ಇಂಗ್ಲಿಷ್‌ನಲ್ಲಿ ಓದಿ ಅರ್ಥ ಮಾಡಿಕೊಳ್ಳಲು ತುಸು ಕಷ್ಟವಾದ್ದರಿಂದ ಕನ್ನಡದಲ್ಲಿ ಇದ್ದಿದ್ದರೆ ಎಂದು ಹುಡುಕುತ್ತಿದ್ದೆ. ಇದ್ದಕ್ಕಿದ್ದ ಹಾಗೇ ಡಾ. ಮಹಾದೇವ್ ಸರ್ ಫೋನ್ ಮಾಡಿ ನಾನು ಈ ತರಹದ ‘ದಿ ಲೈಟ್ ಆಫ್ ಏಶ್ಯ’ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಒಮ್ಮೆ ಗಮನಿಸಿ ಪ್ರತಿಗಳನ್ನು ಕಳಿಸಿಕೊಡುವೆ ಎಂದು ವಿಳಾಸ ಕೇಳಿದರು. ನಾನು ಸ್ವಲ್ಪ ಭಾವುಕ. ಒಮ್ಮೆಲೆ ಸಂತೋಷದಿಂದ ಪ್ಲೀಸ್ ಕಳಿಸಿ ಅಣ್ಣ ಬಹಳ ದಿನಗಳಿಂದ ಕಾಯುತ್ತಿದ್ದೆ ಎಂದು ಹೇಳಿದೆನು. ಅವರು ಎರಡು ದಿನಗಳೊಳಗೆ ಎರಡು ಪ್ರತಿಗಳನ್ನು ಕಳಿಸಿಕೊಟ್ಟರು.

ಬುದ್ಧನ ಮುಖಭಾವದ ಹಾಗೇ ಅಭಿವ್ಯಕ್ತಿಸುವ ಮುಖಪುಟ ದಮ್ಮ ಚಕ್ರವನ್ನು ಒಳಗೊಂಡಿದೆ. ಇದರೊಳಗಿರುವ ಮಹಾಕಾವ್ಯದ ಸತ್ವವನ್ನೇ ಹೇಳುತ್ತಿತ್ತು. ಸರ್ ಎಡ್ವಿನ್ ಆರ್ನಾಲ್ಡ್ ಅವರ ಮುನ್ನುಡಿ ಮತ್ತು ಡಿ.ಎ. ಶಂಕರ್ ರವರ ಇನ್ನೊಂದು ಮುನ್ನುಡಿ, ಡಾ. ಸಿ. ನಾಗಣ್ಣ ರವರ ಅನನ್ಯ ಅಪರೂಪದ ಆಪ್ತವಾದ ಬರವಣಿಗೆ ಮತ್ತು ಅನುವಾದಕರ ನುಡಿ ಇದಿಷ್ಟೇ ಓದುಗರ ಪ್ರವೇಶಕ್ಕೆ ಕಾವ್ಯವು ಹೂರಣದಂತೆ ಹಿಡಿದಿಡಿಯುತ್ತದೆ. ಓದುವ ಸವಿಯನ್ನು ಸವಿಯುವಂತೆ ಮಾಡುತ್ತದೆ. ಈ ಬೆಳಕಿನಲ್ಲಿ ಮೊದಲ ಹೊತ್ತಿಗೆಯಿಂದ ಅರ್ಥಾತ್ ರಾಜಕುವರ ಸಿದ್ಧಾರ್ಥನ ಜನನ ಮತ್ತು ಬಾಲ್ಯದಿಂದ ಪ್ರಾರಂಭವಾಗಿ ಶುದ್ಧೋಧನನ ಮತ್ತು ಮಡದಿ ಯಶೋದಳ ಧರ್ಮಪಥ ಸೇರ್ಪಡೆ ಬುದ್ಧನ ಜೀವನಕಾವ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ಬೆಳಕಿನ ಕಾವ್ಯದ ಕುರಿತು ನನ್ನಂತಹವರು ಮಾತನಾಡುವುದು ಅಲ್ಪ ಅನ್ನಿಸಬಹುದು. ಕಾವ್ಯ ಓದುವ ಪ್ರಾರಂಭದ ಘಳಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಓದಬೇಕು. ಆ ಕಾವ್ಯದ ಸೊಬಗೇ ಅತ್ಯಮೂಲ್ಯವಾದುದು. ಪ್ರತಿ ಪದ, ಶಬ್ದ, ವಾಕ್ಯ, ಹೆಸರು, ಭಾವನೆ, ಅಭಿವ್ಯಕ್ತಿ ಆರ್ನಾಲ್ಡ್ ರವರ ಕಲ್ಪನೆ ಒಂದು ಅದ್ಭುತವಾದ ಬೆಳದಿಂಗಳ ಲೋಕವನ್ನೇ ತೆರೆಯುತ್ತದೆ. ಬುದ್ಧನ ತ್ಯಾಗಮಯ ಜೀವನ ಒಂದು ರೀತಿಯ ನಮ್ಮೊಳಗೆ ಕರುಣೆಯನ್ನು ಹುಟ್ಟಿಸಿದರೂ ಈ ಜಗದ ಉದ್ಧಾರಕ್ಕೆ ಬುದ್ಧನ ಕೊಡುಗೆ ಅಗಾಧ ಮತ್ತು ಅಪಾರ. ಅವನ ಸೈರಣೆಯನ್ನು ಕಾವ್ಯದಲ್ಲಿ ಹಿಡಿದಿಡುವುದು ತುಸು ಕಷ್ಟವೇ. ಆರ್ನಾಲ್ಡ್ ರವರ ಸತತವಾದ ಶ್ರಮ ಅದಕ್ಕಾಗಿ ತನ್ನ ದೇಹ-ಮನಸ್ಸನ್ನು ಒಗ್ಗಿಕೊಳ್ಳುವುದಿದೆಯಲ್ಲ ಅದು ಕಲ್ಪನೆಗೂ ನಿಲುಕದ್ದು.

ಡಾ. ಸಿ. ನಾಗಣ್ಣ ಅವರು ಈ ಕೃತಿಯ ಮುನ್ನುಡಿಯ ಮಾತು ಎನ್ನುವುದಕ್ಕಿಂತ ಹೃದಯದ ಮಾತು ಎನ್ನುವ ಹಾಗೇ ಪ್ರಸ್ತುತ ಪಡಿಸಿದ್ದಾರೆ. ಇದುವರೆಗಿನ ತನ್ನ ಜ್ಞಾನ ಮತ್ತು ಅರಿವನ್ನು ಬಸಿದ ಹಾಗೇ ಈ ಕೃತಿಯ ಪ್ರತೀ ಪದ್ಯಗಳ ಬಗ್ಗೆ ಆಳವಾಗಿ ಧ್ಯಾನಿಸಿದ್ದಾರೆ. ಈ ಕಾವ್ಯದ ಸಾಲುಗಳನ್ನು ಗಮನಿಸಿ;

ಜೀವಿಸಲಿರುವ ಮಣಿದಿರುವವರೆ

ಜೀವಿಸಿದ್ದು ಮಡಿದಿರುವವರೆ

ಎದ್ದೇಳಿ. ಕೇಳಿ. ಭರವಸೆಯಿಂದಿರಿ ಬುದ್ಧ ಬಂದಿದ್ದಾನೆ.

ಬುದ್ಧ ಬಂದಿದ್ದಾನೆ ಎಂಬ ಘೋಷಕ್ಕೆ ಪೂರಕವಾಗಿ

ಒದಗಿ ಬರುವುದು ಈ ಮಾತು.

ಬುದ್ಧ ಧರೆಗೆ ಮತ್ತೆ ಬಂದುದನರಿತು

ಸ್ವರ್ಗವು ಆನಂದದಲಿ ತೇಲುತ್ತಿರುವುದು ಲೋಕದ ಜನರಿಗೆ ತಿಳಿದಿರಲಿಲ್ಲ.

ಮುಂದುವರಿದಂತೆ ಬುದ್ಧನ ಜನನವಾದಾಗ ಅಸಿತ ಮುನಿಗಳು ಭವಿಷ್ಯ ನುಡಿಯುತ್ತಾರೆ.

ಕೋಟಿ ಕೋಟಿ ವರುಷಗಳಿಗೊಮ್ಮೆ ವೃಕ್ಷದಲ್ಲರಳುವ

ಹೂವಿದು. ಅರಳಿ ಜಗಕ್ಕೆಲ್ಲಾ ಜ್ಞಾನ ಸೌರಭವ ತುಂಬುತ್ತದೆ.

ದಯೆಯ ಜೇನಿನ ಹನಿಯನ್ನು ಸ್ಪುರಿಸುತ್ತದೆ.

-ಇಂತಹ ಸಾಲುಗಳು ಇಡೀ ಈ ಕಾವ್ಯದ ಪ್ರತೀ ಪುಟಗಳಲ್ಲಿ ಅರಳಿಮರದಲ್ಲರಳಿದ ಚಿಗುರೋ ಎಲೆಯೋ ಘಮಘಮಿಸುತ್ತವೆ. ನಾವು ಒಂದು ಕಾವ್ಯದ ಕುರಿತು ಮಾತನಾಡುವಾಗ ಗಂಧದ ಪರಿಮಳದಂತೆ ಭಾಸವಾಗುತ್ತದೆ. ಸಿದ್ಧಾರ್ಥನ ಬಾಲ್ಯ, ಅರಮನೆ, ತಂದೆ-ತಾಯಿ, ಯೌವನ ಹೀಗೆ ಇಡೀ ಜೀವನವನ್ನು ಈ ಕಾವ್ಯದ ಬೆಳಕು ಮಿಣುಕು ಹುಳದಂತೆ, ಪುಟ್ಟ ಹಣತೆಯಂತೆ, ಬೀದಿ ಬೆಳಕಂತೆ ಎಲ್ಲಾ ಬೆಳಕುಗಳ ಮಹಾ ಬೆಳಕನ್ನು ಹೊದ್ದು ಹೊರಟ ಬುದ್ಧನ ಪರಿಪೂರ್ಣ ಜೀವನವನ್ನು ಈ ಕಾವ್ಯ ಒಂದೊಂದಾಗಿ ತೆರೆದಿಡುತ್ತದೆ.

ಅವನು ಅರಮನೆ ತೊರೆಯುವಾಗಲಿ, ತಂದೆ-ತಾಯಿ, ಹೆಂಡತಿ, ಮಗನ ಸಂಬಂಧಗಳ ಕೊಂಡಿ ಕಳಚಿಕೊಳ್ಳುವಾಗಲಿ ಸುದೀರ್ಘ ಪಯಣದ ಅನೇಕ ಏರಿಳಿತಗಳ ಕ್ಷಣಗಳು, ಗಳಿಗೆಗಳು, ಗಂಟೆ, ದಿನಗಳು, ವರ್ಷಗಳು ಎಲ್ಲವೂ ಓದುವ ಮನಸ್ಸನ್ನು ಕದಡುತ್ತಲೇ ನಿರಂತರವಾಗಿ ಚಲನೆಯಲ್ಲಿಡುತ್ತವೆ. ದುಃಖ ತಿಳಿದಾಗಲೂ, ಸಂತೋಷ ಪಡುವಾಗಲೂ ಕಾವ್ಯದ ಹದ ಎಲ್ಲೂ ಅಲುಗಾಡದ ಹಾಗೇ ಸರಳ ರೇಖೆಯಂತೆ ಒಂದೇ ಸಮವಾಗಿರುತ್ತದೆ. ಒಮ್ಮೊಮ್ಮೆ ಈ ಕಾವ್ಯ ಓದುವ ಹುಚ್ಚಿನಂತೆ ಆಗಿರದೆ ಸಂಮೋಹಗೊಳಿಸದೆ ಬುದ್ಧ ಹೇಳಿದ ನಮ್ಮ ಮಧ್ಯಮ ಮನಸ್ಥಿತಿಯಲ್ಲಿಯೇ ಸಾಗುತ್ತದೆ. ಹೀಗೆ ಓದುವಾಗಲು ಗಮನಿಸಿದಾಗ;

ಗಾಳಿಯಂತೆಯೇ ನರರ ಬದುಕು ಕೂಡ

ಒಂದು ಗೋಳು. ನಿಟ್ಟುಸಿರು. ಅಳು. ಬಿರುಗಾಳಿ. ಹೋರಾಟ.

ಎಲ್ಲಾ ಸುಖಗಳ ಅಂತ್ಯ ನೋವು. ಯೌವನದ ಕೊನೆ ಮುಪ್ಪು

ನನ್ನನ್ನು ಕುರುಡಾಗಿಸಿದ್ದ ಪರದೆ ಈಗ ಹರಿದು ಬಿದ್ದಿದೆ

-ಹೀಗೆ ಕಾವ್ಯದ ಓದಿನ ಪ್ರಯಾಣ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ. ಈ ಕೃತಿಯನ್ನು ಕನ್ನಡಕ್ಕೆ ತಂದ ಡಾ. ಮಹಾದೇವ್ ಮೊದಲ ಪ್ರಯತ್ನದಲ್ಲೇ ಅತ್ಯುನ್ನತವಾದ ಕಾವ್ಯವನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಅವರು ಮೂಲತಃ ಉಪನ್ಯಾಸಕರು. ಜೊತೆಗೆ ಕಾವ್ಯದ ಬಗ್ಗೆ ಅಪಾರ ಆಸಕ್ತಿ ಉಳ್ಳವರಾಗಿದ್ದರು. ಅವರ ಈ ಬೆಳವಣಿಗೆ ನಿಜಕ್ಕೂ ಬೆರಗು ಹಟ್ಟಿಸುವಂತಹದ್ದು. ಬುದ್ಧ ಎನ್ನುವ ಹೆಸರೇ ಈ ಲೋಕ ಅಪರಿಮಿತವಾದ ಗೌರವವನ್ನು ಹೊಂದಿದೆ. ಅವರ ಮೇಲೆ ಬರೆದ ಈ ಕೃತಿ ಆ ಕಾಲಕ್ಕೆ ದೊಡ್ಡ ಇತಿಹಾಸವನ್ನು ಮೂಡಿಸಿದೆ. ಇದು ಪ್ರಕಟವಾದಾಗ ಇಂಗ್ಲೆಂಡ್‌ನಲ್ಲಿ 60 ಆವೃತ್ತಿಗಳು, ಅಮೆರಿಕದಲ್ಲಿ 80 ಆವೃತ್ತಿಗಳು ಪ್ರಕಟಗೊಂಡಿದ್ದಷ್ಟೇ ಅಲ್ಲ, ಇದು ಸರಿಸುಮಾರು 5 ಲಕ್ಷಕ್ಕೂ ಮೀರಿದ ಪ್ರತಿಗಳು ಪ್ರಕಟವಾದ ಕೆಲವೇ ಕಾಲದಲ್ಲಿ ಮಾರಾಟವಾದವು. ಇದು ಈ ಕೃತಿಗೆ ಇರುವ ಹೆಗ್ಗಳಿಕೆ. ಸಾಹಿತ್ಯದಲ್ಲಿ ಎಲ್ಲಾ ಪ್ರಕಾರವೂ ಒಂದಲ್ಲ ಒಂದು ಕಾರಣಕ್ಕೆ ಶ್ರೇಷ್ಠವಾಗಿರುತ್ತವೆ. ಕಾವ್ಯಕ್ಕಿರುವ ಮಹತ್ವ ಬಹಳ ದೊಡ್ಡದು. ಈ ಬೆಳಕನ್ನು ಅನುಸರಿಸುತ್ತಾ ಹೋದಾಗ ಇದು ಜಗತ್ತಿನ ಬೆಳಕು ಹೌದು! ಏಶ್ಯದ ಬೆಳಕು ಹೌದು! ಓದುತ್ತಾ ಓದುತ್ತಾ ಇದು ನಮ್ಮದೇ ಬೆಳಕಾಗಿದೆ ಎನ್ನುವಷ್ಟು ನಮ್ಮೊಳಗೆ ಅನನ್ಯವಾದ ಅನುಭೂತಿಯನ್ನು ಹುಟ್ಟಿಸುತ್ತದೆ. ವೈಯಕ್ತಿಕವಾಗಿ ನಾನು ಕಾವ್ಯದ ಮೊದಲ ತರಗತಿಯ ವಿದ್ಯಾರ್ಥಿ. ದಲಿತ, ಬಂಡಾಯ ಇತ್ಯಾದಿ ಓದುತ್ತಾ ಸಿದ್ಧಲಿಂಗಯ್ಯ ನನ್ನ ದನಿಯಾದರೆ, ದೇವನೂರು ಬರವಣಿಗೆ ನನಗೆ ಉಸಿರಾಗಿದೆ. ಆ ನಂತರದ ಓದು ‘ಕುವೆಂಪು, ಲಂಕೇಶ್, ತೇಜಸ್ವಿ. ‘ಪಾಶ್ಚಿಮಾತ್ಯರಲ್ಲಿ ನನಗಿಷ್ಟವಾದವರು ನೆರೋಡಾ, ಬ್ರೆಕ್ಟ್, ಓಲೆಸೋಯೆಂಕಾ’ ಹೀಗೆ ನನ್ನ ಓದನ್ನು ಹಿಗ್ಗಿಸಿಕೊಳ್ಳುವಾಗ ಏಶ್ಯದ ಬೆಳಕು ನನ್ನೊಳಗೆ ಪುಟ್ಟ ಹಣತೆಯಂತೆ ಮತ್ತೆ ಮತ್ತೆ ಕಾಡಿಸುತ್ತದೆ. ಓದಿಸಿಕೊಳ್ಳುತ್ತಿದೆ..

ಕವಿಯ ಕೊನೆಯ ಸಾಲುಗಳು ಹೀಗೆ;

ಹಾ ಧನ್ಯ ದೊರೆಯೇ! ಪರಮ ಮೋಕ್ಷಧಾತನೆ!

ನನ್ನೀ ದುರ್ಬಲ ಬರಹ ಕ್ಷಮಿಸು,

ನಿನಗೆ ಅಪಚಾರವೆಸಗಿರಬಹುದು.

ನಿನ್ನ ಅತ್ಯುನ್ನತ ದಯೆಯನ್ನು

ತಿಳುವಳಿಕೆಯಿಲ್ಲದೆ ಅಳೆಯುವುದರಿಂದ.

ಇದು ಕವಿ ಬುದ್ಧನ ಮುಂದೆ ಅತ್ಯಂತ ವಿನೂತ ಭಾವದಿಂದ ಹೇಳಿಕೊಂಡಿರುವ ಸಾಲುಗಳು.

ಸಕಲ ಜೀವಿಗಳಿಗೂ, ಮಾತನಾಡದ, ಭರವಸೆಯಿಲ್ಲದ,

ಭರವಸೆಯ ಕೇಳಲು ತಿಳುವಳಿಕೆಯಿಲ್ಲದ ನಮ್ಮ ನೋವುಗಳಲ್ಲಿ

ಭಾಗಿಯಾಗುವ ಸಕಲ/ಜೀವಿಗಳಿಗೂ.

-ಈ ಮಹಾಕಾವ್ಯದ ಪ್ರತೀ ಸಾಲುಗಳು ಒಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಆಲಿಸುವಂತಹದ್ದು. ಮನುಷ್ಯನಿಗೆ ಎಷ್ಟೇ ಆಸ್ತಿ, ಅಂತಸ್ತು, ಅಧಿಕಾರವಿದ್ದರೂ ಮತ್ತು ದ್ವೇಷದ ಮನೋಭಾವನೆ ಇದ್ದರೂ ಕೊನೆಗಳಿಗೆಯಲ್ಲಿ ಆತ ಬಯಸುವುದು ಹಿಡಿಯಷ್ಟು ನಿಷ್ಕಲ್ಮಶ ಪ್ರೀತಿಯಷ್ಟೇ. ಬುದ್ಧನಾಗುವುದೆಂದರೆ ಅಷ್ಟು ಸುಲಭವಲ್ಲ, ಸರಳವಲ್ಲ ಅದೊಂದು ತಪಸ್ಸು! ಹಾಗಾಗಿ ನಾವು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ನಡೆದರೆ ನಮ್ಮ ಮನಸ್ಸಿನೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಎಲ್ಲವೂ ಸುಂದರವಾಗಿರುತ್ತದೆ. ಹೇಗೆಂದರೆ ಸರ್ವಜನಾಂಗದ ಶಾಂತಿಯ ತೋಟದಂತೆ. ಪ್ರತಿಯೊಬ್ಬರ ಸಕಾರಾತ್ಮಕ ಚಿಂತನೆಗಳು ಕೂಡ ಬೆಳಕಿನಂತೆ. ಆ ಎಲ್ಲಾ ಬೆಳಕು ಒಟ್ಟಾದರೆ ಬೆಳಗು. ನಮಗೆಲ್ಲರಿಗೂ ಬೆಳಕು ಮತ್ತು ಬೆಳಗು ಬೇಕೆಂದರೆ ಮೊದಲು ಈ ಪುಸ್ತಕವನ್ನು ಎಲ್ಲರೂ ಓದಬೇಕು. ಓದಿ ಅರಿತಾಗ ಮಾತ್ರ ಈ ಪ್ರಖರ ಬೆಳಕಿನ ಬೆಳಗು ಮೂಡುತ್ತದೆ. ಒಟ್ಟಿನಲ್ಲಿ ಕನ್ನಡದಲ್ಲಿ ಅನುವಾದಗೊಂಡ ಈ ಪುಸ್ತಕ ಕನ್ನಡ ಸಾಹಿತ್ಯ ಲೋಕಕ್ಕೆ ಬೆಳ್ಗಿರಣದ ಕೊಡುಗೆಯಾಗಿದೆ. ಅನುವಾದ ಮಾಡಿದಂತಹ ಡಾ. ಮಹಾದೇವ್ ರವರಿಗೆ ಸಹೃದಯಗಳ ಕಡೆಯಿಂದ ಧನ್ಯವಾದಗಳು. ಇಂತಹ ಮಹಾಕಾವ್ಯದಲ್ಲಿ ದೋಷಗಳು ಅಥವಾ ಅನ್ಯಧರ್ಮೀಯ ದೇವರ ಹೆಸರುಗಳು ಉಲ್ಲೇಖಿಸಿರುವುದು ಸರಿಯಷ್ಟೇ. ಅದು ಹೆಸರಿನ ಮೇಲೆ ಉಳಿಯುವಂತಹದ್ದಲ್ಲ. ಒಳ್ಳೆಯದರ ಮೇಲೆ ಉಳಿಯುವಂತಹದ್ದು. ಹೀಗಾಗಿ ಬುದ್ಧ, ಬುದ್ಧ ಕಾವ್ಯ ಎಲ್ಲವನ್ನು ಒಳಗೊಳ್ಳುವುದರಲ್ಲೇ ಬೆಳಕಿನ ಸಾರ್ಥಕ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುಬ್ಬು ಹೊಲೆಯಾರ್

contributor

Similar News