×
Ad

ಅಹಿಂದ ವರ್ಗದ ಸ್ಮಶಾನಕ್ಕಿಲ್ಲ ಕನಿಷ್ಠ ಮೂಲಭೂತ ಸೌಕರ್ಯ

Update: 2026-05-19 15:16 IST

ಸಿಂದಗಿ: ಹಿಂದುಳಿದ, ದಲಿತ (ಅಹಿಂದ) ಸಮುದಾಯಗಳ ಏಳಿಗೆಯೇ ನಮ್ಮ ಪರಮ ಧರ್ಮ ಎಂದು ಸಾರುತ್ತಾ ಅಧಿಕಾರ ಹಿಡಿದ ಸರಕಾರದ ಅವಧಿಯಲ್ಲೇ, ಸಿಂದಗಿ ತಾಲೂಕಿನ ಅಹಿಂದ ವರ್ಗದ ಜನರಿಗೆ ಸತ್ತ ಮೇಲೂ ನೆಮ್ಮದಿಯ ಅಂತ್ಯಸಂಸ್ಕಾರ ಸಿಗುತ್ತಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಬದುಕಿದ್ದಾಗ ಹಕ್ಕುಗಳಿಗಾಗಿ ಹೋರಾಡುವ ಈ ಶೋಷಿತ ಸಮುದಾಯಗಳು, ಸತ್ತ ಮೇಲೂ ಗೌರವಯುತವಾಗಿ ಮಣ್ಣಾಗಲು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.

ಸಿಂದಗಿ ತಾಲೂಕಿನ ಗ್ರಾಮೀಣ ಭಾಗ ಹಾಗೂ ಅರೆ-ಪಟ್ಟಣ ಪ್ರದೇಶಗಳಲ್ಲಿ ಅಹಿಂದ ವರ್ಗದ ಸ್ಮಶಾನಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸರಕಾರದ ಅಹಿಂದ ಕಲ್ಯಾಣದ ಘೋಷಣೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವೇ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ.

ಸಿಂದಗಿಯ ಸ್ಮಶಾನಗಳ ನರಕಸದೃಶ ಸ್ಥಿತಿ: ಇಲ್ಲಿ ಮೂಲಭೂತ ಸೌಲಭ್ಯಗಳಿಲ್ಲ!

ಸಿಂದಗಿಯ ಅಹಿಂದ ವರ್ಗದವರಿಗಾಗಿ ಕಾಯ್ದಿರಿಸಲಾದ ಹಲವು ಸ್ಮಶಾನಗಳಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ ಎಂದು ಇಲ್ಲಿ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆಗಳಿಲ್ಲದ ಹಾದಿ: ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಅಥವಾ ಸಂಪರ್ಕ ಮಾರ್ಗಗಳೇ ಇಲ್ಲ. ಮಳೆಗಾಲದಲ್ಲಂತೂ ಕೆಸರು ಗದ್ದೆಯಂತಾಗುವ ಹಾದಿಯಲ್ಲಿ ಹೆಗಲ ಮೇಲೆ ಮೃತದೇಹ ಹೊತ್ತು ಸಾಗುವುದು ಜನರಿಗೆ ಅಗ್ನಿ ಪರೀಕ್ಷೆಯಾಗಿದೆ.

<ಒತ್ತುವರಿ ಜಾಲ: ಅನೇಕ ಕಡೆಗಳಲ್ಲಿ ಶೋಷಿತ ವರ್ಗಗಳ ಸ್ಮಶಾನ ಭೂಮಿಯನ್ನು ಪ್ರಭಾವಿಗಳು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಹೂಳಲು ಜಾಗವಿಲ್ಲದೆ ಹಳೆ ಕಲ್ಲನ್ನೇ ಕಿತ್ತು ಮತ್ತೊಂದು ಶವ ಹೂಳುವ ದುಸ್ಥಿತಿ ಇದೆ.

<ನೀರು, ನೆರಳು ಮತ್ತು ಕಾಂಪೌಂಡ್ ಇಲ್ಲ: ಅಂತ್ಯಸಂಸ್ಕಾರಕ್ಕೆ ಬರುವ ಜನರಿಗೆ ಕುಡಿಯಲು ನೀರಿಲ್ಲ, ಕುಳಿತುಕೊಳ್ಳಲು ನೆರಳಿನ ಆಸರೆಯೂ ಇಲ್ಲ. ರಕ್ಷಣಾ ಗೋಡೆ (ಕಾಂಪೌಂಡ್) ಇಲ್ಲದ ಕಾರಣ, ಜಾನುವಾರು ಮತ್ತು ಬೀದಿ ನಾಯಿಗಳು ಸ್ಮಶಾನದೊಳಗೆ ನುಗ್ಗುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

<ಕತ್ತಲಲ್ಲಿ ಅಂತ್ಯಸಂಸ್ಕಾರ: ರಾತ್ರಿ ವೇಳೆ ಯಾರಾದರೂ ತೀರಿಕೊಂಡರೆ, ಸ್ಮಶಾನದಲ್ಲಿ ಕನಿಷ್ಠ ಒಂದು ವಿದ್ಯುತ್ ದೀಪದ ವ್ಯವಸ್ಥೆಯೂ ಇಲ್ಲದೆ ಮೊಬೈಲ್ ಟಾರ್ಚ್ ಗಳ ಬೆಳಕಿನಲ್ಲಿ ಅಂತ್ಯಕ್ರಿಯೆ ನಡೆಸಬೇಕಾದ ಅನಿವಾರ್ಯತೆ ಇದೆ.

<ಬದುಕಿದ್ದಾಗಲೂ ನಿರ್ಲಕ್ಷ್ಯ, ಸತ್ತ ಮೇಲೂ ಅಪಮಾನ!: ಅಹಿಂದ ಸರಕಾರ ಅಂತ ಹೇಳಿಕೊಳ್ಳುವವರು ಮೊದಲು ನಮ್ಮ ಹಳ್ಳಿಗಳ ಸ್ಮಶಾನಗಳಿಗೆ ಬಂದು ನೋಡಲಿ. ಬದುಕಿದ್ದಾಗ ನಮಗೆ ಸೌಲಭ್ಯ ಸಿಗಲಿಲ್ಲ, ಕನಿಷ್ಠ ಸತ್ತ ಮೇಲಾದರೂ ನೆಮ್ಮದಿಯಿಂದ ಮಣ್ಣಾಗಲು ಜಾಗ ಬೇಡವೇ? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ನಮ್ಮದೇ ಸರಕಾರ ನಮಗೆ ಇಂತಹ ಪರಿಸ್ಥಿತಿ ತಂದಿಟ್ಟಿರುವುದು ದುರಂತ. ಒಬ್ಬ ಮನುಷ್ಯನ ಕೊನೆಯ ಹಕ್ಕಾದ ಗೌರವಯುತ ಅಂತ್ಯಸಂಸ್ಕಾರವನ್ನು ಕಸಿದುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

<ಸರಕಾರಕ್ಕೆ ಎಚ್ಚರಿಕೆ: ಮಾತಿನಲ್ಲಷ್ಟೇ ಅಹಿಂದ ಜಪ ಮಾಡದೇ, ಕೃತಿಯಲ್ಲಿ ತಳಸಮುದಾಯಗಳ ನೋವಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ.

ಸತ್ತ ಮೇಲಾದರೂ ಮನುಷ್ಯನಿಗೆ ಸಿಗಬೇಕಾದ ಕನಿಷ್ಠ ಗೌರವವನ್ನು ಕಾಪಾಡದಿದ್ದರೆ, ಮುಂದಿನ ದಿನಗಳಲ್ಲಿ ಸಿಂದಗಿ ತಾಲೂಕಿನಾದ್ಯಂತ ಶೋಷಿತ ವರ್ಗಗಳು ಬೀದಿಗಿಳಿದು ಹೋರಾಡುವುದು ಖಚಿತ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ದೊಡ್ಡ ಊರ ಆಗ್ಯಾದರೀ ಸುಡಗಾಡದಾಗ ಹೇಳುವರು ಇಲ್ಲ ಕೇಳುವರು ಇಲ್ಲ. ಸತ್ತ ಮನೆಯವರೆ ಜೆಸಿಬಿ ಒಯ್ದು ಸ್ವಚ್ಛ ಮಾಡಿ ಮುಚ್ಚಿ ಬರಬೇಕಾಗಿದೆ.

-ಲಚ್ಚಪ್ಪ ಹವಳಗಿ, ಸಿಂದಗಿ

ಸ್ಮಶಾನದ ಪಕ್ಕ ಸ್ವಚ್ಛ ಇಲ್ಲರೀ, ಶವ ಹೂಳುವುದು ಒಂದು ಕಡೆ ಆದರ, ಇಲ್ಲಿನ ಗಬ್ಬು ವಾಸನೆಯಿಂದ ರೋಗಗಳಿಗೆ ತುತ್ತಾಗುತ್ತಿದೇವೆ. ಸರಕಾರದವರು ಸ್ವಲ್ಪ ಗಮನ ಹರಿಸಬೇಕು.

-ಮುಹಮ್ಮದ್ ಬಾಷಾ, ಸ್ಥಳೀಯ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಾನಂದ ಆಲಮೇಲ್

contributor

Similar News