×
Ad

ವಿಜಯಪುರ ಎಪಿಎಂಸಿಯಲ್ಲಿ ಸೌಲಭ್ಯಗಳೇ ಮರೀಚಿಕೆ!

ಮೇಕೆ-ಕುರಿಗಳ ಸಂತೆಯಲ್ಲಿ ರೈತರು, ವ್ಯಾಪಾರಸ್ಥರ ಪರದಾಟ

Update: 2026-01-28 14:40 IST

ವಿಜಯಪುರ: ಪ್ರತಿನಿತ್ಯ ವಿವಿಧ ಭಾಗಗಳಿಂದ ರೈತರು, ವ್ಯಾಪಾರಿಗಳು ಹಾಗೂ ಖರೀದಿದಾರರು ಸಮಾವೇಶಗೊಳ್ಳುವ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣವೇ ಇಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ವಿಪರ್ಯಾಸವಾಗಿದೆ. ಅದರಲ್ಲೂ ಪ್ರತೀ ಭಾನುವಾರ ನಡೆಯುವ ಮೇಕೆ-ಕುರಿ ಸಂತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು ಹಾಗೂ ವ್ಯಾಪಾರಿಗಳು ತೀವ್ರ ಅಸೌಕರ್ಯ ಅನುಭವಿಸುವಂತಾಗಿದೆ.

ಪ್ರತಿ ಭಾನುವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ನಡೆಯುವ ಈ ಕುರಿ ಸಂತೆಗೆ ಸುಮಾರು 6 ಸಾವಿರಕ್ಕೂ ಅಧಿಕ ಕುರಿಗಳು ಮಾರಾಟಕ್ಕೆ ಬರುತ್ತವೆ. ವಿಜಯಪುರ ಜಿಲ್ಲೆಯಷ್ಟೇ ಅಲ್ಲದೆ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಿಂದಲೂ ಖರೀದಿದಾರರು ಆಗಮಿಸುತ್ತಾರೆ. ಮೇಕೆ, ಕುರಿ ವ್ಯಾಪಾರದಲ್ಲಿ ಉತ್ತಮ ವಹಿವಾಟು ನಡೆಯುವ ಈ ಮಾರುಕಟ್ಟೆಯಲ್ಲಿ ಹಸು, ಎಮ್ಮೆ, ಆಕಳುಗಳ ವ್ಯಾಪಾರವೂ ನಡೆಯುತ್ತದೆ. ಜಿಲ್ಲೆಯ ಸುತ್ತಮುತ್ತಲಿನ ಮಾಂಸಾಹಾರಿ ಖಾನಾವಳಿ ಹಾಗೂ ಡಾಬಾಗಳು ತಮ್ಮ ಅಗತ್ಯಕ್ಕಾಗಿ ಇದೇ ಸಂತೆಯನ್ನು ಅವಲಂಬಿಸಿವೆ.

ಆದರೆ ಇಂತಹ ಪ್ರಮುಖ ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯಗಳೇ ಇಲ್ಲದಿರುವುದು ವ್ಯಾಪಾರಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಮೇಕೆ,ಕುರಿ ಮಾರಾಟಕ್ಕೆ ಬರುವವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಂತಾಗಿದೆ. ಸಾರ್ವಜನಿಕ ಶೌಚಾಲಯಗಳು ಇದ್ದರೂ ಅವು ಬಳಕೆಗೆ ಅಸಾಧ್ಯ ಸ್ಥಿತಿಯಲ್ಲಿವೆ. ಸ್ವಚ್ಛತೆಯಂತೂ ಸಂಪೂರ್ಣ ಮರೀಚಿಕೆಯಾಗಿದೆ.

ಎಪಿಎಂಸಿ ಆವರಣದ ಒಂದು ಭಾಗದಲ್ಲಿ ಅರ್ಧಕ್ಕೆ ನಿಂತ ಕಟ್ಟಡಗಳು ಹಾಗೂ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬರುತ್ತಿದ್ದು, ವ್ಯಾಪಾರ ನಡೆಸುವುದಕ್ಕೂ ಅಡಚಣೆ ಉಂಟಾಗಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ಯಾವುದೋ ಪಾಳುಬಿದ್ದ ಜಾಗದಲ್ಲಿ ವ್ಯಾಪಾರ ಮಾಡುವಂತಾಗಿದೆ ಎಂಬುದು ಅವರ ಬೇಸರ.

ತೊಟ್ಟಿಯಲ್ಲಿ ನೀರಿಗಿಂತ ಕಸವೇ ಹೆಚ್ಚು

ಮಾರುಕಟ್ಟೆಯಲ್ಲಿ ಮೇಕೆ ಹಾಗೂ ಕುರಿಗಳಿಗೆ ನೀರು ಕುಡಿಯಲು ಎರಡು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳಲ್ಲಿ ನೀರಿಗಿಂತ ಹೆಚ್ಚಾಗಿ ಕಸವೇ ತುಂಬಿಕೊಂಡಿದೆ. ಬೆಳಗ್ಗೆ ಮನೆಗಳಿಂದ ಹೊರಟ ಮೂಕ ಪ್ರಾಣಿಗಳು ಖರೀದಿದಾರರ ಮನೆ ಸೇರಿದ ನಂತರವೇ ಮತ್ತೆ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇಲ್ಲಿ ಸೌಲಭ್ಯಗಳಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಮೇಕೆ, ಕುರಿ ವ್ಯಾಪಾರಸ್ಥರು ಹಾಗೂ ಖರೀದಿದಾರರಿಂದ ಜಕಾತಿ (ತೆರಿಗೆ) ವಸೂಲಿ ಮಾಡುವ ಎಪಿಎಂಸಿ ಆಡಳಿತಕ್ಕೆ ಹಣ ಸಂಗ್ರಹಿಸುವಲ್ಲಿ ಉತ್ಸಾಹವಿದ್ದರೂ, ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮೇಕೆ, ಕುರಿ ಸಂತೆಯಂತಹ ಪ್ರಮುಖ ವಾಣಿಜ್ಯ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ ಮುಂದುವರಿದರೆ, ರೈತರು ಹಾಗೂ ವ್ಯಾಪಾರಸ್ಥರ ಸಂಕಷ್ಟ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದಿನೇ ದಿನೇ ಗಟ್ಟಿಯಾಗುತ್ತಿದೆ.

ಶೌಚಾಲಯಕ್ಕೆ ಬೀಗ

ಆಡು, ಕುರಿ ಸಂತೆಯ ಆವರಣದಲ್ಲಿ ಸುಂದರವಾಗಿ ಶೌಚಾಲಯ ನಿರ್ಮಾಣಗೊಂಡಿದ್ದರೂ, ಅದರ ಸುತ್ತಮುತ್ತ ಗಿಡಕಂಟಿ ಬೆಳೆದಿದ್ದು, ಶೌಚಾಲಯ ವಿಭಾಗಕ್ಕೆ ಬೀಗ ಹಾಕಲಾಗಿದೆ. ಇದರಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಹೊರಗಡೆಯೇ ಶೌಚಕ್ಕೆ ತೆರಳಬೇಕಾದ ದುಸ್ಥಿತಿ ಎದುರಾಗಿದೆ. ಇದರಿಂದ ಅಸಹನೆಗೊಂಡ ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.‌

ಎಪಿಎಂಸಿಯಲ್ಲಿ ಹಂತ ಹಂತವಾಗಿ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

-ಅಲ್ಲಾಭಕ್ಷ ಬಿಜಾಪೂರ, ಎಪಿಎಂಸಿ ಕಾರ್ಯದರ್ಶಿ

ಕಳೆದ ಏಳು ವರ್ಷಗಳಿಂದ ವಿಜಯಪುರದ ‘ಮೇಕೆ-ಕುರಿ ಗಳ ಸಂತೆ’ಗೆ ಬರುತ್ತಿದ್ದೇವೆ. ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಆಡು, ಕುರಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲ. ಎಪಿಎಂಸಿ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು.

- ಕುಸಪ ಚವ್ಹಾಣ, ಆಡು ಕುರಿ ವ್ಯಾಪಾರಿ, ಬಬಲೇಶ್ವರ



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News