×
Ad

ಅನ್ನದಲ್ಲೂ ಧೂಳು, ಮೇವಿನಲ್ಲೂ ಧೂಳು

ಕಾರ್ಖಾನೆ ಧೂಳಿಗೆ ನರಕಯಾತನೆ ಅನುಭವಿಸುತ್ತಿರುವ ಹಿರೇಬಗನಾಳ

Update: 2026-01-28 12:05 IST

ಕೊಪ್ಪಳ: ನಗರದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಹಿರೇಬಗನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾರ್ಖಾನೆಗಳಿಂದ ಹೊರಬರುತ್ತಿರುವ ಧೂಳಿನಿಂದ ಜನರು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಧೂಳಿನ ಪ್ರಭಾವ ಜನರ ಜೀವನ, ಆರೋಗ್ಯ, ಕೃಷಿ ಹಾಗೂ ಪಶುಸಂಗೋಪನೆ ಮೇಲೆಯೂ ತೀವ್ರ ದುಷ್ಪರಿಣಾಮ ಬೀರುತ್ತಿದ್ದು, ಬದುಕು ನಡೆಸುವುದೇ ಕಷ್ಟಕರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿರೇಬಗನಾಳ ಗ್ರಾಮದ ಸುತ್ತಮುತ್ತ ಸುಮಾರು 15ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ ಹೊರಬರುವ ಧೂಳು ಗ್ರಾಮವನ್ನೆಲ್ಲ ಆವರಿಸಿದೆ. ಹೊಲದಲ್ಲಿ ಕೆಲಸಕ್ಕೆ ಹೋದರೂ ಧೂಳು, ಮಕ್ಕಳು ಆಟವಾಡಿದರೂ ಧೂಳು, ಮನೆಯೊಳಗೆಯೂ ಧೂಳೇ ಧೂಳು. ಇಲ್ಲಿನ ಜನರು ತಿನ್ನುವ ಅನ್ನದಲ್ಲೂ ಧೂಳು, ದನಗಳು ತಿನ್ನುವ ಮೇವಿನಲ್ಲೂ ಧೂಳು ಕಂಡುಬರುತ್ತಿದೆ ಎಂಬುದು ಆತಂಕಕಾರಿ ಸಂಗತಿ.

ರೈತರು ಹೊಲದಲ್ಲಿ ಬೆಳೆದ ತರಕಾರಿಗಳ ಮೇಲೂ ಧೂಳಿನ ದಪ್ಪ ಪದರ ಕವಿದಿದ್ದು, ಇಂತಹ ತರಕಾರಿಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ವ್ಯಾಪಾರಿಗಳು ಶೇ.40ರಿಂದ 50ರಷ್ಟು ಕಡಿಮೆ ಬೆಲೆ ನೀಡುತ್ತಿದ್ದಾರೆ. ಧೂಳಿನಿಂದ ತರಕಾರಿಗಳನ್ನು ನೀರಿನಲ್ಲಿ ತೊಳೆದು ಮಾರುಕಟ್ಟೆಗೆ ನೀಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ತರಕಾರಿಗಳು ತನ್ನ ಸ್ವಾಭಾವಿಕ ಹೊಳಪನ್ನು ಕಳೆದುಕೊಳ್ಳುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗ್ರಾಮದ ಮನೆಗಳ ಸ್ಥಿತಿಯೂ ಶೋಚನೀಯವಾಗಿದೆ. ಮನೆಯ ಅಂಗಳ, ಒಳಗಡೆ ಗೋಡೆ, ಕಿಟಕಿಗಳು ಎಲ್ಲವೂ ಧೂಳಿನಿಂದ ತುಂಬಿಕೊಂಡಿವೆ. ಗೋಡೆಯ ಮೇಲೆ ಕೈ ಸವರಿದರೆ ಕೈ ಕಪ್ಪು ಮಸಿಯಿಂದ ತುಂಬಿಕೊಳ್ಳುವಂತಿದೆ. ವಾರಕ್ಕೊಮ್ಮೆ ದನಗಳಿಗೆ ಮೈತೊಳೆಯುತ್ತಿದ್ದರೂ, ದನಗಳ ಮೈಮೇಲೆ ಸದಾ ಕಪ್ಪು ಧೂಳು ಅಂಟಿಕೊಂಡೇ ಇರುತ್ತದೆ. ದನಗಳು ತಿನ್ನುವ ಮೇವಿನಲ್ಲೂ ಧೂಳು ಇರುವುದರಿಂದ ಪಶುಗಳ ಆರೋಗ್ಯಕ್ಕೂ ತೀವ್ರ ಹಾನಿಯಾಗುತ್ತಿದೆ. ಪಶುವೈದ್ಯರನ್ನು ಸಂಪರ್ಕಿಸಿದರೆ, ‘‘ಈ ಪ್ರದೇಶ ದನ ಸಾಕಲು ಯೋಗ್ಯವಲ್ಲ’’ ಎಂಬ ಉತ್ತರ ಸಿಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಧೂಳಿನ ಪರಿಣಾಮದಿಂದ ಇಲ್ಲಿನ ಜನರು ಉಸಿರಾಟದ ಸಮಸ್ಯೆ, ಕಣ್ಣು ಉರಿಯುವುದು, ಚರ್ಮದ ಕಾಯಿಲೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ವಾರದಲ್ಲಿ ಒಮ್ಮೆಯಾದರೂ ಆಸ್ಪತ್ರೆಗೆ ಹೋಗಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಮಸ್ಯೆ ಕೇವಲ ಹಿರೇಬಗನಾಳ ಗ್ರಾಮಕ್ಕೆ ಸೀಮಿತವಾಗಿಲ್ಲ. ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳು ಇದೇ ಧೂಳಿನ ಸಂಕಟವನ್ನು ಅನುಭವಿಸುತ್ತಿವೆ. ಬಲ್ಡೋಟಾ ಕಾರ್ಖಾನೆ ವಿಸ್ತರಣೆ ನಡೆದರೆ ಇಡೀ ಕೊಪ್ಪಳ ನಗರವೇ ಧೂಳಿನಿಂದ ಆವರಿಸಲಿದೆ ಎಂಬ ಆತಂಕ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ‘ಕೊಪ್ಪಳ ಬಚಾವೋ ಆಂದೋಲನ ಸಮಿತಿ’ ಕಳೆದ 87ಕ್ಕೂ ಹೆಚ್ಚು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದೆ. ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಈ ಧೂಳಿನಿಂದ ಆರೋಗ್ಯ ಹಾಳಾಗುವ ಭಯದಿಂದ ಮಕ್ಕಳನ್ನು ತವರು ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದೇವೆ. ಇಲ್ಲಿಗೆ ಕರೆದುಕೊಂಡು ಬಂದರೆ ಅನಾರೋಗ್ಯ ಎದುರಾಗುತ್ತೋ ಎಂಬ ಆತಂಕ ಕಾಡುತ್ತಿದೆ.

- ಸಾವಿತ್ರಿ ಪಲ್ಲೆದ್, ರೈತ ಮಹಿಳೆ

ಈ ಕರಿ ಬೂದಿಯಿಂದ ನಮಗೆ ಜೀವನ ನಡೆಸೋಕೆ ಕಷ್ಟ ಆಗಿದೆ. ಹೊಲಕ್ಕೆ ಹೋದರೂ ಸಮಸ್ಯೆ, ಮನೆಗೆ ಬಂದರೂ ಸಮಸ್ಯೆ. ಏನಾದರೂ ಮಾಡಿ ಈ ಧೂಳಿಗೆ ಪರಿಹಾರ ಕೊಡಬೇಕು.

- ಸೀತಾ, ರೈತ ಮಹಿಳೆ

ಎಕರೆಗೆ 50 ಸಾವಿರ ರೂಪಾಯಿ ಖರ್ಚು ಮಾಡಿ ಕಬ್ಬು ಬೆಳೆದಿದ್ದೇವೆ. ಆದರೆ ಈ ಕರಿ ಬೂದಿಯಿಂದ ಬೆಳೆಯೇ ಸುಟ್ಟು ಹೋಗುತ್ತಿದೆ. ತೆಂಗಿನ ಮರಗಳಲ್ಲಿ ಕಾಯಿಗಳೇ ಬರುತ್ತಿಲ್ಲ. ಇದಕ್ಕೆಲ್ಲಾ ಈ ಧೂಳೇ ಕಾರಣ.

- ಗಣೇಶ ಬಗನಾಳ, ರೈತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News