ಚರಂಡಿ ನೀರ ಮಧ್ಯೆ ಬದುಕು ದೂಡುವ ಮುನಮುಟಗಿ
► ಸಾಂಕ್ರಾಮಿಕ ರೋಗದ ಭೀತಿ ► ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು!
ಯಾದಗಿರಿ: ವಡಿಗೇರಾ ತಾಲೂಕಿನ ಮುನಮುಟಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಕೊರತೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಗ್ರಾಮದಲ್ಲಿ ಬಹುತೇಕ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುತ್ತಿದ್ದು, ಮನೆಗಳ ಮುಂದೆ ಕೊಳಚೆ ನೀರು ನಿಂತಿರುವುದರಿಂದ ಗ್ರಾಮಸ್ಥರು ದುರ್ವಾಸನೆಯ ನಡುವೆಯೇ ದಿನನಿತ್ಯ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಹಲವೆಡೆ ಶಾಶ್ವತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ಹಾಗೂ ಮನೆಗಳಿಂದ ಹೊರಬರುವ ಬಚ್ಚಲ ನೀರು ನೇರವಾಗಿ ರಸ್ತೆಗಳ ಮೇಲೆ ಹರಿದು ಕೊಳಚೆ ನೀರಾಗಿ ವ್ಯಾಪಿಸಿದೆ. ಕೆಲ ಚರಂಡಿಗಳಲ್ಲಿ ಮಣ್ಣು, ಕಲ್ಲು ಹಾಗೂ ತ್ಯಾಜ್ಯ ಜಮಾಯಿಸಿರುವುದರಿಂದ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಪರಿಣಾಮ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಗ್ರಾಮವನ್ನು ಆವರಿಸಿದೆ.
ಗ್ರಾಮ ಪಂಚಾಯತ್ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ, ಶಾಶ್ವತ ಚರಂಡಿ ವ್ಯವಸ್ಥೆ ಕಲ್ಪಿಸುವ ಬೇಡಿಕೆ ಕಡತಗಳಲ್ಲೇ ಸಿಮಿತವಾಗಿದೆ ಎಂಬುದು ಅವರ ಅಳಲು.
ಮಳೆಗಾಲದಲ್ಲಿ ಮತ್ತಷ್ಟು ದುಸ್ಥಿತಿ
ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುವುದು ಸಾಮಾನ್ಯವಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೆ ತುತ್ತಾಗುವ ಭೀತಿ ಹೆಚ್ಚಾಗಿದೆ. ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು, ಶೌಚಾಲಯದ ಹೊಲಸು, ಸ್ನಾನ ಹಾಗೂ ಬಟ್ಟೆ ತೊಳೆಯುವ ನೀರು ಎಲ್ಲವೂ ಮಿಶ್ರಣವಾಗಿ ಹರಿಯುತ್ತಿರುವುದು ಗ್ರಾಮಸ್ಥರ ಜೀವನಮಟ್ಟವನ್ನು ಕುಗ್ಗಿಸಿದೆ.
ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವರೇ? ಅಥವಾ ಎಂದಿನಂತೆ ನಿರ್ಲಕ್ಷ್ಯ ಮುಂದುವರಿಯುವುದೇ? ಎಂಬ ಪ್ರಶ್ನೆಯ ಉತ್ತರಕ್ಕಾಗಿ ಗ್ರಾಮಸ್ಥರು ಇನ್ನೂ ಕಾಯುತ್ತಿದ್ದಾರೆ.
ಮುನಮುಟಗಿ ಗ್ರಾಮದಲ್ಲಿ ಮನೆಗಳ ಮುಂದೆ ನಿಂತಿರುವ ಚರಂಡಿ ನೀರು ಹಾಗೂ ಅನೈರ್ಮಲ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪಿಡಿಒ ಗಮನಕ್ಕೆ ತಂದು ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ.
-ಮಲ್ಲಿಕಾರ್ಜುನ ಸಂಗವಾರ್, ಇಒ, ವಡಿಗೇರಾ ತಾಲೂಕು
ಪ್ರತಿದಿನ ಚರಂಡಿಯ ದುರ್ವಾಸನೆ ಜೊತೆಗೆ ಬದುಕು ಸಾಗಿಸುತ್ತಿದ್ದೇವೆ. ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ನಿರೀಕ್ಷೆಯಲ್ಲೇ ಕಾಯುತ್ತಿದ್ದೇವೆ.
-ಲಕ್ಷ್ಮಣ್ ಗೌಡಿ, ಗ್ರಾಮಸ್ಥ
ಚರಂಡಿಯಿಂದ ಹೊರಬರುವ ಕೊಳಚೆ ನೀರು ಹಾಗೂ ತ್ಯಾಜ್ಯದಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ದುರ್ವಾಸನೆಯಿಂದ ಮಕ್ಕಳು ಮತ್ತು ಹಿರಿಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೆಲ ಕುಟುಂಬಗಳು ಮನೆ ಬಿಟ್ಟು ಹೋಗುವ ಪರಿಸ್ಥಿತಿಯೂ ಬಂದಿವೆ.
-ಮಲ್ಲಿಕಾರ್ಜುನ ಬೆನಿಗಿಡ, ಗ್ರಾಮಸ್ಥ
ಕುಡಿಯುವ ನೀರಿಗೂ ಪರದಾಟ
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ ಪ್ಲಾಂಟ್) ಸಂಪೂರ್ಣವಾಗಿ ಕೆಟ್ಟು ನಿಂತಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಕ್ಕದ ಊರುಗಳಿಗೆ ತೆರಳುವಂತಾಗಿದೆ. ಮೂಲಭೂತ ಸೌಲಭ್ಯಗಳನ್ನೇ ಒದಗಿಸಲು ವಿಫಲವಾದ ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.