ಮಧು ಬಂಗಾರಪ್ಪಗೆ ಒಲಿದ ಸಚಿವ ಸ್ಥಾನ

ರಾಜಕೀಯ ಗುರುವಿನ ಋಣ ಸಂದಾಯ ಮಾಡಿದ ಡಿಕೆಶಿ

Update: 2026-08-04 14:49 IST

ಶಿವಮೊಗ್ಗ : ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾಗಿ ಗಮನ ಸೆಳೆದಿದ್ದ ಸೊರಬ ಕ್ಷೇತ್ರದ ಶಾಸಕ ಎಸ್.ಮಧು ಬಂಗಾರಪ್ಪ ಅವರಿಗೆ ಈಗ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾಗಿ ಇಲಾಖೆಯಲ್ಲಿ ಹಲವಾರು ಸುಧಾರಣೆ ಮಾಡಿದ ಹೆಗ್ಗಳಿಕೆ ಮಧು ಬಂಗಾರಪ್ಪನವರದು. ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವಲ್ಲಿ ಶ್ರಮಿಸಿದ್ದಾರೆ.ಸರಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಇಲಾಖೆಯ ಬಲವರ್ಧನೆಗೆ ಬಹಳಷ್ಟು ಕೊಡುಗೆ ನೀಡಿದ್ದರು.ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವ ಮೂಲಕ ಮಕ್ಕಳು, ಪೋಷಕರ ಗಮನ ಸೆಳೆದಿದ್ದರು.

ತಂದೆಯಿಂದ ರಾಜಕೀಯ ದೀಕ್ಷೆ:

ತಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರಿಂದ ರಾಜಕೀಯ ದೀಕ್ಷೆ ಪಡೆದ ಮಧು ಬಂಗಾರಪ್ಪನವರು, 2004ರಲ್ಲಿ ಮೊದಲ ಬಾರಿಗೆ ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 2008ರಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯಡಿ ಸ್ಪರ್ಧಿಸಿ ಸೋತಿದ್ದರು. 2013ರ ವಿಧಾನ ಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪ ಅವರು, ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೋಲನ್ನು ಅನುಭವಿಸಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು 5,06,512 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ಸೋಲನ್ನು ಕಂಡಿದ್ದರು.

ಕಾಂಗ್ರೆಸ್ ಸೇರ್ಪಡೆ:

ತಮ್ಮ ರಾಜಕೀಯ ಏಳುಬೀಳುಗಳ ನಡುವೆಯೂ ಜೆಡಿಎಸ್ ಪಕ್ಷವನ್ನು ತೊರೆದು ಮಧು ಬಂಗಾರಪ್ಪನವರು ತಮ್ಮ ಅಪಾರ ಬೆಂಬಲಿಗರೊಂದಿಗೆ 2021ರ ಜು.30ರಂದು ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ. ಕೆ. ಶಿವಕುಮಾರ್ ಮುಂತಾದ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಬಳಿಕ 2022ರಲ್ಲಿ ಕೆಪಿಸಿಸಿ ಒಬಿಸಿ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕವಾದರು. ಬಳಿಕ ಎಐಸಿಸಿ ಸದಸ್ಯರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರು. 2023ರ ವಿಧಾನಸಭಾ ಚುನಾವಣೆ ವೇಳೆ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಕಾಂಗ್ರೆಸ್ ಪಕ್ಷವನ್ನು ಭರ್ಜರಿ ಜಯದ ದಡ ಮುಟ್ಟಿಸಿದ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳ ರೂವಾರಿಗಳಲ್ಲಿ ಮಧು ಬಂಗಾರಪ್ಪ ಕೂಡ ಒಬ್ಬರು.

2023ರ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಸಹೋದರ, ಬಿಜೆಪಿಯ ಕುಮಾರ್ ಬಂಗಾರಪ್ಪವಿರುದ್ಧ ಸ್ಪರ್ಧಿಸಿ 44,262 ಮತಗಳ ಅಂತರದಿಂದ ಜಯಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈಡಿಗ ಸಮುದಾಯದ ಪ್ರಾತಿನಿಧ್ಯದ ಅಡಿಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ದೊರೆಯಿತು.

ಗುರುವಿನ ಋಣ ಸಂದಾಯಿಸಿದ ಡಿಕೆಶಿ:

ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ನಡುವೆ ಆಳವಾದ ರಾಜಕೀಯ ಗುರು-ಶಿಷ್ಯರ ನಂಟಿದೆ. ಬಂಗಾರಪ್ಪಅವರ ಸಂಪುಟದಲ್ಲಿ ಡಿ.ಕೆ. ಶಿವಕುಮಾರ್ ಅವರು ಮೊದಲು ಸಚಿವರಾಗಿ ರಾಜಕೀಯ ಜೀವನದಲ್ಲಿ ಪ್ರಮುಖ ಹಂತ ತಲುಪಿದ್ದರು. 1990ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿಯಾದಾಗ, ಅವರ ಸಂಪುಟದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಬಂದೀಖಾನೆ ಖಾತೆಯ ಸಚಿವರನ್ನಾಗಿ ಮಾಡಿದ್ದರು. ತಮ್ಮ ರಾಜಕೀಯ ಬೆಳವಣಿಗೆಗೆ ಎಸ್.ಎಂ. ಕೃಷ್ಣ ಮಾತ್ರವಲ್ಲ, ತಮ್ಮನ್ನು ರಾಜಕೀಯವಾಗಿ ಮುಂಚೂಣಿಗೆ ತರುವಲ್ಲಿ ಹಾಗೂ ಬೆಳೆಸುವಲ್ಲಿ ಬಂಗಾರಪ್ಪ ಅವರ ಪಾತ್ರವೂ ಇದೆ ಎಂದು ಡಿ.ಕೆ. ಶಿವಕುಮಾರ್ ಹಲವು ಬಾರಿ ಸ್ಮರಿಸಿಕೊಂಡಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮಧು ಬಂಗಾರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಗುರುವಿನ ಋಣ ಸಂದಾಯ ಮಾಡಿದ್ದಾರೆಂಬ ವಿಶ್ಲೇಷಣೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರತ್ ಪುರದಾಳ್

contributor

Similar News