×
Ad

ಶ್ರಮ ಕಾರ್ಮಿಕರದ್ದು; ಸ‌ನ್ಮಾನ ನಾಯಕರಿಗೆ!

844 ಕೋಟಿ ರೂ. ಲಾಭ ಮಾಡಿ ಕೊಟ್ಟ ಚಿನ್ನದ ಗಣಿ ಕಾರ್ಮಿಕರಿಗಿಲ್ಲ ಕನಿಷ್ಠ ಸವಲತ್ತು

Update: 2026-05-19 14:42 IST

ಹಟ್ಟಿ: ರಾಜ್ಯದ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿ ಕಂಪನಿ (ಎಚ್‌ಜಿಎಮ್‌ಎಲ್) 2025-26ನೇ ಸಾಲಿನಲ್ಲಿ 1,691.50 ಕೆಜಿ ಚಿನ್ನ ಉತ್ಪಾದನೆ ಮಾಡಿ, ಇದೇ ಮೊದಲ ಬಾರಿಗೆ 1,910 ಕೋಟಿ ರೂ. ವಹಿವಾಟು ಹಾಗೂ 844 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಈ ಸಾಧನೆಯ ಹಿಂದೆ ಕಾರ್ಮಿಕರ ಬೆವರಿನ ಶ್ರಮವಿದ್ದು ಅವರಿಗೆ ಸಲ್ಲಬೇಕಾದ ಗೌರವ, ಕನಿಷ್ಠ ಸವಲತ್ತುಗಳಿಲ್ಲದೇ ಜೀವಭಯದಲ್ಲೇ ಕೆಲಸ ಮಾಡುತ್ತಿದ್ದಾರೆ.

ಗಣಿ ಕಂಪೆನಿಯ ಸಾಧನೆ ಹಿನ್ನೆಲೆಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪೆನಿಯ ಅಧ್ಯಕ್ಷ ಜೆ.ಟಿ. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕಿ ಆರ್. ಶಿಲ್ಪಾ ಅವರೂ ಇದ್ದರು. ಆದರೆ ಎಲ್ಲ ಪರಿಶ್ರಮ ಕಾರ್ಮಿಕರದ್ದು, ಸನ್ಮಾನ ಮಾತ್ರ ಮೇಲಾಧಿಕಾರಿಗಳಿಗೆ, ರಾಜಕಾರಣಿಗಳಿಗೆ ಎನ್ನುವ ಅಸಮಾಧಾನ ಕಾರ್ಮಿಕರಲ್ಲಿ ಮೂಡಿದೆ.

ಕಂಪೆನಿಯ ಈ ದಾಖಲೆ ಲಾಭದ ಸಂಭ್ರಮಾಚರಣೆಯ ನಡುವೆಯೇ ಹಟ್ಟಿ ಭಾಗದ ಕಾರ್ಮಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಭೂಮಿಯೊಳಗೆ ಜೀವ ಪಣಕ್ಕಿಟ್ಟು ದುಡಿಯುವವರು ಕಾರ್ಮಿಕರು. ಲಾಭ ಗಳಿಸಿದ ಮೇಲೆ ಇಲ್ಲಿಯವರೆಗೆ ಅಧ್ಯಕ್ಷರು ಕಾರ್ಮಿಕರಿಗೆ ಒಂದು ಬಾರಿಯೂ ಅಭಿನಂದನೆ ಸಲ್ಲಿಸಿಲ್ಲ. ಆದರೆ ಸನ್ಮಾನ ಮತ್ತು ಪ್ರಶಂಸೆ ಮಾತ್ರ ರಾಜಕೀಯ ನಾಯಕರು ಹಾಗೂ ಮೇಲಾಧಿಕಾರಿಗಳಿಗೆ ಸೀಮಿತವಾಗುತ್ತಿದೆ ಎಂಬ ಮಾತುಗಳು ಕಾರ್ಮಿಕ ವಲಯದಿಂದ ಕೇಳಿಬರುತ್ತಿವೆ.

ಕಾರ್ಮಿಕರ ಪ್ರಮುಖ ಸಮಸ್ಯೆಗಳು

►ಗಣಿಯಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಗಾಳಿಯ ಕೊರತೆ ಇದೆ

►ಎಲ್ಲಾ ವಿಭಾಗಗಳಲ್ಲಿ 1073 ಕಾರ್ಮಿಕರ ಕೊರತೆ

►ವಿಸ್ತರಣೆಯಾದ 50 ಟಿಎಚ್‌ಪಿ x2 ಬಾಲ್‌ಮಿಲ್ ವಿಭಾಗದಲ್ಲಿ ಆಗಬೇಕಿದ್ದ 100 ಕಾರ್ಮಿಕರ ಭರ್ತಿಯಾಗಿಲ್ಲ

►ಕಾರ್ಮಿಕರ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳಿಲ್ಲ

►ಭೂಮಿಯ ಒಳಗಿನಿಂದ ಚಿನ್ನದ ಖನಿಜ ತೆಗೆಯಲು ಗಣಿಯಲ್ಲಿ ಒಳಭಾಗದಲ್ಲಿ ಕೆಲಸ ಮಾಡುವ ಜಾಗವನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಮಾಡಿಲ್ಲ.

ಜನವರಿಯಲ್ಲಿ ನೀಡಬೇಕಿದ್ದ ಸಮವಸ್ತ್ರ ಇನ್ನೂ ನೀಡಿಲ್ಲ

ಬೂಟು, ಹೆಲ್ಮೇಟ್, ಕೈ ಗ್ಲೌಸ್ ಸೇರಿದಂತೆ ಇತರೆ ರಕ್ಷಣಾ ಸೌಕರ್ಯಗಳನ್ನು ನೀಡಿಲ್ಲ. ಒಂದು ವರ್ಷದಿಂದ ಆಹಾರದ ಪೊಟ್ಟಣ ನೀಡಿಲ್ಲ. ಇಷ್ಟೆಲ್ಲ ಕೊರತೆಗಳ ಮಧ್ಯೆ ಕಾರ್ಮಿಕರು ಉತ್ಪಾದನಾ ಕಾರ್ಯದಲ್ಲಿ ತೊಡಗಿಸಿಕೊಂಡು ರಕ್ತ, ಬೆವರು ಸುರಿಸಿ ತಮ್ಮ ಪ್ರಾಣ ಒತ್ತೆ ಇಟ್ಟು ಉತ್ಪಾದನೆಯ ಗುರಿ ತಲುಪಿದ್ದಾರೆ. ಕಾರ್ಮಿಕರ ಗೋಳು ಕೇಳದ ಕಂಪೆನಿಯ ಅಧ್ಯಕ್ಷ ಜೆ.ಟಿ.ಪಾಟೀಲ್ ಮಾತ್ರ ಸಿಎಂಗೆ, ಸಚಿವರಿಗೆ, ಅಧಿಕಾರಿಗಳಿಗೆ ಸನ್ಮಾನ ಮಾಡುವುದರಲ್ಲೇ ಕಾಲಹರಣ ಮಾಡುವ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡದೇ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ತೆರೆಮರೆಗೆ ಸರಿದ ಕಾರ್ಮಿಕರ ಶ್ರಮ

ಗಣಿಯಲ್ಲಿ ದುಡಿಯುವ ಕಾರ್ಮಿಕರ ಪ್ರಕಾರ, ಕೋಟಿ ಕೋಟಿ ರೂಪಾಯಿಗಳ ಲಾಭದ ಹಿಂದೆ ಇರುವ ನಿಜವಾದ ಶ್ರಮ ಕಾರ್ಮಿಕರದ್ದೇ. ಆದರೆ ಸಾಧನೆಯ ಸುದ್ದಿಗಳಲ್ಲಿ ಕಾರ್ಮಿಕರ ಪಾತ್ರ ಮರೆಮಾಚಲಾಗುತ್ತಿದೆ ಎಂಬ ಬೇಸರ ವ್ಯಕ್ತವಾಗಿದೆ.

ಲಾಭದಲ್ಲಿದ್ದರೂ ಬಗೆಹರಿಯುತ್ತಿಲ್ಲ ತಳ ಮಟ್ಟದ ಸಮಸ್ಯೆ!

ಕಂಪನಿ 844 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದರೂ, ಗಣಿ ಕಂಪೆನಿಯ ಕಾರ್ಮಿಕರು ವಾಸವಾಗಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹಳೆಯ ರಸ್ತೆಗಳು, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಘಟಕದ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ವಾಸನೆಯೂ ಬಡಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ರಮೇಶ ವೀರಾಪೂರು

contributor

Similar News