×
Ad

ಕಾಮ್ಸ್ ಆ್ಯಪ್ ನುಂಗಲಾಗದ ಬಿಸಿ ತುಪ್ಪ

ನಿಯಮಗಳದ್ದೇ ಕಾರುಬಾರು, ತಾಂತ್ರಿಕ ದೋಷದಿಂದ ಶಿಕ್ಷಕರು ಹೈರಾಣು!

Update: 2026-06-02 14:52 IST

ಆಲಮೇಲ: ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ತರುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಕಾಮ್ಸ್ ಆನ್‌ಲೈನ್ ಹಾಜರಾತಿ ಆ್ಯಪ್ ಈಗ ಶಿಕ್ಷಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು ಮತ್ತು ಶಿಕ್ಷಣ ಇಲಾಖೆಯ ಕಠಿಣ ಮಾರ್ಗಸೂಚಿಗಳು ಶಿಕ್ಷಕರ ತಲೆಮೇಲೆ ತೂಗುಗತ್ತಿಯಂತೆ ನಿಂತಿದ್ದರೆ, ಮತ್ತೊಂದೆಡೆ ತಾಂತ್ರಿಕ ದೋಷಗಳು ಶಿಕ್ಷಕರನ್ನು ಕಂಗೆಡಿಸಿವೆ.

ಈಗ ಶಾಲೆ ಪ್ರಾರಂಭವಾದರೂ ಆ್ಯಪ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಹಾಜರಾತಿ ದಾಖಲಾಗುತ್ತಿಲ್ಲ. ಆ್ಯಪ್ ಸರಿಯಾಗಿ ಕೆಲಸ ಮಾಡದಿದ್ದರೆ ನಾವೇನು ಮಾಡಬೇಕು ಎಂದು ಆಲಮೇಲ ತಾಲೂಕಿನ ಹೂವಿನಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೈಲಾಶ್ರೀ ಯಡ್ರಾಮಿ ವಾರ್ತಾ ಭಾರತಿ ಪತ್ರಿಕೆಯ ಎದುರು ಅಳಲು ತೋಡಿಕೊಂಡಿದ್ದಾರೆ.

ಲೇಟ್ ಆದರೆ ಸಿಎಲ್ ಕಡಿತ! : ಕಾಮ್ಸ್ ಆ್ಯಪ್‌ನಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕಿಂತ ತಡವಾಗಿ ಚೆಕ್-ಇನ್ ಮಾಡಿದರೆ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ:

ಗ್ರೇಸ್ ಪೀರಿಯಡ್ (ರಿಯಾಯಿತಿ ಸಮಯ): ಬೆಳಗ್ಗೆ ಶಾಲೆ ಆರಂಭವಾಗುವ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಸಾರಿಗೆ ಅಥವಾ ಅನಿವಾರ್ಯ ಕಾರಣಗಳಿಗಾಗಿ ಇಲಾಖೆಯು 10 ರಿಂದ 15 ನಿಮಿಷಗಳ ರಿಯಾಯಿತಿ ಸಮಯವನ್ನು ನೀಡುತ್ತದೆ. ಉದಾಹರಣೆಗೆ: ಶಾಲೆ ಬೆಳಗ್ಗೆ 9:45 ಕ್ಕೆ ಆರಂಭವಾಗುವುದಾದರೆ, 9:55 ಅಥವಾ 10 ಗಂಟೆಯ ಒಳಗೆ ಚೆಕ್ ಇನ್ ಮಾಡಲು ಅವಕಾಶವಿರುತ್ತದೆ.

<3 ದಿನ ತಡ ಮಾಡಿ ಬಂದರೆ ಒಂದು ಸಿಎಲ್ ಕಡಿತ: ಒಂದು ತಿಂಗಳ ಅವಧಿಯಲ್ಲಿ 3 ದಿನಗಳು ನಿಗದಿತ ಗ್ರೇಸ್ ಪೀರಿಯಡ್ಗಿಂತ ತಡವಾಗಿ ಬಂದಿರುವುದು ಆ್ಯಪ್‌ನಲ್ಲಿ ದಾಖಲಾದರೆ, ಒಂದು ದಿನದ ಆಕಸ್ಮಿಕ ರಜೆಯನ್ನು ಕಡಿತಗೊಳಿಸಲಾಗುತ್ತದೆ. ಸಿಎಲ್ ಬಾಕಿ ಇಲ್ಲದಿದ್ದರೆ, ಗಳಿಕೆ ರಜೆ (ಇಎಲ್) ಅಥವಾ ಅಸಾಧಾರಣ ರಜೆ ಎಂದು ಪರಿಗಣಿಸಲಾಗುತ್ತದೆ.

<ಸತತ ಗೈರುಹಾಜರಿ ಪರಿಗಣನೆ: ಗ್ರೇಸ್ ಪೀರಿಯಡ್ ಮುಗಿದು ತೀರಾ ತಡವಾಗಿ (1 ಗಂಟೆಗೂ ಹೆಚ್ಚು ) ಬಂದು ಚೆಕ್ -ಇನ್ ಮಾಡಿದರೆ, ಸೂಕ್ತ ಕಾರಣವಿಲ್ಲದಿದ್ದರೆ ಆ ಅರ್ಧ ದಿನವನ್ನು ’ಅರ್ಧ ದಿನದ ರಜೆ’ ಎಂದು ಮಾರ್ಪಡಿಸುವ ಅಧಿಕಾರ ಮೇಲಧಿಕಾರಿಗಳಿಗೆ ಇರುತ್ತದೆ. ಮುಂಚಿತವಾಗಿ ಅನುಮತಿ ಪಡೆಯದೆ ತಡವಾಗಿ ಬಂದು, ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸದಿದ್ದರೆ ಗೈರುಹಾಜರಿ ಎಂದೇ ಪರಿಗಣಿಸಲಾಗುತ್ತದೆ.

<ಬೇಗ ಹೋದರೆ ಕರ್ತವ್ಯ ಲೋಪ: ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್- ಔಟ್ ಮಾಡಿದರೆ, ಅದನ್ನು ಕರ್ತವ್ಯದ ಅವಗಣನೆ ಎಂದು ಪರಿಗಣಿಸಲಾಗುತ್ತದೆ:

ಅರ್ಧ ದಿನದ ರಜೆ ಕಡಿತ: ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ತೀರಾ ಮುಂಚಿತವಾಗಿ (ಮಧ್ಯಾಹ್ನದ ಅವಧಿಯಲ್ಲಿ) ಯಾವುದೇ ಪೂರ್ವಾನುಮತಿ ಇಲ್ಲದೆ ಚೆಕ್- ಔಟ್ ಮಾಡಿದರೆ, ಆ ದಿನದ ದ್ವಿತೀಯಾರ್ಧವನ್ನು ‘ಅರ್ಧ ದಿನದ ಸಿ ಎಲ್’ ಎಂದು ಪರಿಗಣಿಸಲಾಗುತ್ತದೆ.ಸಿ ಎಲ್ ಇಲ್ಲದಿದ್ದರೆ ಇ ಎಲ್ ಅಥವಾ ವೇತನ ರಹಿತ ರಜೆ ಅನ್ವಯವಾಗುತ್ತದೆ.

ತಿಂಗಳಿನಲ್ಲಿ ಮೂರು ಬಾರಿ ನಿಗದಿತ ಸಮಯಕ್ಕಿಂತ ಬೇಗ ಚೆಕ್ ಔಟ್ ಮಾಡಿದರೆ (ಅಥವಾ ಬೆಳಗ್ಗೆ ತಡವಾಗಿ ಬಂದು ಸಂಜೆ ಬೇಗ ಹೋದರೆ), 1 ದಿನದ ಆಕಸ್ಮಿಕ ರಜೆ (ಸಿ ಎಲ್) ಕಡಿತವಾಗುತ್ತದೆ. ಚಲನ-ವಲನ ವಹಿ ಕಡ್ಡಾಯ: ಇಲಾಖೆಯ ಅಧಿಕೃತ ಕೆಲಸ, ಸಿಆರ್ಸಿ ಸಭೆ, ಅಥವಾ ಕ್ಷೇತ್ರ ಕಾರ್ಯಗಳಿಗಾಗಿ ಶಾಲಾ ಅವಧಿಗಿಂತ ಮುಂಚಿತವಾಗಿ ಹೋಗಬೇಕಾದಲ್ಲಿ ಕಡ್ಡಾಯವಾಗಿ ಶಾಲೆಯ ಚಲನ-ವಲನ ವಹಿಯಲ್ಲಿ ನಮೂದಿಸಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯಬೇಕು. ನಂತರ ಆಪ್ನಲ್ಲಿ ’ಒಡಿ’ ಆಯ್ಕೆಯನ್ನು ಬಳಸಬೇಕಾಗುತ್ತದೆ. ವೈಯಕ್ತಿಕ ತುರ್ತು ಸಂದರ್ಭಗಳಿದ್ದರೆ ಅರ್ಧ ದಿನದ ಸಿಎಲ್ ಅರ್ಜಿ ಸಲ್ಲಿಸಬೇಕು.

<ಜಿಯೋ-ಫೆನ್ಸಿಂಗ್ ಮತ್ತು ತಾಂತ್ರಿಕ ತಲೆನೋವು!

ಕಾಮ್ಸ್ ಆ್ಯಪ್ ಜಿಯೋ-ಫೆನ್ಸಿಂಗ್ ಆಧಾರದ ಮೇಲೆ ಕೆಲಸ ಮಾಡುವುದರಿಂದ ಶಿಕ್ಷಕರು ಶಾಲಾ ಆವರಣದಲ್ಲಿದ್ದಾಗ ಮಾತ್ರ ಚೆಕ್- ಇನ್’ ಅಥವಾ ’ಚೆಕ್- ಔಟ್ ಮಾಡಲು ಸಾಧ್ಯ. ಶಾಲೆಯಿಂದ ಹೊರಗೆ ಹೋದ ನಂತರ ದೂರದ ಸ್ಥಳದಿಂದ ಆ್ಯಪ್ ಅನುಮತಿಸುವುದಿಲ್ಲ.

ಶಿಕ್ಷಕರ ಅಳಲು ಮತ್ತು ವಾಸ್ತವ ಸಮಸ್ಯೆ: ನಿಯಮಗಳೇನೋ ಕಟ್ಟುನಿಟ್ಟಾಗಿವೆ, ಆದರೆ ತಂತ್ರಜ್ಞಾನದ ಕೈಕೊಡುತ್ತಿರುವುದು ಶಿಕ್ಷಕರ ನೆಮ್ಮದಿ ಕೆಡಿಸಿದೆ. ಶಾಲೆಗಳು ಪುನರಾರಂಭಗೊಂಡ ಮೊದಲ ದಿನವೇ ಹಲವೆಡೆ ನೆಟ್ವರ್ಕ್ ಸಮಸ್ಯೆ, ಸರ್ವರ್ ಡೌನ್ ಹಾಗೂ ಜಿಯೋ-ಫೆನ್ಸಿಂಗ್ ದೋಷಗಳಿಂದಾಗಿ ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗಿದ್ದರೂ ಆ್ಯಪ್ನಲ್ಲಿ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತಿಲ್ಲ. ನಾವು ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದರೂ ಆ್ಯಪ್ ಕೆಲಸ ಮಾಡದಿದ್ದರೆ ನಮ್ಮ ರಜೆ ಕಡಿತವಾಗುತ್ತದೆ ಅಥವಾ ಲೇಟ್ ಮಾರ್ಕ್ ಬೀಳುತ್ತದೆ ಎಂಬ ಭಯ ಕಾಡುತ್ತಿದೆ ಎನ್ನುತ್ತಾರೆ ಶಿಕ್ಷಕರು. ತಾಂತ್ರಿಕ ದೋಷ ಎದುರಾದಾಗ ತಕ್ಷಣವೇ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು ಮ್ಯಾನುಯಲ್ ರಿಕ್ವೆಸ್ಟ್ ಕಳುಹಿಸಲು ಅವಕಾಶವಿದೆಯಾದರೂ, ಪ್ರತಿದಿನ ಇದೇ ತಲೆನೋವಾದರೆ ಹೇಗೆ ಎಂಬುದು ಶಿಕ್ಷಕರ ಪ್ರಶ್ನೆ.

ಇಂಟರ್‌ನೆಟ್ ಸೌಲಭ್ಯ ಸರಿಯಾಗಿಲ್ಲದ ಗ್ರಾಮೀಣ ಭಾಗದ ಶಾಲೆಗಳ ವಾಸ್ತವ ಸ್ಥಿತಿಯನ್ನು ಅರಿತು, ತಾಂತ್ರಿಕ ದೋಷದಿಂದ ಉಂಟಾಗುವ ತಡವಾದ ಹಾಜರಾತಿಗೆ ಶಿಕ್ಷಕರನ್ನು ದಂಡಿಸದಂತೆ ವಿನಾಯಿತಿ ನೀಡಬೇಕು ಎಂಬುದು ಸದ್ಯ ಶಿಕ್ಷಕ ಸಮುದಾಯದ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲಘನಿ ಎಂ.ದೇವರಮನಿ

contributor

Similar News