×
Ad

ಆಲಮೇಲ ಆರೋಗ್ಯ ಕೇಂದ್ರಕ್ಕೆ ‘ತಾಲೂಕು’ ಆಸ್ಪತ್ರೆ ಕಳೆ ವರದಾನವಾದ ಡಯಾಲಿಸಿಸ್ ಕೇಂದ್ರ

Update: 2026-05-19 15:10 IST

ಆಲಮೇಲ: ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣೆಯಾದ ನಂತರ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಇದರ ಮುಖ್ಯಾಂಶವಾಗಿ, ದಶಕಗಳ ಬೇಡಿಕೆಯಾಗಿದ್ದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು (ಸಿಎಚ್ಸಿ) ಪೂರ್ಣ ಪ್ರಮಾಣದ ‘ತಾಲೂಕು ಆಸ್ಪತ್ರೆ’ಯಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಈಗ ತೀವ್ರ ವೇಗ ಪಡೆದುಕೊಂಡಿದೆ. ಕ್ಷೇತ್ರ ಶಾಸಕ ಅಶೋಕ ಮನಗೂಳಿ ಅವರ ವಿಶೇಷ ಆಸಕ್ತಿ ಹಾಗೂ ಮುತವರ್ಜಿಯಿಂದಾಗಿ ಆಸ್ಪತ್ರೆಯು ಸದ್ಯ ಹೈಟೆಕ್ ರೂಪ ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಬಡ ರೋಗಿಗಳಿಗೆ ವರದಾನವಾದ ಡಯಾಲಿಸಿಸ್ ಕೇಂದ್ರ:

ಕಳೆದ ಹಲವು ತಿಂಗಳುಗಳ ಹಿಂದೆ ಶಾಸಕ ಅಶೋಕ ಮನಗೂಳಿ ಅವರು ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಈ ಭಾಗದ ಬಡ ರೋಗಿಗಳಿಗೆ ದೊಡ್ಡ ಆಸರೆಯಾಗಿದ್ದಾರೆ. ಈ ಹಿಂದೆ ಪ್ರತಿ ಬಾರಿ ಡಯಾಲಿಸಿಸ್ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ವಿಜಯಪುರ ಅಥವಾ ನೆರೆಯ ಪಟ್ಟಣಗಳಿಗೆ ಅಲೆಯುತ್ತಾ ಆರ್ಥಿಕ ಹಾಗೂ ದೈಹಿಕ ತೊಂದರೆ ಅನುಭವಿಸುತ್ತಿದ್ದ ರೋಗಿಗಳಿಗೆ, ಈಗ ಸ್ಥಳೀಯವಾಗಿ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿರುವುದು ಸಾರ್ವಜನಿಕರ ಮುಖದಲ್ಲಿ ನೆಮ್ಮದಿ ತಂದಿದೆ.

ಆಸ್ಪತ್ರೆಯ ಈ ಸಕಾರಾತ್ಮಕ ಬದಲಾವಣೆಯ ಕುರಿತು ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಶಿ ಗಣಿಯಾರ, ನಮ್ಮ ಶಾಸಕರು ದೂರದೃಷ್ಟಿಯನ್ನಿಟ್ಟುಕೊಂಡು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದಂತಹ ಅತ್ಯಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ರೋಗಿಗಳು ಇಂದು ನೆಮ್ಮದಿಯಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕರು ಈ ಕೇಂದ್ರವನ್ನು ಪೂರ್ಣ ಪ್ರಮಾಣದ ತಾಲೂಕು ಆಸ್ಪತ್ರೆಯನ್ನಾಗಿ ಮಾಡುತ್ತಾರೆ ಎಂಬ ಭರವಸೆ ನಮಗಿದೆ. ಮುಂಬರುವ ದಿನಗಳಲ್ಲಿ ಇಲ್ಲಿ ೨೪x೭ ತುರ್ತು ಸೇವೆ ಸಂಪೂರ್ಣವಾಗಿ ಲಭ್ಯವಾದರೆ ಬಡ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಮೊದಲಿಗಿಂತ ಈಗ ಆಸ್ಪತ್ರೆಯಲ್ಲಿ ವ್ಯವಸ್ಥೆ ಬಹಳಷ್ಟು ಸುಧಾರಿಸಿದೆ. ಡಯಾಲಿಸಿಸ್‌ಗಾಗಿ ನಾವು ಊರು ಬಿಟ್ಟು ಹೋಗಬೇಕಿತ್ತು. ಈಗ ಆ ವ್ಯವಸ್ಥೆ ನಮ್ಮೂರಿನಲ್ಲಿಯೇ ಇರುವುದು ನಮ್ಮ ಭಾಗ್ಯ. ವೈದ್ಯರು ಮತ್ತು ಸಿಬ್ಬಂದಿ ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಶಾಸಕರ ಅನುದಾನದಲ್ಲಿ ನವೀಕೃತಗೊಂಡಿರುವ ಹೈಟೆಕ್ ವಾರ್ಡ್‌ಗಳನ್ನು ನೋಡಿದರೆ ನಮ್ಮೂರಿನ ಆಸ್ಪತ್ರೆ ಈಗ ಖಾಸಗಿ ಆಸ್ಪತ್ರೆಯಂತೆ ಸುಸಜ್ಜಿತವಾಗಿ ಕಾಣುತ್ತದೆ ಎಂದು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ರೋಗಿಯೊಬ್ಬರು ಹೇಳಿದ್ದಾರೆ.

ಆಲಮೇಲ ಪಟ್ಟಣವನ್ನು ಮಾದರಿ ತಾಲೂಕು ಕೇಂದ್ರವನ್ನಾಗಿ ರೂಪಿಸುವುದು ನನ್ನ ಕನಸು. ಅದಕ್ಕೆ ಪೂರಕವಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕೆಲಸವನ್ನು ಆದಷ್ಟು ಬೇಗ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ತಾಲೂಕು ಕೇಂದ್ರಕ್ಕೆ ಇರಬೇಕಾದ ಡಯಾಲಿಸಿಸ್ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಹಂತಹಂತವಾಗಿ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ.

<ಅಶೋಕ ಮನಗೂಳಿ, ಸಿಂದಗಿ ಶಾಸಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲಘನಿ ಎಂ.ದೇವರಮನಿ

contributor

Similar News